‘ನನ್ನ ಜೀವನ ನನ್ನ ಸ್ವಚ್ಛನಗರ’ ವಸ್ತು ಮರು ಪಡೆಯುವ ಕೇಂದ್ರಕ್ಕೆ ಚಾಲನೆ

0

ಊರನ್ನು ಸ್ವಚ್ಛ ನಗರವನ್ನಾಗಿಸಲು ಸಹಕಾರ ನೀಡಿ – ಮಧು ಎಸ್ ಮನೋಹರ್

ಪುತ್ತೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಯೋಜನೆಗೆ ಮರುಬಳಕೆ ವಸ್ತುಗಳನ್ನು ಪಡೆಯುವ ಸೌಲಭ್ಯ ಕೇಂದ್ರವನ್ನು ಮೇ 20ರಂದು ಪುತ್ತೂರು ನಗರಸಭೆಯ ಬಳಿ ಇರುವ ಕಟ್ಟಡದಲ್ಲಿ ಚಾಲನೆ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.


ಕಟ್ಟಡದಲ್ಲಿ ದಿನಪತ್ರಿಕೆ, ಹಳೆಯ ಬಟ್ಟೆ, ಪುಸ್ತಕ, ಎಲೆಕ್ಟ್ರಾನಿಕ್ ವಸ್ತುಗಳು, ಅಡಿಕೆ ವಸ್ತುಗಳು ಹಾಕಲೆಂದು ಪ್ರತ್ಯೇಕ ಬಿನ್‌ಗಳನ್ನು ಇರಿಸಲಾಗಿದ್ದು, ಸ್ಥಳೀಯ ಸಾರ್ವಜನಿಕರ ಮೂಲಕ ಹಳೆಯ ಬಟ್ಟೆಗಳನ್ನು ಬಿನ್‌ಗಳಿಗೆ ಹಾಕುವ ಮೂಲಕ ವಸ್ತು ಮರು ಪಡೆಯುವ ಕೇಂದ್ರಕ್ಕೆ ಚಾಲನೆ ನೀಡಲಾಯಿತು.


ಊರನ್ನು ಸ್ವಚ್ಛನಗರವನ್ನಾಗಿಸಲು ಸಹಕಾರ ನೀಡಿ :
ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಸ್ವಚ್ಛ ಭಾರತ್ ಯೋಜನೆಯ 2ನೇ ಹಂತವಾಗಿ ‘ ನನ್ನ ಜೀವನ, ನನ್ನ ಸ್ವಚ್ಛನಗರ’ ಮೇ 20 ರಿಂದ ಜೂ.5ರ ತನಕ ಅಭಿಯಾನ ನಡೆಯಲಿದೆ. ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ 6 ಕೇಂದ್ರಗಳಲ್ಲಿ ಆರ್‌ಆರ್‌ಆರ್ ಸೆಂಟರ್‌ಗಳನ್ನು ಉದ್ಘಾಟಿಸಲಾಗುತ್ತದೆ. ಇಲ್ಲಿ ರೆಡ್ಯೂಸ್, ರೀ ಯೂಸ್, ರಿಸೈಕಲ್ ಮಾಡುವ ವಸ್ತುಗಳನ್ನು ಸ್ವೀಕರಿಸಲಾಗುತ್ತದೆ. ಮುಂದಿನ 15 ದಿನಗಳ ಕಾಲ ನಗರಸಭೆ ವ್ಯಾಪ್ತಿಯ ಆರು ಕಡೆಗಳಲ್ಲಿ ಪ್ರತಿಯೊಬ್ಬ ನಾಗರಿಕರು ಸೇರಿಕೊಂಡು ವಸ್ತುಗಳನ್ನು ಸೆಂಟರ್‌ಗಳಿಗೆ ತಲುಪಿಸಿದರೆ ನಗರಸಭೆಯಿಂದ ಅದನ್ನು ರಿಯೂಸ್ ಮಾಡುವ ವ್ಯವಸ್ಥೆ ಕಲ್ಪಿಸುತ್ತೇವೆ. ಇದರಿಂದ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ತ್ಯಾಜ್ಯದ ಪ್ರಮಾಣ ಕಡಿಮೆ ಮಾಡಲು ಊರನ್ನು ಸ್ವಚ್ಛ ನಗರವನ್ನಾಗಿ ಮಾಡಲು ಸಹಕಾರ ನೀಡುವಂತೆ ಅವರು ವಿನಂತಿಸಿದರು. ನಗರಸಭೆ ಸದಸ್ಯ ಯೂಸೂಪ್ ಡ್ರೀಮ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ್, ವರಲಕ್ಷ್ಮೀ, ಕಚೇರಿ ಮೆನೇಜರ್ ಪಿಯುಸ್ ಡಿಸೋಜ, ಸಮುದಾಯ ವ್ಯವಹಾರ ಅಧಿಕಾರಿ ಕರುಣಾಕರ, ಮೇದಿನಿ ಸಂಸ್ಥೆಯ ಮಾಲಕರು ಸಹಿತ ಸ್ಥಳೀಯ ಸಾರ್ವಜನಿಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here