





ಪುತ್ತೂರು: ಹಿಂದುತ್ವದ ಸಂಘಟನೆ, ಹಿಂದುಗಳ ಕಷ್ಟಕ್ಕೆ ಸ್ಪಂದಿಸುವುದು, ಧಾರ್ಮಿಕ ವಿಚಾರದಲ್ಲಿ, ಶೈಕ್ಷಣಿಕ, ಸಾಮಾಜಿಕವಾಗಿ ಯಾರು ದುರ್ಬಲರಿದ್ದಾರೋ ಅವರ ಸೇವೆ ಮತ್ತು ಬಡವರ ಸೇವೆ ಮಾಡುವ ಸಂಕಲ್ಪ ಇಟ್ಟುಕೊಂಡೇ ಪುತ್ತಿಲ ಪರಿವಾರವನ್ನು ಘೋಷಣೆ ಮಾಡಲಾಗಿದೆ. ಈ ಕುರಿತು ಯಾರಿಗೂ ಸಂಶಯ ಬೇಡ. ನಮ್ಮದು ಯಾವ ಪರಿವಾರಕ್ಕೂ ಪರ್ಯಾಯವಾದ ಸಂಘಟನೆಯಲ್ಲ ಎಂದು ಪುತ್ತಿಲ ಪರಿವಾರ ಸಂಘಟನೆಯ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಹೇಳಿದ್ದಾರೆ. ’ಸುದ್ದಿ’ಯೊಂದಿಗೆ ಮಾತನಾಡಿದ ಅವರು, ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡುವ ಕಾರ್ಯಕರ್ತರನ್ನು ಸಂಘಟಿಸುವ ಮತ್ತು ಕಾರ್ಯಕರ್ತರಿಗೆ ಬೆನ್ನೆಲುಬಾಗಿ ಪುತ್ತಿಲ ಪರಿವಾರ ಕೆಲಸ ಮಾಡಲಿದೆ. ಶಾಂತಿ, ನೆಮ್ಮದಿ ಮತ್ತು ಸೇವೆಗೆ ಹಿಂದುತ್ವದ ಆಧಾರದಲ್ಲಿ ಕೆಲಸ ಮಾಡಲಿದೆ. ಈ ನಿಟ್ಟಿನಲ್ಲಿ ಮುಂದಿನ ದಿನ ತಾಲೂಕಿನಾದ್ಯಂತ ಪ್ರವಾಸ ಕೈಗೊಳ್ಳಲಾಗುತ್ತದೆ. ಕಾರ್ಯಕರ್ತರ ಸೂಚನೆ ಪರಿಗಣಿಸಿ, ಕಾರ್ಯಕರ್ತರ ನಿರ್ಧಾರದ ಮೇಲೆ ಕೆಲಸ ಕಾರ್ಯ ನಡೆಯಲಿದೆ ಎಂದ ಅವರು ಈಗಾಗಲೇ ಮಹಾಲಿಂಗೇಶ್ವರ ದೇವರ ರಕ್ಷಣೆಯಿಂದ ಯಶಸ್ವಿಯಾಗಿದ್ದೇವೆ. ಕಾರ್ಯಕರ್ತರ ಸೇವೆಯನ್ನು ಮಹಾಲಿಂಗೇಶ್ವರ ದೇವರಿಗೆ ಅರ್ಪಣೆ ಮಾಡಿದ್ದೇವೆ. ಅದೇ ರೀತಿ ಯಾರಲ್ಲೂ ಒಂದು ಚೂರೂ ಸಂಶಯ ಬೇಡ. ಇದು ಯಾವ ಪರಿವಾರಕ್ಕೂ ಪರ್ಯಾಯವಾದ ಸಂಘಟನೆಯಲ್ಲ. ಧಾರ್ಮಿಕ ಮತ್ತು ಸಮಾಜ ಸೇವೆಗಾಗಿ ಹಾಗೂ ಕಾರ್ಯಕರ್ತರ ತೀರ್ಮಾನಕ್ಕೆ ಬದ್ದವಾಗಿ ಕೆಲಸ ಮಾಡಲಿದ್ದೇವೆ. ಎಲ್ಲಾ ಕಾರ್ಯಕರ್ತರಿಗೂ ನಾಯಕತ್ವ ನೀಡುವ ಕೆಲಸ ಆಗಲಿದೆ. ಈಗಾಗಲೇ ಅರುಣ್ ಕುಮಾರ್ ಪುತ್ತಿಲ ಅವರ ವೀರೋಚಿತ ಗೆಲುವಿಗಾಗಿ ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಗ್ರಾಮ ಗ್ರಾಮಗಳಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯುತ್ತಿದೆ. ಇದರ ಜೊತೆಗೆ ಪರಿವಾರದ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಸನ್ನ ಕುಮಾರ್ ಮಾರ್ತ ಅವರು ಹೇಳಿದರು.




            




