ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷದ ಕೊನೆಯ ಜಾತ್ರೆ ಪತ್ತನಾಜೆ ಜಾತ್ರೆಯು ಹಾಗೂ ಅಶ್ವತ್ಥೋಪನಯನ ಕಾರ್ಯಕ್ರಮ ಮೇ 25 ರಂದು ಕ್ಷೇತ್ರದ ತಂತ್ರಿಗಳಾದ ಬ್ರಹ್ಮ ಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು, ಅಶ್ವತ್ಥೋಪನಯನದ ಅಂಗವಾಗಿ ಮೇ 24 ರಂದು ರಾತ್ರಿ ಅಶ್ವತ್ಥ ಕಟ್ಟೆಯ ವಾಸ್ತುಪೂಜೆ ನಡೆಯಿತು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಅಭಿವೃದ್ಧಿ ಸಮಿತಿಯ ಸಂಚಾಲಕ ವೇ.ಮೂ. ದಿನೇಶ್ ಮರಡಿತ್ತಾಯ ಗುಮ್ಮಟೆಗದ್ದೆ, ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಸಮಿತಿಯ ಪದಾಽಕಾರಿಗಳು, ಸದಸ್ಯರು, ಭಕ್ತಾಭಿಮಾನಿಗಳು ಪಾಲ್ಗೊಂಡರು. ಪತ್ತನಾಜೆ ಜಾತ್ರೆ ಅಂಗವಾಗಿ ಬೆಳಗ್ಗಿನಿಂದ ಬಲಿವಾಡು ಶೇಖರಣೆ ಕಾರ್ಯ ನಡೆಯಿತು.
ಮೇ 25 ರಂದು ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ ನಡೆದು ಮಹಾಪೂಜೆಯಾಗಿ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ ಭಜನೆ, ಮಹಾಪೂಜೆಯಾಗಿ ದೇವರ ಉತ್ಸವ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದ ಕ್ಷೇತ್ರದ ವಠಾರದಲ್ಲಿರುವ ಅಶ್ವತ್ಥ ವೃಕ್ಷಕ್ಕೆ ಅಶ್ವತ್ಥೋಪನಯನ, ವಿವಾಹಾಂತ ಸಂಸ್ಕಾರ ಕ್ರಿಯಾ ಭಾಗ ಮತ್ತು ಅಶ್ವತ್ಥ ಕಲ್ಪೋಕ್ತ ಪೂಜೆ ನೆರವೇರಲಿದೆ.