ಕಾವು: ಕರ್ನಾಟಕ ಆಗ್ರೋ ಕೆಮಿಕಲ್ಸ್ (ಮಲ್ಟಿಪ್ಲೆಕ್ಸ್) ಬೆಂಗಳೂರು ಮತ್ತು ಕರಾವಳಿ ಎಂಟರ್‌ಪ್ರೈಸಸ್ ಸುಳ್ಯ ಇವರ ಸಹಕಾರದೊಂದಿಗೆ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಸಮಗ್ರ ಕೃಷಿ ಕಾರ್ಯಾಗಾರವು ಅ.9ರಂದು ಸಂಘದ ಶಿವಸದನ ಸಭಾಭವನದಲ್ಲಿ ನಡೆಯಿತು.
ಸಭಾಧ್ಯಕ್ಷತೆ ವಹಿಸಿದ್ದ ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘದ ಸದಸ್ಯರ ಮತ್ತು ಕೃಷಿಕರ ಅನುಕೂಲಕ್ಕಾಗಿ ಸಂಘದಲ್ಲಿ ಸಮಗ್ರ ಕೃಷಿ ಕಾರ್ಯಾಗಾರದ ಮೂಲಕ ಕೃಷಿ ಮಾಹಿತಿಯನ್ನು ಆಯೋಜಿಸಿದ್ದೇವೆ, ಜತೆಗೆ ಕರ್ನಾಟಕ ಆಗ್ರೋ ಕೆಮಿಕಲ್ಸ್‌ನವರ ಸಹಕಾರದೊಂದಿಗೆ ಸದಸ್ಯರ ಮನೆಗೆ ಸ್ಥಳ ಭೇಟಿಯನ್ನು ಮಾಡಿ ಮಣ್ಣು ಪರೀಕ್ಷೆಯನ್ನು ನಡೆಸಿಕೊಡಲಿದ್ದೇವೆ ಸಂಘದ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಸಮಗ್ರ ಕೃಷಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ಆಗ್ರೋ ಕೆಮಿಕಲ್ಸ್‌ನ ಮಾರುಕಟ್ಟೆ ಮುಖ್ಯಸ್ಥ ಡಾ. ಎಂ ನಾರಾಯಣ ಸ್ವಾಮಿಯವರು ಅಡಿಕೆ, ತೆಂಗು, ಕಾಳುಮೆಣಸು, ಕೊಕ್ಕೋ, ರಬ್ಬರ್ ಬೆಳೆಯ ಬೇಸಾಯ ಕ್ರಮ ಹಾಗೂ ರೋಗ ಕೀಟಗಳ ನಿರ್ವಹಣೆಯ ಬಗ್ಗೆ ಸಮಗ್ರ ಮಾಹಿತಿ ಹಾಗೂ ಹಳದಿರೋಗ, ಎಲೆಚುಕ್ಕಿರೋಗ, ಮಣ್ಣು ಪರೀಕ್ಷೆಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮ ಆಯೋಜನೆಗೆ ಸಹಕರಿಸಿದ ಕೆವಿಪಿ ಶಿವಮೊಗ್ಗ ಬ್ರಾಂಚ್‌ನ ಎ.ಎನ್ ಕೃಷ್ಣಮೂರ್ತಿಯವರಿಗೆ ಶಾಲು ಹಾಕಿ ಗೌರವಿಸಲಾಯಿತು.
ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೇಶವಮೂರ್ತಿ ಪಿ.ಜಿ ರವರು ಸ್ವಾಗತಿಸಿ, ಕರಾವಳಿ ಎಂಟರ್‌ಪ್ರೈಸಸ್‌ನ ಚೆನ್ನಪ್ಪ ಕುಕ್ಕುಜೆಯವರು ವಂದಿಸಿದರು. ಸಂಘದ ನಿರ್ದೇಶಕ ನಹುಷ ಭಟ್, ಸಿಬ್ಬಂದಿಗಳು ಮತ್ತು ಸಂಘದ ಸದಸ್ಯರುಗಳು, ಗ್ರಾಹಕರು ಭಾಗವಹಿಸಿದ್ದರು.