ಪುತ್ತೂರು: ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ಬಂದಿದೆ. ಚುನಾವಣೆ ಪೂರ್ವದಲ್ಲಿ ಐದು ಉಚಿತ ಭರವಸೆ ನೀಡುವ ಮೂಲಕ ಸರ್ಕಾರ ಬಂದಿದೆ. ಸರಕಾರ ಬಂದ 24 ಗಂಟೆಯಲ್ಲಿ ಗ್ಯಾರಂಟಿ ಯೋಜನೆ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದರು. 20 ದಿನ ಕಳೆದರೂ ಯಾವುದೇ ಯೋಜನೆ ಬಗ್ಗೆ ಮಾತುಗಳಿಲ್ಲ. ಯಾವುದೇ ಮಾನದಂಡ ಇಲ್ಲದೇ ಭಾಗ್ಯಗಳು ಸಿಗುತ್ತೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದೀಗ ಇವುಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಕಟೀಲ್ ಜನ ಆಶ್ವಾಸನೆ ನಂಬಿ ಮತ ಹಾಕಿದ್ದಾರೆ, ಮತದಾರ ಆಕ್ರೋಶದಲ್ಲಿ ಇದ್ದಾನೆ. ಕರೆಂಟ್ ಬಿಲ್ ಕಲೆಕ್ಷನ್ ಗೆ ಬಂದ ಸಿಬ್ಬಂದಿ ಮೇಲೆ ಹಲ್ಲೆಗಳಾಗ್ತಿವೆ ಬಿಲ್ ಕಟ್ಟಬಾರದು ಅಂತಾನೇ ನಾನು ಕರೆ ಕೊಡ್ತೀನಿ. ಯಾರೂ ಬಿಲ್ ಕಟ್ಟಲೇ ಬಾರದು. ಜನರಿಗೆ ತೊಂದರೆಯಾದ್ರೆ ನಾವು ಜನರ ಪರವಾಗಿ ನಿಲ್ತೇವೆ. ನೌಕರರಿಗೆ ಹಲ್ಲೆಯಾದ್ರೆ ಸರ್ಕಾರವೇ ಹೊಣೆ. ಕಾಂಗ್ರೆಸ್ ನ ರಾಜನೀತಿಯಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಅವರು ಹೇಳಿದ್ದಾರೆ.
ಅಶ್ವಥ್ ನಾರಾಯಣ್ ಯಾವುದೋ ಸಂಧರ್ಭದಲ್ಲಿ ಹೇಳಿದ್ದ ಮಾತಿಗೆ ಕ್ಷಮೆ ಕೂಡ ಕೇಳಿದ್ದಾರೆ. ಈಗ ಅವರ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆ ಇಟ್ಟುಕೊಂಡು ಕೇಸ್ ಮಾಡಿದ್ದಾರೆ. ಬಂಟ್ವಾಳದ ಮಾಣಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದವರ ಬದಲು ಹಲ್ಲೆಗೆ ಒಳಗಾದವರ ಮೇಲೆ ಕೇಸ್ ಹಾಕಿದ್ದಾರೆ. ಕಾಂಗ್ರೆಸ್ ಗೂಂಡಾಗಿರಿ ಹಾಗೂ ದ್ವೇಷದ ರಾಜಕಾರಣದ ಮೂಲಕ ವಿರೋಧ ಪಕ್ಷವನ್ನ ಮೆಟ್ಟಿ ನಿಲ್ಲಬಹುದು ಅಂದುಕೊಂಡಿದೆ. ಸಿದ್ದರಾಮಯ್ಯರ ತಾತಾ ಮುತ್ತಾತನೂ ಈ ಕೆಲಸ ಮಾಡಿ ಯಶಸ್ವಿಯಾಗಿಲ್ಲ.
ಸಂವಿಧಾನಿಕವಾಗಿ ಸರ್ಕಾರ ಕೆಲಸ ಮಾಡಬೇಕು, ಅದು ಬಿಟ್ಟು ದ್ವೇಷ ರಾಜಕಾರಣ ಬೇಡ ಎಂದ ಅವರು ಈ ಸರ್ಕಾರ ಹೆಚ್ಚು ದಿನ ಬಾಳಲ್ಲ, ಉಳಿಯೋದಿಲ್ಲ ಎಂದು ಭವಿಷ್ಯ ನುಡಿದರು. ಸಿದ್ದರಾಮಯ್ಯ ಸರ್ಕಾರ 20 ಸಾವಿರ ಕೋಟಿ ಟೆಂಡರ್ ವಾಪಾಸ್ ಪಡೆದಿದೆ. 80% ಕಮಿಷನ್ ಗೆ ಡಿಮ್ಯಾಂಡ್ ಇಡಲು ಈ ರೀತಿ ಮಾಡಿದ್ದಾರೆ. ಪರ್ಸೆಂಟೇಜ್ ಗಾಗಿ ಕಾಮಗಾರಿ ನಿಲ್ಲಿಸಿದ್ದಾರೆ, ಇದು 80% ಸರ್ಕಾರ, ನಮ್ಮ ಕಾಲಘಟ್ಟದ ಯಾವುದು ಬೇಕಾದ್ರೂ ತನಿಖೆ ಅಗಲಿಆದರೆ 20 ಸಾವಿರ ಕೋಟಿ ಬಗ್ಗೆ ಬಹಿರಂಗ ಪಡಿಸಿ ಎಂದು ಕಟೀಲ್ ಸರ್ಕಾರವನ್ನು ಆಗ್ರಹಿಸಿದ್ದಾರೆ.