ಪುತ್ತೂರು:ಕಾಡಾನೆ ದಾಳಿಗೆ ಅಮಾಯಕರಿಬ್ಬರು ಬಲಿಯಾದ ನಂತರದ ಬೆಳವಣಿಗೆಯಲ್ಲಿ ಕಾಡಾನೆ ಸೆರೆ ವಿಚಾರದಲ್ಲಿ ಅರಣ್ಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣದ ಆರೋಪಿಯೋರ್ವನಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಾಡಾನೆ ದಾಳಿಗೆ ಇಬ್ಬರು ಬಲಿಯಾದ ಬಳಿಕ ಕೊಂಬಾರು ಗ್ರಾಮದ ಮಂಡೆಕರ ಅರಣ್ಯ ಪ್ರದೇಶದಲ್ಲಿ ಫೆ.23ರಂದು ಸಂಜೆ ಕಾಡಾನೆಯೊಂದನ್ನು ಸೆರೆ ಹಿಡಿಯಲಾಗಿತ್ತು. ಅದನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಅರಣ್ಯ ಇಲಾಖೆಯವರು ಮುಂದಾದಾಗ, ಗುಂಪೊಂದು ಕಾಡಾನೆಯಿದ್ದ ಲಾರಿಗೆ ತಡೆಯೊಡ್ಡಿ ಹಿಡಿದಿರುವ ಆನೆಯನ್ನು ಇಲ್ಲಿಯೇ ನಿಲ್ಲಿಸಿ, ಎಲ್ಲ ಕಾಡಾನೆಗಳನ್ನು ಸೆರೆ ಹಿಡಿದು ಒಟ್ಟಿಗೇ ಎಲ್ಲವನ್ನೂ ಕೊಂಡು ಹೋಗಿ ಎಂದು ಹೇಳಿ ವಾಗ್ವಾದಕ್ಕಿಳಿದು ಅರಣ್ಯ ಹಾಗೂ ಪೊಲೀಸ್ ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿ ಅರಣ್ಯ ಇಲಾಖೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಕಡಬ ಪೊಲೀಸರು 17 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 13 ಮಂದಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದರು. ಇದೀಗ ಕೊಂಬಾರು ಮಿತ್ತಬೈಲು ನಿವಾಸಿ ಮನೋಜ್ ಕುಮಾರ್ ಎಂಬವರಿಗೆ ಪುತ್ತೂರು ಐದನೆ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ಹರೀಶ್ ಶೆಟ್ಟಿ, ರಾಕೇಶ್ ಬಲ್ನಾಡು ವಾದಿಸಿದ್ದರು.