ಪುತ್ತೂರು: ಬ್ಯಾಂಕ್ ಆಫ್ ಬರೋಡಾ ಪ್ರಾಯೋಜಕತ್ವದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ – ಕೆದಂಬಾಡಿ ಗ್ರಾಮ ಇದರ ಆಶ್ರಯದಲ್ಲಿ ರಬ್ಬರ್ ತೋಟಕ್ಕೆ ಕೋಪರ್ ಒಕ್ಸಿಕ್ಲೋರೈಡ್ ಸಿಂಪರಣೆ ಡ್ರೋನ್ ಪ್ರಾತ್ಯಕ್ಷಿಕೆ ಮಾಹಿತಿ ಕಾರ್ಯಾಗಾರ ಮೇ 29 ರಂದು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಿತು. ಕೆಯ್ಯೂರು ಮತ್ತು ಕೆದಂಬಾಡಿ ಗ್ರಾಮಗಳ ರಬ್ಬರ್ ಕೃಷಿಕರಲ್ಲದೇ ಇತರ ಗ್ರಾಮಗಳ ಕೃಷಿಕರೂ ಈ ಪ್ರಾತ್ಯಕ್ಷಿಕೆಯ ಪ್ರಯೋಜನ ಪಡೆದುಕೊಂಡರು.
ಕೃಷಿಕರೊಂದಿಗೆ ಬ್ಯಾಂಕ್ ಆಫ್ ಬರೋಡಾ ಇದೆ – ದೇವಿಪ್ರಸಾದ್ ಶೆಟ್ಟಿ
ಬೆಳಿಗ್ಗೆ ಬ್ಯಾಂಕ್ ಆಫ್ ಬರೋಡ ಮಂಗಳೂರು ಜಿಲ್ಲಾ ಕ್ಷೇತ್ರ ಪ್ರಾದೇಶಿಕ ವ್ಯವಸ್ಥಾಪಕ ದೇವಿಪ್ರಸಾದ್ ಶೆಟ್ಟಿ ಕಾರ್ಯಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ʻಕೃಷಿಕರು ವೈಜ್ಞಾನಿಕ ಮಾಹಿತಿ ನೀಡುವುದರ ಮೂಲಕ ವರ್ಷದ ಎಲ್ಲಾ ಕಾಲದಲ್ಲಿಯೂ ಕೃಷಿಯಿಂದ ಆದಾಯ ಬರುವ ಹಾಗೆ ಮಾಡಬೇಕು. ಇದಕ್ಕಾಗಿ ಮಾಹಿತಿ ಜೊತೆಗೆ ಕೃಷಿಕರಿಗೆ ಯಂತ್ರೋಪಕರಣ ಖರೀದಿ ಸೇರಿದಂತೆ ವೈಜ್ಞಾನಿಕ ವಿಧಾನಗಳ ಅಳವಡಿಕೆಗೆ ಬ್ಯಾಂಕ್ ಆಫ್ ಬರೋಡಾ ದಿಂದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು. ಬಹು ಆಯಾಮದಲ್ಲಿ ಕೃಷಿಯಿಂದ ಆದಾಯ ಹೇಗೆ ಪಡೆಯಬಹುದೆಂಬುದಕ್ಕೆ ಕಡಮಜಲು ಸುಭಾಸ್ ರೈಯವರು ಓರ್ವ ಮಾದರಿ ಕೃಷಿಕರಾಗಿದ್ದಾರೆʼ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ರೈತರಿಗೆ ಅನುಕೂಲವಾಗಲಿ – ಎ.ಕೆ. ಜಯರಾಮ ರೈ
ಸಭಾಧ್ಯಕ್ಷತೆ ವಹಿಸಿದ್ದ ಕೆಯ್ಯೂರು ಕೆದಂಬಾಡಿ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಎ.ಕೆ. ಜಯರಾಮ ರೈ ಮಾತನಾಡಿ ʻರಬ್ಬರ್ ಕೃಷಿಯಲ್ಲಿ ಈ ವಿಧಾನ ಪ್ರಥಮ. ನಮಗೆಲ್ಲಾ ಇದರ ಅನುಭವವಿಲ್ಲ. ಇದರಿಂದ ರೈತರಿಗೆ ಅನುಕೂಲವಾಗಲಿ. ಎರಡು ದಿನಗಳ ಕಾಲ ಸಿಂಪರಣೆ ಪ್ರಾತ್ಯಕ್ಷಿಕೆ ನಡೆಯಲಿದೆ. ಕೆಯ್ಯೂರು ಕೆದಂಬಾಡಿಯಲ್ಲಿ 32 ಮಂದಿ ಹೆಸರು ನೋಂದಾಯಿಸಿದ್ದಾರೆʼ ಎಂದರು.
ʻಬ್ಯಾಂಕ್ ಆಫ್ ಬರೋಡಾʼ ದಿಂದ ನಿಸ್ವಾರ್ಥ ಸೇವೆ – ಸಚಿನ್ ಹೆಗ್ಡೆ
ಮುಖ್ಯ ಅತಿಥಿಗಳಾಗಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆಯವರು ಮಾತನಾಡಿ, ʻಕೃಷಿಕರಿಗೋಸ್ಕರ, ಜನರಿಗೆ ಮಾಹಿತಿಗೋಸ್ಕರ, ಗ್ರಾಮೀಣ ಅಭಿವೃದ್ಧಿ ಗಾಗಿ ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನ ಸಹಾಯ ಮಾಡುತ್ತಿದೆ. ಯಾವುದೇ ಸ್ವಾರ್ಥವಿಲ್ಲದೇ, ಲಾಭವಿಲ್ಲದೆ ಸಾಮಾಜಿಕ ಸೇವೆಯ ದೃಷ್ಟಿಯಿಂದ ಬ್ಯಾಂಕ್ ಆಫ್ ಬರೋಡ ಕೆಲಸ ಮಾಡುತ್ತಿದೆ. ಕೇವಲ ಕೃಷಿಕರಿಗೆ ಮಾತ್ರವಲ್ಲದೇ ಸಾಮಾಜಿಕವಾಗಿ ಅಗತ್ಯವಾಗಿರುವ ಸ್ವ-ಉದ್ಯೋಗ, ಆರೋಗ್ಯ ತಪಾಸಣೆಯಂತಹ ಮಾಹಿತಿ, ಶಿಬಿರ, ತರಬೇತಿಯನ್ನೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಾಡುತ್ತಿದೆ. ಕೃಷಿಕರು ಆದಷ್ಟು ಬ್ಯಾಂಕ್ ಆಫ್ ಬರೋಡಾ ದಲ್ಲಿ ವ್ಯವಹರಿಸುವುದರೊಂದಿಗೆ ಬ್ಯಾಂಕ್ ಬೆಳವಣಿಗೆಯಲ್ಲಿ ಕೃಷಿಕರು ಸಹಕರಿಸುವಂತೆʼ ಕೋರಿದರು.
ವೈಜ್ಞಾನಿಕ ವಿಧಾನ ಅನಿವಾರ್ಯವಾಗಿದೆ – ಡಿ. ಸುರೇಶ್
ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಪ್ರಾದೇಶಿಕ ಕಚೇರಿಯ ರಬ್ಬರ್ ಉತ್ಪಾದನಾ ಆಯುಕ್ತರಾದ ಡಿ. ಸುರೇಶ್ ಕುಮಾರ್ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟು ʻಎಲೆ ಉದುರುವುದರಿಂದ ರಬ್ಬರ್ ಗಿಡದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗುತ್ತದೆ. ಒಂದು ಹೆಕ್ಟೇರ್ ನಲ್ಲಿ 2 ಕ್ವಿಂಟಾಲ್ ನಷ್ಟು ಕಡಿಮೆ ಇಳುವರಿಯಾಗುತ್ತಿದೆ. ಹಾಗಾಗಿ ಕೃಷಿಕರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಡ್ರೋನ್ ಸ್ಪ್ರೇ ಆಧುನಿಕ ವಿಧಾನವಾದರೂ ಇಲ್ಲಿ ರೈತರು ಸಾಕಷ್ಟು ತಾಂತ್ರಿಕ ಮಾಹಿತಿಗಳನ್ನು ಪಡೆದಿರಬೇಕಾಗುತ್ತದೆʼ ಎಂದರು. ರಬ್ಬರ್ ಮಂಡಳಿ ಪ್ರಾದೇಶಿಕ ಕಚೇರಿಯ ಸಹಾಯಕ ಅಭಿವೃದ್ಧಿ ಅಧಿಕಾರಿ ಶೋಭಾನ ಉಪಸ್ಥಿತರಿದ್ದರು.
ಹೋರಾಟದ ಮೂಲಕ ಪ್ರತಿಷ್ಠಾನ ಉಳಿದಿದೆ – ಕಡಮಜಲು ಸುಭಾಸ್ ರೈ
ಡ್ರೋನ್ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕಡಮಜಲು ಸುಭಾಸ್ ರೈಯವರು, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ʻದಕ್ಷಿಣ ಕನ್ನಡ ಜಿಲ್ಲೆಯ ರೈತರಿಗಾಗಿ ಹೋರಾಟದ ಮೂಲಕ ಪ್ರತಿಷ್ಟಾನವನ್ನು ಉಳಿಸಿಕೊಂಡಿದ್ದೇವೆ. ರಬ್ಬರ್ ಎಲೆ ಉದುರುವ ರೋಗದಿಂದ ರಬ್ಬರ್ ಬೆಳೆಗಾರರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಇಳುವರಿ ಕಡಿಮೆಯಾಗುತ್ತಿದೆ. ಇದಕ್ಕೆ ಪರಿಣಾಮಕಾರಿಯಾದ ಕೋಪರ್ ಒಕ್ಸಿಕ್ಲೋರೈಡ್ನ್ನು ರಬ್ಬರ್ ಗಿಡಗಳಿಗೆ ಸಿಂಪರಣೆ ಈ ಮೊದಲು ಕಷ್ಟವಾಗಿತ್ತು. ಆದರೆ ಡ್ರೋನ್ ಸಿಂಪರಣೆ ಈ ಸಮಸ್ಯೆ ಪರಿಹರಿಸಬಲ್ಲುದಾಗಿದೆ. ರಬ್ಬರ್ ಕೃಷಿಕರಿಗೆ ಭಾರೀ ಸಹಕಾರ ನೀಡುತ್ತಿರುವ ರಬ್ಬರ್ ಮಂಡಳಿಗೆ ಅಭಿನಂದನೆಯಿದೆ. ಅದೇ ರೀತಿ ಕೃಷಿಕರಲ್ಲಿ ನವಚೈತನ್ಯ ಹುಟ್ಟಿಸಲು ಸಾಕಷ್ಟು ಸಹಕಾರ, ಸಹಾಯಧನ ನೀಡುತ್ತಿರುವ ಬ್ಯಾಂಕ್ ಆಫ್ ಬರೋಡಾʼ ಸಂಸ್ಥೆಗೂ ನಮ್ಮ ಕೃತಜ್ಞತೆಯಿದೆʼ ಎಂದರು.
ರೈತರು ಪ್ರಯೋಜನ ಪಡೆದುಕೊಳ್ಳಿ – ವಿಜಯ ಕುಮಾರ್ ರೈ ಕೋರಂಗ
ಸ್ವಾಗತಿಸಿ ನಿರೂಪಿಸಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಕೆದಂಬಾಡಿ ಗ್ರಾಮ ಸಮಿತಿಯ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರು ಮಾತನಾಡಿ ʻ೮ ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾರ್ಯಕ್ರಮಗಳಿಗೆ ಇದೀಗ ಮತ್ತೆ ʻಬ್ಯಾಂಕ್ ಆಫ್ ಬರೋಡಾʼ ಪ್ರಾಯೋಜಕತ್ವದೊಂದಿಗೆ ಪುನಃಶ್ಚೇತನ ದೊರಕಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕುʼ ಎಂದರು.
ಡ್ರೋನ್ ಪ್ರಾತ್ಯಕ್ಷಿಕೆಯನ್ನು ನಿರ್ವಹಣೆ ಮಾಡಿದ ಕರ್ನಾಟಕ ಆಗ್ರೋ ಕೆಮಿಕಲ್ಸ್ ನ ಡೀಲರ್ ಲೋಕೇಶ್ ಪೆರ್ಲಂಪಾಡಿ ಡ್ರೋನ್ ಸಿಂಪರಣೆಯ ಬಗ್ಗೆ ಮಾಹಿತಿ ನೀಡಿದರು.
ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಕೆದಂಬಾಡಿ ಗ್ರಾಮ ಸಮಿತಿಯ ಕೋಶಾಧಿಕಾರಿ ಬಾಲಕೃಷ್ಣ ಚೌಟ ಪಟ್ಟೆತ್ತಡ್ಕ, ಸಂತೋಷ್ ರೈ ಇಳಂತಾಜೆ, ಕರುಣಾಕರ ರೈ ಕೋರಂಗ, ಒಳಮೊಗ್ರು ಗ್ರಾಮ ಸಮಿತಿಯ ಅನಿಲ್ ರೈ, ಅರಿಯಡ್ಕ ಗ್ರಾಮ ಸಮಿತಿಯ ನಿಯೋಜಿತ ಅಧ್ಯಕ್ಷ ಡಿ. ಅಮ್ಮಣ್ಣ ರೈ, ಕೆಯ್ಯೂರು ಗ್ರಾಮ ಸಮಿತಿಯ ನಿಯೋಜಿತ ಅಧ್ಯಕ್ಷ ರಮೇಶ್ ರೈ, ವಿಶ್ವನಾಥ ಪೂಜಾರಿ, ಹಿರಿಯರಾದ ಬಾರಿಕೆ ನಾರಾಯಣ ರೈ ಅತಿಥಿಗಳನ್ನು ಹೂ ನೀಡಿ ಗೌರವಿಸಿದರು.
ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು ಪದಾಧಿಕಾರಿಗಳು, ಪ್ರಗತಿಪರ ಕೃಷಿಕರಾದ ವಾಸುಪೂಜಾರಿ ಗುಂಡ್ಯಡ್ಕ ಸೇರಿದಂತೆ ಹಲವು ಕೃಷಿಕರು ಪಾಲ್ಗೊಂಡರು. ಸಂಜೆಯವರೆಗೂ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಪ್ರಾತ್ಯಕ್ಷಿಕೆ ನಡೆದಿದ್ದು, ಹಲವಾರು ಕೃಷಿಕರು ಇದರ ಸದುಪಯೋಗ ಪಡೆದುಕೊಂಡರು.
ಕರ್ನಾಟಕದಲ್ಲಿ ಪ್ರಥಮ ಪ್ರಾತ್ಯಕ್ಷಿಕೆ
ಕರ್ನಾಟಕ ಆಗ್ರೋ ಕೆಮಿಕಲ್ಸ್ ಬೆಂಗಳೂರಿನವರು ನಡೆಸುವ ರಬ್ಬರ್ ಕೃಷಿಗೆ ಕೋಪರ್ ಒಕ್ಸಿಕ್ಲೋರೈಡ್ ಸಿಂಪರಣೆ ಡ್ರೋನ್ ಪ್ರಾತ್ಯಕ್ಷಿಕೆ ಕರ್ನಾಟಕ ರಾಜ್ಯದಲ್ಲಿ ಇದು ಪ್ರಥಮವಾಗಿದೆ. ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಎರಡು ದಿನ ಮತ್ತು ಕೆಯ್ಯೂರು ಹಾಗೂ ಕೆದಂಬಾಡಿ ಗ್ರಾಮಗಳ 32 ಮಂದಿ ರಬ್ಬರ್ ಕೃಷಿಕರ ತೋಟದಲ್ಲಿ ಡ್ರೋನ್ ಔಷಧ ಸಿಂಪರಣೆ ನಡೆಯಲಿದೆ.
ಅಕಾಲಿಕ ಎಲೆ ಉದುರುವ ರೋಗಕ್ಕೆ ಔಷಧಿ ಸ್ಪ್ರೇ
ಡ್ರೋನ್ ಸ್ಪ್ರೇ ಮೂಲಕ ಅಕಾಲಿಕ ಎಲೆ ಉದುರುವ ರೋಗಕ್ಕೆ ರಬ್ಬರ್ ಗಿಡಗಳಿಗೆ ಮೇಲಿನಿಂದ ಸ್ಪ್ರೇ ನೀಡಲಾಗುತ್ತದೆ. ಜನವರಿ ತಿಂಗಳಲ್ಲಿ ಸಹಜವಾಗಿ ರಬ್ಬರ್ ಎಲೆಗಳು ಉದುರುತ್ತವೆ. ಆದರೆ ಸಪ್ಟೆಂಬರ್ ತಿಂಗಳಲ್ಲಿಯೂ ಎಲೆ ಉದುರುತ್ತಿರುವುದು ರೋಗವಾಗಿದ್ದು, ಇದರಿಂದ ರಬ್ಬರ್ ಇಳುವರಿಗೆ ಹೊಡೆ ನೀಡುತ್ತಿದೆ. ಸಿಂಪರಣೆಯಲ್ಲಿ 40 ಲೀ ಸ್ಪ್ರೇ ಆಯಿಲ್ ಮತ್ತು 8 ಕೆ.ಜಿ. ಕಾಪರ್ ಒಕ್ಸಿಕ್ಲೋರೈಡ್ ಮಿಶ್ರಣ ಮಾಡಬೇಕು. ಒಂದು ಬಾರಿ ಡ್ರೋನ್ 10 ಲೀ. ಔಷಧಿ ಒಯ್ಯುತ್ತದೆ. 1 ಲೀಟರ್ ಔಷಧಿ 1 ರಿಂದ 1.15 ನಿಮಿಷದಲ್ಲಿ ಸ್ಪ್ರೇ ಆಗುವ ರೀತಿಯಲ್ಲಿ ಸಿಂಪರಣೆ ತಾಂತ್ರಿಕತೆ ಅಳವಡಿಸಲಾಗಿದೆ. ಔಷಧಿ ಸಿಂಪರಣೆಯ ಸಂಪೂರ್ಣ ಡೇಟಾ ಡ್ರೋನ್ ರಿಮೋಟ್ ಕಂಟ್ರೋಲ್ ಮೂಲಕ ಮೊಬೈಲ್ನಲ್ಲಿ ಸಿಗುತ್ತದೆ. ಈ ಔಷಧ 3 ತಿಂಗಳುಗಳ ಕಾಲ ರೋಗವನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಡ್ರೋನ್ ಸ್ಪ್ರೇ ವಿಧಾನವನ್ನು ಕರ್ನಾಟಕ ಆಗ್ರೋ ಕೆಮಿಕಲ್ಸ್ ಬೆಂಗಳೂರು ನಡೆಸುವ ಕಾರ್ಯಕ್ರಮ ಇದಾಗಿದ್ದು, ಕಾಪರ್ ಒಕ್ಸಿಕ್ಲೋರೈಡ್ಗೆ ರಬ್ಬರ್ ಮಂಡಳಿ ಸಬ್ಸಿಡಿ ನೀಡುತ್ತಿದೆ. ಬ್ಯಾಂಕ್ ಆಫ್ ಬರೋಡ ಪ್ರಾಯೋಜಕತ್ವದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಸಂಪೂರ್ಣ ಸಹಯೋಗದೊಂದಿಗೆ ಈ ಕಾರ್ಯಾಗಾರ ನಡೆಯಿತು.