ರಾಮಕುಂಜ: ಸುಳ್ಯ ಶಾಸಕರಿಗೆ, ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನಾ ಸಭೆ

0

ದೇವದುರ್ಲಭ ಕಾರ್ಯಕರ್ತರ ಶ್ರಮದಿಂದ ಸುಳ್ಯದಲ್ಲಿ ಬಿಜೆಪಿಗೆ ಬೃಹತ್ ಅಂತರದ ಗೆಲುವು-ರಾಕೇಶ್ ರೈ
ಗೆಲುವಿನ ಗೌರವ ತಳಮಟ್ಟದ ಕಾರ್ಯಕರ್ತನಿಗೆ ಸಲ್ಲಬೇಕು-ಭಾಗೀರಥಿ
ನೆಮ್ಮದಿ ಬದುಕಿಗಾಗಿ ಬಿಜೆಪಿ ಗೆಲ್ಲಬೇಕು-ಧರ್ಮಪಾಲ ರಾವ್
ಒಟ್ಟಾಗಿ ಕೆಲಸ ಮಾಡಿದಲ್ಲಿ ಸದೃಢ ದೇಶ ಕಟ್ಟಲು ಸಾಧ್ಯ-ಪ್ರದೀಪ್ ರೈ

ರಾಮಕುಂಜ: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕೊಯಿಲ ಮಹಾಶಕ್ತಿಕೇಂದ್ರ ಹಾಗೂ ರಾಮಕುಂಜ, ಕೊಯಿಲ, ಹಳೆನೇರೆಂಕಿ ಶಕ್ತಿಕೇಂದ್ರದ ವತಿಯಿಂದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಕ್ಷೇತ್ರದ ಮತದಾರರು ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ ಮೇ 30ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.


ಅಭಿನಂದನಾ ಭಾಷಣ ಮಾಡಿದ ಬಿಜೆಪಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಅವರು, ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ 30,874 ಮತಗಳ ಅಂತರದಿಂದ ಗೆಲುವು ಆಗಿದೆ. ಇದಕ್ಕೆ ಮೂಲಕಾರಣಕರ್ತರು ಮತದಾರರು ಹಾಗೂ ದೇವದುರ್ಲಭ ಕಾರ್ಯಕರ್ತರು ಆಗಿದ್ದಾರೆ. ಭಾಗೀರಥಿಯವರು ವಿಧಾನಸಭೆಯಲ್ಲಿ ತಮ್ಮ ಮನೆದೇವರು ಹಾಗೂ ಮತದಾರರ ಹೆಸರಿನಲ್ಲಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ದೊಡ್ಡ ಗೌರವ ನೀಡಿದ್ದಾರೆ ಎಂದರು. ಎಸ್.ಅಂಗಾರ ಅವರು 30 ವರ್ಷ ಶಾಸಕರಾಗಿ, 3 ವರ್ಷ ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಾರ್ಟಿಗೆ ಕಪ್ಪುಚುಕ್ಕೆ ಬರದಂತೆ, ಭ್ರಷ್ಟಾಚಾರವಿಲ್ಲದೆ ಕೆಲಸ ನಿರ್ವಹಿಸಿದ್ದಾರೆ. ಹಿರಿಯ ಕಾರ್ಯಕರ್ತರ ತ್ಯಾಗ,ಬಲಿದಾನ, ಪರಿಶ್ರಮದಿಂದ ಬಿಜೆಪಿ ಬೆಳೆದಿದೆ. ಸಾಮಾನ್ಯ ಕಾರ್ಯಕರ್ತನೂ ಶಾಸಕನಾಗಿ ಆಯ್ಕೆಯಾಗುವುದು ಬಿಜೆಪಿಯಲ್ಲಿ ಮಾತ್ರ. ಕಾರ್ಯಕರ್ತ ಬೆಳೆಯುವುದರೊಂದಿಗೆ ಹೊಸ ಕಾರ್ಯಕರ್ತರನ್ನು ಪಕ್ಷಕ್ಕೆ ಕರೆತರಬೇಕು. ಪೇಜ್ ಪ್ರಮುಖರು ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಮತದಾರರನ್ನು ಭೇಟಿ ಮಾಡದೇ ಪ್ರತಿ ಹಂತದಲ್ಲೂ ಅವರೊಂದಿಗೆ ಇರಬೇಕೆಂದು ಹೇಳಿದರು.


ಅಭಿನಂದನೆ ಸ್ವೀಕರಿಸಿದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಗೆಲುವಿನ ಗೌರವ ಯಾವುದೇ ಫಲಾಪೇಕ್ಷೆ ಇಲ್ಲದೇ ಕೆಲಸ ಮಾಡಿರುವ ತಳಮಟ್ಟದ ಕಾರ್ಯಕರ್ತನಿಗೆ ಸಲ್ಲಬೇಕು. ಈ ಗೆಲುವು ಮುಂದಿನ ತಾ.ಪಂ.,ಜಿ.ಪಂ.,ಲೋಕಸಭೆ ಚುನಾವಣೆಯಲ್ಲೂ ಸಿಗಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಒಟ್ಟಾಗಿ ಕೆಲಸ ನಿರ್ವಹಿಸೋಣ. ಯಾವುದೇ ಅನುದಾನವಿದ್ದರೂ ಬೂತ್ ಸಮಿತಿ ಅಧ್ಯಕ್ಷರ ಗಮನಕ್ಕೇ ತಂದು ಹಂಚುತ್ತೇನೆ ಎಂದರು.

ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಬಿಜೆಪಿ ಪ್ರಬುದ್ಧ ಪ್ರಕೋಷ್ಠದ ಸಂಚಾಲಕ ಧರ್ಮಪಾಲ ರಾವ್ ಮಾತನಾಡಿ, ನೆಮ್ಮದಿ ಬದುಕಿಗಾಗಿ ಬಿಜೆಪಿ ಗೆಲ್ಲಬೇಕು. ಆದ್ದರಿಂದ ಗ್ರಾ.ಪಂ.ನಿಂದ ಲೋಕಸಭೆ ತನಕದ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲಬೇಕು. ಕೇಂದ್ರದಲ್ಲಿ ಮೋದಿ ಸರಕಾರವೇ ಇದ್ದಲ್ಲಿ ಹಳ್ಳಿ ಹಳ್ಳಿಗೂ ಕಾಂಕ್ರಿಟ್ ರಸ್ತೆ ಆಗಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಯಿಲ ಮಹಾಶಕ್ತಿಕೇಂದ್ರದ ಅಧ್ಯಕ್ಷ ಪ್ರದೀಪ್ ರೈ ಮನವಳಿಕೆ ಮಾತನಾಡಿ, ಹಿಂದುತ್ವ ಪ್ರತಿಪಾದನೆಯ ಪಕ್ಷದ ಅಗತ್ಯವಿದೆ. ಆದ್ದರಿಂದ ಜಾತಿಯನ್ನು ನಮ್ಮೊಳಗಿನ ಕಾರ್ಯಕ್ರಮಗಳಿಗೆ ಸೀಮಿತಗೊಳಿಸಿ ಸಮಾಜಕ್ಕೆ ಬಂದಾಗ ನಾವೆಲ್ಲರೂ ಹಿಂದೂಗಳು ಎಂಬ ಭಾವನೆಯಲ್ಲಿ ಕೆಲಸ ಮಾಡಬೇಕು. ಒಟ್ಟಾಗಿ ಕೆಲಸ ಮಾಡಿದಲ್ಲಿ ಸದೃಢ ದೇಶಕಟ್ಟಲು ಸಾಧ್ಯವಿದೆ ಎಂದರು.


ಬಿಜೆಪಿ ಸುಳ್ಯ ಮಂಡಲದ ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಕೊಯಿಲ ಶಕ್ತಿಕೇಂದ್ರದ ಪ್ರಮುಖ್ ರಾಮಚಂದ್ರ ಏಣಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಮಾಲತಿ ಎನ್.ಕೆ., ಉಪಾಧ್ಯಕ್ಷ ಪ್ರಶಾಂತ್ ಆರ್.ಕೆ., ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುಪ್ರಸಾದ ರಾಮಕುಂಜ, ಆತೂರು ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ, ಮಮತಾ ಆನೆಗುಂಡಿ, ಮಹೇಶ್ ಹಳೆನೇರೆಂಕಿ, ಉಮೇಶ್ ಕಲ್ಲೇರಿ, ಪ್ರಕಾಶ್ ಕೆಮ್ಮಾರ ಅವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಬಿಜೆಪಿ ದ.ಕ.ಜಿಲ್ಲಾ ಸಮಿತಿ ಸದಸ್ಯರೂ ಆದ ರಾಮಕುಂಜ ಶಕ್ತಿಕೇಂದ್ರದ ಪ್ರಮುಖ್ ಲಕ್ಷ್ಮೀ ನಾರಾಯಣ ರಾವ್ ಆತೂರು ಸ್ವಾಗತಿಸಿ, ಹಳೆನೇರೆಂಕಿ ಶಕ್ತಿಕೇಂದ್ರದ ಪ್ರಮುಖ್ ಜನಾರ್ದನ ಕದ್ರ ವಂದಿಸಿದರು. ಸುಳ್ಯಮಂಡಲ ವೃತ್ತಿಪರ ಪ್ರಕೋಷ್ಠದ ಸಂಚಾಲಕ ಸದಾಶಿವ ಶೆಟ್ಟಿ ಮಾರಂಗ ಕಾರ್ಯಕ್ರಮ ನಿರೂಪಿಸಿದರು. ಕೊಯಿಲ ಗ್ರಾ.ಪಂ.ಮಾಜಿ ಅಧ್ಯಕ್ಷೆ ಹೇಮಾ ಮೋಹನ್‌ದಾಸ್ ಶೆಟ್ಟಿ ವಂದೇ ಮಾತರಂ ಹಾಡಿದರು.

ರಂಗಪೂಜೆ:
ಅಭಿನಂದನಾ ಸಭೆ ಬಳಿಕ ಶ್ರೀ ರಾಮಕುಂಜೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ ನಡೆಯಿತು. ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಭಿನಂದನಾ ಸಭೆಯಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಹಾರಾರ್ಪಣೆ ಮಾಡಿ, ಶಾಲು ಹೊದಿಸಿ, ಫಲತಾಂಬೂಲ ನೀಡಿ ಗೌರವಿಸಲಾಯಿತು. ಮೂರು ಗ್ರಾಮಗಳ ಬಿಜೆಪಿ ಕಾರ್ಯಕರ್ತರು, ಮತದಾರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here