ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಾಸಕ ಅಶೋಕ್ ಕುಮಾರ್ ರೈರವರಿಗೆ ಅಭಿನಂದನೆ, ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತಾ ಸಭೆ

0

ಜನರ ಸೇವೆಗೆ ಸದಾ ಸಮಯ ನೀಡುವೆ-ನನ್ನಿಂದಾಗುವ ಸಹಕಾರ ನಿರಂತರ ಮಾಡುವೆ: ಅಶೋಕ್ ಕುಮಾರ್ ರೈ

ವಿಟ್ಲ: ಜನರಿಗೆ ನನ್ನಿಂದಾಗುವ ಸಹಕಾರವನ್ನು ನೀಡುತ್ತೇನೆ. ನಿಮ್ಮ ಸೇವೆಗೆ ನಾನು ಸದಾ ಸಮಯ ನೀಡುತ್ತೇನೆ. ಪರಿವರ್ತನೆ ನನ್ನಿಂದಲೇ ಆರಂಭವಾಗಲಿ. ಜನ ನನ್ನ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟಿದ್ದಾರೆ. ಶಕ್ತಿ ಮೀರಿ ನಾನು ಪ್ರಯತ್ನ ಮಾಡುತ್ತೇನೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡೋಣ. ನಿಮ್ಮ ಯಾವುದೇ ಸಮಸ್ಯೆಗೆ ನಾನು ಸ್ಪಂದಿಸಲು ಪ್ರಯತ್ನಿಸುತ್ತೇನೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಅಭಿನಂದನೆ ಸ್ವೀಕರಿಸಿ ಹೇಳಿದರು.

ಅವರು ಮೇ 30ರಂದು ವಿಟ್ಲದ ಚರ್ಚ್ ಸಮೀಪದ ಶತಮಾನೋತ್ಸವ ಸಮುದಾಯ ಭವನದಲ್ಲಿ ವಿಟ್ಲ- ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಹಾಗೂ ಮತದಾರರಿಗೆ, ಪಕ್ಷದ ಕಾರ್ಯಕರ್ತರಿಗೆ ನಡೆದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕರ್ತರು ಮಾಡಿದ ಕೆಲಸಕ್ಕೆ ಹೃದಯದಲ್ಲಿ ಜಾಗವನ್ನು ನೀಡಲಾಗಿದೆ. ಜನರ ಮನಸ್ಸಿನಲ್ಲಿ ಹಲವು ನಿರೀಕ್ಷೆಗಳಿದ್ದು, ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರತಿಯೊಂದು ನಡೆಯಲ್ಲೂ ಜವಾಬ್ದಾರಿ ಹೆಚ್ಚಿದೆ.

ಅಶೋಕ್ ರೈಯನ್ನು ಶಾಸಕರಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಹಾಗೆಂದು ಸರ್ಕಾರದ ಸೌಲಭ್ಯಗಳನ್ನು ನನ್ನ ಕ್ಷೇತ್ರದ ಎಲ್ಲಾ ಜನರಿಗೂ ತಲುಪಿಸುವ ಕೆಲಸ ಮಾಡುತ್ತೇನೆ. ಯಾಕೆಂದರೆ ನಾನು ನನ್ನ ಕ್ಷೇತ್ರದ ಎಲ್ಲಾ ಜನರ ಶಾಸಕ. ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ, ಮುಂದಿನ ಚುನಾವಣೆಯಲ್ಲಿ ಇತರ ಪಕ್ಷದ ಕಾರ್ಯಕರ್ತರು, ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವಂತೆ ಮಾಡುತ್ತೇನೆ ಎಂದರು.

ಉಭಯ ಜಿಲ್ಲೆಯ ಅಹವಾಲು ಸ್ವೀಕರಿಸಲು ಇರುವ ಏಕೈಕ ಶಾಸಕ-ಶಕುಂತಳಾ ಶೆಟ್ಟಿ: ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ರವರು ಮಾತನಾಡಿ ಉಡುಪಿ ದಕ್ಷಿಣ ಕನ್ನಡದ ಸಮಸ್ಯೆಗಳನ್ನು ವಿಧಾನಸಭೆಯಲ್ಲಿ ಮಾತನಾಡಲು ಇರುವ ಏಕೈಕ ಶಾಸಕ ಅಶೋಕ್ ಕುಮಾರ್ ರೈ ಅವರು. ಯು.ಟಿ.ಖಾದರ್ ಇದ್ದರೂ ಅವರು ಸ್ಪೀಕರ್ ಆಗಿದ್ದಾರೆ. ಆದ್ದರಿಂದ ಉಭಯ ಜಿಲ್ಲೆಗಳ ಜನರ ಅಹವಾಲು ಸ್ವೀಕರಿಸಲು ಉದಾರ ಮನಸ್ಸಿನ, ಸೇವಾ ಮನೋಭಾವದ ಅಶೋಕ್ ರೈ ಅವರು ಶಾಸಕರಾಗಿ ನಮ್ಮ ಜೊತೆಗಿದ್ದಾರೆ. ಇದು ನಮ್ಮ ಭಾಗ್ಯವೂ ಹೌದು. ಉತ್ತಮ ವ್ಯಕ್ತಿತ್ವ ಇರುವ ವ್ಯಕ್ತಿ ಪಕ್ಷಕ್ಕೆ ಲಭಿಸಿದ್ದಾರೆ. ಕರಾವಳಿಯ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಅಶೋಕ್ ರೈ ಮಾಡಲಿದ್ದಾರೆ. ಜನರ ಎಲ್ಲ ಬೇಡಿಕೆಯನ್ನು ಪೂರೈಸಿ ಐದು ವರ್ಷದಲ್ಲಿ ದೊಡ್ಡ ಮಟ್ಟದ ಅಭಿನಂದನೆಯನ್ನು ಪಡೆಯುವಂತಾಗಲಿ ಎಂದು ತಿಳಿಸಿದರು.

ಕ್ಷೇತ್ರದ ಜನರಿಗೆ ನ್ಯಾಯ ಒದಗಿಸುವ ಕೆಲಸ-ಎಂ.ಎಸ್.: ಕೆಪಿಸಿಸಿ ಸದಸ್ಯ ಎಂ. ಎಸ್. ಮಹಮ್ಮದ್ ರವರು ಮಾತನಾಡಿ ಪುತ್ತೂರು ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ಕೆಲಸ ಶಾಸಕ ಅಶೋಕ್ ಕುಮಾರ್ ರೈಯವರಿಂದ ಆಗಲಿದೆ. ಈ ಹಿಂದಿನಂತೆ ನಾವೆಲ್ಲರೂ ವಿರಮಿಸದೆ ಹೋರಾಟ ಮಾಡಬೇಕಿದೆ. ನಮ್ಮ ಇಚ್ಚಾಶಕ್ತಿಯ ಹೋರಾಟದ ಫಲವಾಗಿ ನಮಗಿಂದು ಉತ್ತಮ ಶಾಸಕರು ಸಿಕ್ಕಿದ್ದಾರೆ. ಶಾಸಕರು ತನ್ನ ಚಿಂತನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯೋಜನೆಯನ್ನು ರೂಪಿಸಿದ್ದಾರೆ ಎಂದರು.

ಜನರಲ್ಲಿ ಆಶಾಭಾವನೆ ಮೂಡಿಸಿದೆ-ಡಾ. ರಾಜಾರಾಮ್: ವಿಟ್ಲ ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ. ಡಾ. ರಾಜಾರಾಮ ಕೆ. ಬಿ. ರವರು ಅಭಿನಂದನಾ ಭಾಷಣಮಾಡಿ ಜಾತ್ಯಾತೀತ ಮನಸ್ಸುಗಳು ಸೋತು ಹೋದ ದಿನದಲ್ಲಿ ಆಶೋಕ್ ರೈರವರು ಗೆಲುವು ಸಾಧಿಸುವ ಮೂಲಕ ಮತ್ತೆ ಜನರಿಗೆ ಆಶಾಕಿರಣ ಮೂಡಿಸಿದೆ. ಜನರ ಕಷ್ಟಗಳ ಬಗ್ಗೆ ನಿರಂತರ ಕೆಲಸ ಮಾಡಿದ ಶಾಸಕರು ಈಗ ಕ್ಷೇತ್ರದ ಕೆಲಸ ಮಾಡುವಂತಾಗಿದೆ ಎಂದು ತಿಳಿಸಿದರು.

ವಿಟ್ಲ – ಉಪ್ಪಿನಂಡಿ ಬ್ಲಾಕ್ ಕಾಂಗ್ರೆಸ್, ವಿಟ್ಲ ನಗರ ಕಾಂಗ್ರೆಸ್ ಸೇರಿ ವಿವಿಧ ಗ್ರಾಮ ಸಮಿತಿಗಳ ವತಿಯಿಂದ ಅಭಿನಂದನೆ ನಡೆಯಿತು.

ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಜೋಕಿಮ್ ಡಿಸೋಜ, ನಝೀರ್ ಮಠ, ಉಮಾನಾಥ ಶೆಟ್ಟಿ, ನೂರುದ್ದೀನ್ ಸಾಲ್ಮರ, ಫಾರೂಕ್ ಪೆರ್ನೆ, ಪದ್ಮನಾಭ ಪೂಜಾರಿ ಸಣ್ಣಗುತ್ತು, ಮಹೇಶ್ ರೈ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಬ್ದುಲ್ ರಹಿಮಾನ ನೆಲ್ಲಿಗುಡ್ಡೆ, ಡೀಕಯ್ಯ, ಪದ್ಮಿನಿ, ಲತಾ ಅಶೋಕ್, ಮೋಹನ ಗುರ್ಜಿನಡ್ಕ, ಎಲ್ಯಣ್ಣ ಪೂಜಾರಿ ಮೈರುಂಡ, ರಾಮಣ್ಣ ಪಿಲಿಂಜ, ಜಯಪ್ರಕಾಶ್ ಬದಿನಾರು, ಸಾಹಿರಾ ಬಾನು, ನೆಬಿಸ್ಸಾ, ಶ್ರೀಧರ ಬಾಳೆಕಲ್ಲು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.
ಆರಂಭದಲ್ಲಿ ವಿಟ್ಲದ ಮೇಗಿನ ಪೇಟೆಯಲ್ಲಿರುವ ಜೈನಬಸದಿಯಿಂದ ತೆರೆದ ಜೀಪಿನಲ್ಲಿ ಶಾಸಕ ಅಶೋಕ್ ಕುಮಾರ್ ರೈರವನ್ನು ಸಭಾಭವನದವರೆಗೆ ವಾಹನ ಜಾಥಾದ ಮೂಲಕ ಕರೆತರಲಾಯಿತು. ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವಿಟ್ಲನಗರ ಕಾಂಗ್ರೆಸ್ ವಕ್ತಾರ ವಿ.ಕೆ.ಎಂ. ಅಶ್ರಫ್ ಸ್ವಾಗತಿಸಿದರು. ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ವಂದಿಸಿದರು. ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಜಗನ್ನಾಥ ಶೆಟ್ಟಿ ಕೋಡಿಂಬಾಡಿ ಕಾರ್ಯಕ್ರಮ ನಿರೂಪಿಸಿದರು.

ಸರಕಾರಿ ಸೌಲಭ್ಯಕ್ಕೆ ಲಂಚ ನೀಡಬೇಡಿ
ಚುನಾವಣಾ ಪೂರ್ವದಲ್ಲಿ ಹೇಳಿರುವಂತೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇನೆ. ಅಧಿಕಾರಿಗಳನ್ನು ಕೈಹಿಡಿದು ಗ್ರಾಮ ಗ್ರಾಮಗಳಿಗೆ ಕರೆತಂದು 94 ಸಿ, ಅಕ್ರಮ ಸಕ್ರಮ ಅರ್ಜಿಗಳನ್ನು ವಿಲೇವಾರಿ ಮಾಡಿಸುತ್ತೇನೆ. ಆದ್ದರಿಂದ ಸರ್ಕಾರಿ ಸೌಲಭ್ಯ ಪಡೆಯಲು ಲಂಚವಾಗಿ ಹಣ ನೀಡಬೇಡಿ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here