ಉಪ್ಪಿನಂಗಡಿ: ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯು ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತೀರಾ ಅಸಮರ್ಪಕವಾಗಿ ನಡೆಯುತ್ತಿದೆ. ಕ್ಷೇತ್ರದ ನೂತನ ಶಾಸಕರಿಗೆ ದೂರು ಸಲ್ಲಿಸಿಯಾದರೂ, ಕಾಮಗಾರಿ ಗುಣಮಟ್ಟದೊಂದಿಗೆ ತ್ವರಿತವಾಗಿ ನಡೆಯುವಂತಾಗಲಿ ಎಂದು ಗ್ರಾ.ಪಂ. ಸದಸ್ಯರು ಆಗ್ರಹಿಸಿದ ಘಟನೆ ಉಪ್ಪಿನಂಗಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಗ್ರಾ.ಪಂ. ಅಧ್ಯಕ್ಷೆ ಉಷಾ ಮುಳಿಯ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರು, 3.63 ಕೋಟಿ ರೂ. ವೆಚ್ಚದ ಜಲ ಜೀವನ್ ಮಿಷನ್ ಕಾಮಗಾರಿ ಉಪ್ಪಿನಂಗಡಿ ಗ್ರಾಮದಲ್ಲಿ ತೀರಾ ಮಂದಗತಿಯಲ್ಲಿ ನಡೆದಿದೆ. ಕೆಲವೆಡೆ ಪೈಪು ಹಾಕಿ ಹೋದರೆ ಇನ್ನು ಕೆಲವೆಡೆ ಟ್ಯಾಂಕ್ ನಿರ್ಮಾಣ ಕಾಮಗಾರಿ ಅರ್ಧದಲ್ಲೇ ಬಾಕಿಯಾಗಿದೆ. ಈ ಬಗ್ಗೆ ಹಲವಾರು ಬಾರಿ ದೂರು ಸಲ್ಲಿಸಿದರೂ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ. ನೂತನ ಶಾಸಕರು ಸೂಚನೆ ನೀಡಿದಾಗಲೂ ಗುತ್ತಿಗೆದಾರ ಸಮರ್ಪಕ ಕಾರ್ಯ ನಿರ್ವಹಿಸುವ ಸಾಧ್ಯತೆ ಇದ್ದು, ಈ ಬಗ್ಗೆ ಶಾಸಕರಿಗೆ ದೂರು ಸಲ್ಲಿಸಬೇಕೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಪೇಟೆಯಲ್ಲೇ ಕಸ ರಾಶಿ ಬಿದ್ದಿದೆ. ಗ್ರಾಮಾಂತರ ಪ್ರದೇಶದಲ್ಲೂ ಮನೆ- ಮನೆ ಕಸವಿಲೇವಾರಿಗೆ 60ರಿಂದ 70 ರೂ. ಶುಲ್ಕ ವಿಧಿಸಲಾಗಿದೆ. ಅಲ್ಲಿಯೂ ಸರಿಯಾದ ನಿಟ್ಟಿನಲ್ಲಿ ಕಸ ವಿಲೇವಾರಿ ನಡೆಯುತ್ತಿಲ್ಲ. ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಅಲ್ಲಿನವರಲ್ಲಿ ಕಸದ ಶುಲ್ಕ ಸಂಗ್ರಹ ಮಾಡುವುದು. ರಸ್ತೆ ಬದಿಯಲ್ಲಿ ಕಸ ರಾಶಿ ಬಿದ್ದಿದೆ ಎಂದು ಗ್ರಾ.ಪಂ. ಸದಸ್ಯ ಅಬ್ದುರ್ರಹ್ಮಾನ್ ಕೆ. ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಅಧ್ಯಕ್ಷೆ ಉಷಾ ಮುಳಿಯ, ಅವರು ದಾರಿಯಲ್ಲಿದ್ದ ಕಸವನ್ನು ಸಂಗ್ರಹಿಸುವುದಿಲ್ಲ. ಅಂಗಡಿ ಮತ್ತು ಮನೆಯಿಂದ ಮಾತ್ರ ಎಂದರು. ಆಗ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಅಂಗಡಿಗಳಿಂದಲೂ ಸರಿಯಾಗಿ ಕಸ ಸಂಗ್ರಹ ಆಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳಿವೆ. ಕಸ ಸಂಗ್ರಹಿಸದಿದ್ದಲ್ಲಿ ಅವರು ಕಸವನ್ನು ಎಲ್ಲೆಂದರಲ್ಲಿ ತಂದು ಎಸೆಯುತ್ತಾರೆ. ಉಪ್ಪಿನಂಗಡಿಯ ಹಳೆಬಸ್ ನಿಲ್ದಾಣ ಬಳಿಯ ಮಸೀದಿ ಸೇರಿದಂತೆ ಹಲವು ಕಡೆಗಳಲ್ಲಿ ಕಸದ ರಾಶಿಯೇ ಬಿದ್ದಿದೆ. ಆದ್ದರಿಂದ ಇನ್ನು ಈ ವಿಷಯವಾಗಿ ಮೃಧು ಧೋರಣೆ ಬೇಡ. ಅವರಿಗೆ ಸೂಚನೆ, ನೊಟೀಸ್ ನೀಡುವುದು ಬೇಡ. ಆಗುವುದಿದ್ದರೆ ಮಾತ್ರ ಈಗ ಕಸ ವಿಲೇವಾರಿ ವಹಿಸಿಕೊಂಡವರು ಕೆಲಸ ಮಾಡಲಿ. ಇಲ್ಲದಿದ್ದರೆ ಬೇರೆಯವರಿಗೆ ಕೊಡಿ. ಬಸ್ ನಿಲ್ದಾಣದಲ್ಲಿಯೂ ಕಸಗಳು ತುಂಬಿ ಹೋಗಿವೆ. ಆದ್ದರಿಂದ ಸ್ವಚ್ಛ ಉಪ್ಪಿನಂಗಡಿಗಾಗಿ ಸರಿಯಾದ ಯೋಜನೆ ಹಾಕಿಕೊಂಡು ಟೆಂಡರ್ ಕರೆಯಿರಿ ಎಂದರು.
ಖಾಸಗಿ ಜೆಸಿಬಿಯವರೋರ್ವರು ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ 17 ಗಂಟೆಗಳ ಜೆಸಿಬಿ ಕೆಲಸ ಮಾಡಿದ್ದಾರೆ. ಆದರೆ ಕಾಮಗಾರಿ ನಡೆಸಿ ಹಲವು ತಿಂಗಳಾದರೂ, ಇನ್ನೂ ಅವರಿಗೆ ಬಿಲ್ ಪಾವತಿಸಿಲ್ಲ ಯಾಕೆ ಎಂದು ಅಬ್ದುರ್ರಹ್ಮಾನ್ ಕೆ. ಅವರು ಪಿಡಿಒ ಅವರನ್ನು ಕೇಳಿದರು. ಆಗ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಮಾತನಾಡಿ, ಅದೇ ಜೆಸಿಬಿಯವರು ಪಂಚೇರು ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ಹೇಳಿದರೆಂದು ಗ್ರಾ.ಪಂ.ನ ಚರಂಡಿಗೆ ಮಣ್ಣು ಹಾಕಿದ್ದಾರೆ. ಅದನ್ನು ತೆಗೆದು ಕೊಡಿ ಎಂದು ನಾನು ಹೇಳಿದ್ದೆ. ಆದರೆ ಅವರು ತೆಗೆದಿಲ್ಲ. ಆದ್ದರಿಂದ ಅವರ ಬಿಲ್ ನೀಡಲಿಲ್ಲ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಅಬ್ದುರ್ರಹ್ಮಾನ್ ಕೆ. ಅವರು, ಹಾಗೆ ಮಾಡಿದ್ದರೆ ಅದು ಅವರು ಖಾಸಗಿ ಕೆಲಸ ಮಾಡುವಾಗ ಮಾಡಿದ್ದು. ಹಾಗಿದ್ದರೆ ನಿಮಗೆ ಅವರ ಮೇಲೆ ಆಗಲೇ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬಹುದಿತ್ತು. ಅದು ಬಿಟ್ಟು ಬಿಲ್ ಪೆಂಡಿಂಗ್ ಇಟ್ಟಿದ್ದು ಸರಿಯಲ್ಲ ಎಂದರು. ಅಲ್ಲದೇ, ಅವರು ಚರಂಡಿಗೆ ಹಾಕಿದ ಮಣ್ಣನ್ನು ತೆರವು ಮಾಡಿದ್ದೇನೆ ಎಂದು ನನ್ನಲ್ಲಿ ತಿಳಿಸಿದ್ದಾರೆ. ಅದನ್ನು ಪರಿಶೀಲಿಸಿ ಅವರ ಬಾಕಿಯಾದ ಬಿಲ್ ಅನ್ನು ನೀಡಲು ಕ್ರಮ ಕೈಗೊಳ್ಳಿ ಎಂದರು.
ಕೆಲವು ಖಾಸಗಿ ವ್ಯಕ್ತಿಗಳು ಕಾಂಕ್ರೀಟ್ ರಸ್ತೆಯನ್ನು ಮನಸ್ಸೋ ಇಚ್ಚೆ ಕಡಿಯುತ್ತಾರೆ. ಬಡವರ ಮೇಲೆ ದರ್ಪ, ದೌರ್ಜನ್ಯ ತೋರಿಸುವ ನೀವು ಶ್ರೀಮಂತರು ಹೀಗೆ ಮಾಡಿದರೆ ಏನು ಕ್ರಮ ಕೈಗೊಂಡಿದ್ದೀರಿ ಎಂದರು. ಇದಕ್ಕೆ ಪಿಡಿಒ ಉತ್ತರಿಸಿ, ಕೆಂಪಿಮಜಲಿನಲ್ಲಿ ಖಾಸಗಿ ವ್ಯಕ್ತಿಯೋರ್ವರು ಕಾಂಕ್ರೀಟ್ ರಸ್ತೆಯನ್ನು ಕಡಿದು ಆದ ಮೇಲೆ ನಮ್ಮ ಗಮನಕ್ಕೆ ಬಂದಿದೆ. ಅದನ್ನು ಅವರೇ ಸರಿ ಮಾಡಿ ಕೊಡುತ್ತೇನೆ ಎಂದಿದ್ದಾರೆ. ಆದರೂ ಅವರಿಗೆ ನೊಟೀಸ್ ನೀಡಲಾಗುವುದು ಎಂದರು.
ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣದ ಇಂಟರ್ ಲಾಕ್ ಅಳವಡಿಕೆಯ ಕಾಮಗಾರಿ ಸಂಪೂರ್ಣ ಶಾಸಕರ ಅನುದಾನದಲ್ಲಿ ನಡೆದಿದ್ದರೂ, ಕಾಮಗಾರಿಯ ಅರ್ಥ್ ವರ್ಕ್ ಹೆಸರಿನಲ್ಲಿ ಪಂಚಾಯತ್‌ನಿಂದ ಹಣ ಪಾವತಿಸಿರುವುದಕ್ಕೆ ಆಕ್ಷೇಪ, ಉಪ್ಪಿನಂಗಡಿ ಸರಕಾರಿ ಆಸ್ಪತ್ರೆ ಹಾಗೂ ಸರಕಾರಿ ಮಾದರಿ ಶಾಲಾ ಬಳಿ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಅನುಷ್ಠಾನಿಸುವ ಬಗ್ಗೆ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.
ಗ್ರಾ.ಪಂ. ಸದಸ್ಯರಾದ ಯು.ಟಿ. ತೌಸೀಫ್, ವಿದ್ಯಾಲಕ್ಷ್ಮೀ ಪ್ರಭು, ಇಬ್ರಾಹೀಂ ಕೆ., ಧನಂಜಯ ನಟ್ಟಿಬೈಲು, ಲೋಕೇಶ್ ಬೆತ್ತೋಡಿ, ಅಬ್ದುಲ್ ರಶೀದ್, ಮೈಸೀದ್, ಜಯಂತಿ ರಂಗಾಜೆ, ಶೋಭಾ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪಂಚಾಯತ್ ಕಾರ್ಯದರ್ಶಿ ದಿನೇಶ್, ಸಿಬ್ಬಂದಿ ಜ್ಯೋತಿ, ನೀರು ಮತ್ತು ನೈರ್ಮಲ್ಯ ಸಮಿತಿಯ ಅಧ್ಯಕ್ಷ ಸಣ್ಣಣ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗ್ರಾ.ಪಂ.ನಲ್ಲಿ ಬಡವರಿಗೊಂದು ನ್ಯಾಯ. ಶ್ರೀಮಂತರಿಗೊಂದು ನ್ಯಾಯ ನಡೆಯುತ್ತಿದೆ. ಬಡವನೋರ್ವ ಮನೆ ಕಟ್ಟಲು ಪರವಾನಿಗೆಗೆ ಬಂದಾಗ ಆತನಿಗೆ ಇಂಗುಗುಂಡಿ ಕಡ್ಡಾಯ ಮಾಡುತ್ತೀರಿ. ಆದರೆ ಶ್ರೀಮಂತರಿಗೆ ಅದು ಅನ್ವಯವಾಗುವುದಿಲ್ಲ. ಖಾಸಗಿ ಕಟ್ಟಡದಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯ ಸೇರಿದಂತೆ ಹಲವು ಶ್ರೀಮಂತರ ಕಟ್ಟಡದ ಶೌಚ ನೀರು ಚರಂಡಿ ಮೂಲಕ ಹರಿದು, ನದಿಗೆ ಸೇರುತ್ತಿದೆ ಎಂದು ಅಬ್ದುರ್ರಹ್ಮಾನ್ ಕೆ. ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಸುರೇಶ್ ಅತ್ರೆಮಜಲ್ ಅವರು, ಪೇಟೆಯೊಳಗಿರುವ ಹಲವು ಬಹುಮಹಡಿ ಕಟ್ಟಡದವರು ಕೂಡಾ ಇಂಗು ಗುಂಡಿ ನಿರ್ಮಿಸಿಲ್ಲ ಎಂದರು.