ಏಳು ದಿನಗಳೊಳಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ
ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸಹಿತ ವಿವಿಧ ಹುದ್ದೆಗಳು ಖಾಲಿಯಿದ್ದು, ತಕ್ಷಣ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗೊಳ್ಳುವಂತೆ ಕಾಣಿಯೂರು ಗ್ರಾ.ಪಂ.ಅಧ್ಯಕ್ಷೆ ಲಲಿತಾ ದರ್ಖಾಸು ಮತ್ತು ಉಪಾಧ್ಯಕ್ಷ ಗಣೇಶ್ ಉದನಡ್ಕರವರ ನೇತತ್ವದಲ್ಲಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಜೂ. 5ರಂದು ಮನವಿ ಸಲ್ಲಿಸಲಾಗಿದೆ. ಏಳು ದಿನಗಳ ಒಳಗೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸಹಿತ ಪ್ರಯೋಗ ಶಾಲಾ ತಂತ್ರಜ್ಞಾನ ಫಾರ್ಮಸಿಸ್ಟ್, ಹಿರಿಯ ಆರೋಗ್ಯ ಸುರಕ್ಷಾ ಅಧಿಕಾರಿ ಸೇರಿ ವಿವಿಧ ಹುದ್ದೆಗಳು ಖಾಲಿಯಿದ್ದು ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಸದ್ರಿ ಸಮಸ್ಯೆಯ ಬಗ್ಗೆ ಈ ಮೊದಲೇ ದಿನಾಂಕ 12-7-2022ರಂದು ಕಾಣಿಯೂರು ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಇಲಾಖೆಗೆ ಕಳುಹಿಸಲಾಗಿದೆ. ಅದಲ್ಲದೇ ದಿನಾಂಕ 20-2-2023ರಂದು ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯದಲ್ಲಿ ಸದ್ರಿ ಸಮಸ್ಯೆಯ ಬಗ್ಗೆಯೂ ಪ್ರಸ್ತಾಪಿಸಿದ್ದು, ಜಿಲ್ಲಾಧಿಕಾರಿಯವರು ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ನೇಮಕ ಮಾಡಲು ಸೂಕ್ತ ಕ್ರಮ ಜರಗಿಸುವುದಾಗಿ ತಿಳಿಸಿರುತ್ತಾರೆ. ಆದರೂ ಇಷ್ಟರವರೆಗೆ ಯಾವುದೇ ಸಿಬ್ಬಂದಿ ನೇಮಕ ಆಗಿರುವುದಿಲ್ಲ. ಪ್ರಸ್ತುತ ಮಳೆಗಾಲದ ಸಮಯವಾಗಿರುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಸಹಿತ ಖಾಲಿ ಇರುವ ಇತರ ಹುದ್ದೆಗಳನ್ನು ತಕ್ಷಣ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಏಳು ದಿನಗಳ ಒಳಗೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಮಾಡುವ ಸಲ್ಲಿಸುವ ಕಾಣಿಯೂರು ಗ್ರಾ.ಪಂ,ಅಧ್ಯಕ್ಷೆ ಲಲಿತಾ ದರ್ಖಾಸು, ಉಪಾಧ್ಯಕ್ಷ ಗಣೇಶ್ ಉದನಡ್ಕ, ಸದಸ್ಯ ತಾರಾನಾಥ ಇಡ್ಯಡ್ಕ, ಚಾರ್ವಾಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ರಾಮಣ್ಣ ಗೌಡ ಪೊನ್ನೆತ್ತಡಿ, ಪ್ರಮುಖರಾದ ಕೃಷ್ಣ ಶೆಟ್ಟಿ ಕಡಬ, ಶಿವಪ್ರಸಾದ್ ಮೈಲೇರಿ ಮತ್ತಿತರರು ಉಪಸ್ಥಿತರಿದ್ದರು.
ಖಾಲಿ ಇರುವ ಹುದ್ದೆಗಳು
ವೈದ್ಯಾಧಿಕಾರಿ-1, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ-1, ಕಿರಿಯ ಆರೋಗ್ಯ ಅಧಿಕಾರಿ-2,ಆರೋಗ್ಯ ನಿರೀಕ್ಷಣ ಅಧಿಕಾರಿ-2, ಪ್ರಯೋಗ ಶಾಲಾ ತಜ್ಞರು-1, ಪ್ರಥಮ ದರ್ಜೆ ಸಹಾಯಕರು-1.
ಬೇಡಿಕೆಗೆ ಸ್ಪಂದಿಸದಿದ್ದರೆ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ
ಕಾಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳ ಸಮಸ್ಯೆ ಬಗ್ಗೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯದಲ್ಲಿಯೂ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದು, ಸೂಕ್ತ ಕ್ರಮ ಜರಗಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು. ಆದರೆ ಇಷ್ಟರವರೆಗೂ ನಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಇದೀಗ ವೈದ್ಯಾಧಿಕಾರಿಯವರು ವಾರದಲ್ಲಿ ಮೂರು ದಿನ ಆರೋಗ್ಯ ಕೇಂದ್ರದಲ್ಲಿ ಲಭ್ಯವಿದ್ದಾರೆ. ಪ್ರಸ್ತುತ ಇಬ್ಬರು ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಒಬ್ಬರು ರಜೆಯಲ್ಲಿದ್ದಾರೆ. ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳಿಂದ ಜನ ಸಾಮಾನ್ಯರಿಗೆ ಬಹಳ ತೊಂದರೆ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದ್ದರಿಂದ ಖಾಲಿಯಿರುವ ವೈದ್ಯಾಧಿಕಾರಿ ಸಹಿತ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ಕೂಡಲೇ ನೇಮಕ ಮಾಡಲು ಕ್ರಮ ಕೈಗೊಳ್ಳಬೇಕು. ಏಳು ದಿನಗಳ ಒಳಗೆ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾಣಿಯೂರು ಆರೋಗ್ಯ ಕೇಂದ್ರದ ಎದುರು ಸಾರ್ವಜನಿಕರೊಂದಿಗೆ ಪ್ರತಿಭಟನೆ ಮಾಡಲಾಗುವುದು.
ಗಣೇಶ್ ಉದನಡ್ಕ, ಉಪಾಧ್ಯಕ್ಷರು, ಗ್ರಾ.ಪಂ.ಕಾಣಿಯೂರು