ಪುತ್ತೂರು: ಮಂಗಳೂರಿನಲ್ಲಿ ಪಶ್ಚಿಮ ವಲಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವ ಜಿ ಪರಮೇಶ್ವರ್ ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಇಲ್ಲಿನ ಜನರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಬೇಕಾಗಿದೆ. ಹಾಗಾಗಿ ಡ್ರಗ್ಸ್ ನಿಯಂತ್ರಣಕ್ಕೆ ಅಭಿಯಾನ ನಡೆಸಲು ಸೂಚಿಸಿದ್ದು, ಆ.15 ರೊಳಗೆ ಡ್ರಗ್ಸ್ ಚಟುವಟಿಕೆ ಹತ್ತಿಕ್ಕಲು ಗಡುವು ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಕೋಮು ಸೌಹಾರ್ದತೆ ಕಾಪಾಡಲು ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ ನೀಡಿದ್ದು ಅಗತ್ಯ ಬಿದ್ದರೆ ಬೇರೆಡೆಯೂ ವಿಂಗ್ ರಚಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವರು ಹತ್ಯೆಗೀಡಾದ ಫಾಝಿಲ್, ಮಸೂದ್ , ಜಲೀಲ್ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.