ಪುತ್ತೂರು: ಮೇ 19 ರಂದು ತೆಂಕಿಲ ಸಮೀಪ ಆಕ್ಟಿವಾ ಹಾಗು ಪಿಕಪ್ ನಡುವೆ ಡಿಕ್ಕಿ ಸಂಭವಿಸಿದ್ದು ವಿದ್ಯಾರ್ಥಿನಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳದಲ್ಲಿದ್ದ ಬಜರಂಗದಳದ ಕಾರ್ಯಕರ್ತರು ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು.
ಬಜರಂಗದಳದ ಕಾರ್ಯಕರ್ತರಾದ ಜಯಂತ್, ಶ್ರೀಧರ್ ತೆಂಕಿಲ, ರಾಮಪ್ರಸಾದ್ ಮಯ್ಯ, ಭರತ್ ,ದಿನೇಶ್ ಜೈನ್ ಗಾಯಾಳುವಿಗೆ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದರು.ಗಾಯಾಳುವಿಗೆ ಬೇಕಾದ 8 ಬಾಟಲ್ ರಕ್ತವನ್ನು ಬಜರಂಗದಳದ ಕಾರ್ಯಕರ್ತರು ನೀಡಿದ್ದು, ಪ್ರಗತಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಬಜರಂಗದಳದ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ ಪಾವತಿಸಿ ಮಾನವೀಯತೆ ಮೆರೆದಿದ್ದಾರೆ.
ಮೈಸೂರು ಕಡೆಯಿಂದ ಮಾಣಿ ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಆಕ್ಟೀವಾಗೆ ಡಿಕ್ಕಿ ಹೊಡೆದಿದೆ. ಆಕ್ಟೀವದಲ್ಲಿ ಸಹ ಸವಾರಿಯಾಗಿ ಪ್ರಯಾಣಿಸುತ್ತಿದ್ದ ಶ್ರೀದೇವಿ ಗಂಭೀರವಾಗಿ ಗಾಯಗೊಂಡಿದ್ದರು. ಆಕ್ಟೀವಾ ಸವಾರ ದೀಕ್ಷಿತ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಿಕಪ್ ಚಾಲಕನ ವಿರುದ್ದ ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮಂಗಳೂರಿನ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀದೇವಿಯನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಮುರಳಿಕೃಷ್ಣ ಹಸಂತಡ್ಕ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ.