ಪಂಚತಂತ್ರ 2.0 ಎಡವಟ್ಟು- ಪಂಚಾಯತ್‌ರಾಜ್ ಇಲಾಖೆಯಿಂದ ಗ್ರಾಮ ಪಂಚಾಯತ್ ನೌಕರರ ಮಾಸಿಕ ವೇತನಕ್ಕೆ ತಡೆ

0

@ ಸಿಶೇ ಕಜೆಮಾರ್


ಪುತ್ತೂರು: ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನಕ್ಕೆ ತಂದಿರುವ ಹೊಸ ಸಾಪ್ಟ್‌ವೇರ್ ಪಂಚತಂತ್ರ 2.0 ದಲ್ಲಿ ಆಸ್ತಿ ದಾಖಲೆ ಅಪ್‌ಡೇಟ್ ನಿರೀಕ್ಷಿತ ಮಟ್ಟದಲ್ಲಿ ಆಗದೇ ಇರುವ ಹಿನ್ನೆಲೆಯಲ್ಲಿ ಪಂಚಾಯತ್‌ರಾಜ್ ಇಲಾಖೆ ಗ್ರಾಮ ಪಂಚಾಯತ್ ನೌಕರರ ಮಾಸಿಕ ವೇತನಕ್ಕೆ ತಡೆ ನೀಡಿದೆ. ಹೊಸ ಸಾಪ್ಟ್‌ವೇರ್ ಮೂಲಕವೇ ಆಸ್ತಿ ದಾಖಲೀಕರಿಸುವಂತೆ ಇಲಾಖೆಯಿಂದ ಸೂಚನೆ ಬಂದಿತ್ತು ಆದರೆ ಪಂಚತಂತ್ರ 2.0 ದಲ್ಲಿ ಹಲವು ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಸ್ತಿ ದಾಖಲೀಕರಣ ಸಾಧ್ಯವಾಗಲಿಲ್ಲ ಇದೀಗ ಇಲಾಖೆ ಇದನ್ನೇ ನೆಪವಾಗಿಟ್ಟುಕೊಂಡು ಪಂಚತಂತ್ರ 2.0 ದಲ್ಲಿ ವೇತನ ಮಾಡದಂತೆ ಪಂಚಾಯತ್ ನೌಕರರ ಎಚ್‌ಆರ್‌ಎಂಎಸ್ ಮಾಡ್ಯುಲ್ ಅನ್ನು ಲಾಕ್ ಮಾಡಿದ್ದು ಇದು ಗ್ರಾಪಂ ನೌಕರರ ಆತಂಕಕ್ಕೆ ಕಾರಣವಾಗಿದೆ.ಕನಿಷ್ಠ ವೇತನಕ್ಕೆ ದುಡಿಯುವ ಬಡಪಾಯಿ ಗ್ರಾಪಂ ನೌಕರರ ವೇತನಕ್ಕೆ ಇಲಾಖೆ ತಡೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.


ಪಂಚತಂತ್ರ 2.0 ಸಾಪ್ಟ್‌ವೇರ್ ಕಿರಿಕಿರಿ
ರಾಜ್ಯ ಸರಕಾರವು ಪಂಚಾಯತ್‌ಗಳ ಸಂಪನ್ಮೂಲ ಕ್ರೂಢೀಕರಣ ಮತ್ತು ಪಂಚಾಯತ್‌ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಸರಳವಾಗಿಸಲು 2008 ರಿಂದ ಪಂಚತಂತ್ರ ವೆಚ್ ತಂತ್ರಾಂಶವನ್ನು ಸೃಷ್ಟಿ ಮಾಡಿತ್ತು. ಮೊದಲು ಇದ್ದ ತಂತ್ರಾಂಶವನ್ನು ಬದಲಾಯಿಸಿದ ಸರಕಾರ 2021-22 ರಲ್ಲಿ ಪಂಚತಂತ್ರ 2.0 ಎಂಬ ಹೊಸ ಸಾಪ್ಟ್‌ವೇರ್ ಅನ್ನು ಪಂಚಾಯತ್‌ಗಳಿಗೆ ನೀಡಿತ್ತು. ಇದರಲ್ಲಿ ಆಸ್ತಿ ದಾಖಲೆ, ಖರ್ಚು ವೆಚ್ಚ, ಹಳೆಯ ಬಾಕಿ ಎಲ್ಲವನ್ನೂ ದಾಖಲಿಸಬೇಕಾಗಿದೆ. ಪ್ರತಿ ತಿಂಗಳಿಗೊಮ್ಮೆ ಪ್ರತಿ ಹಂತದ ಎಂಟ್ರಿಗಳನ್ನು ದಾಖಲಿಸಲು ಬೇರೆ ಬೇರೆ ರೀತಿಯ ಸಾಪ್ಟ್‌ವೇರ್ ವಿನ್ಯಾಸ ಹಾಗೂ ಈ ತಂತ್ರಾಂಶವು ಹಲವು ಬಾರಿ ತಾಂತ್ರಿಕ ಸಮಸ್ಯೆಗೆ ಒಳಗಾಗುತ್ತಿರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಅಪ್‌ಡೇಟ್ ಆಗಿಲ್ಲ ಎನ್ನುತ್ತಾರೆ ನೌಕರರು. ಈ ಪಂಚತಂತ್ರ 2.0 ಒಂದು ಸಮಸ್ಯೆಗಳ ಆಗರವಾಗಿದೆ. ಇದರಲ್ಲಿ ಬಹಳಷ್ಟು ನ್ಯೂನತೆಗಳಿದ್ದು ಸರಿಯಾದ ರೀತಿಯಲ್ಲಿ ಅಪ್‌ಡೇಟ್ ಆಗಿಲ್ಲ ಎನ್ನುವುದು ನೌಕರರ ಆರೋಪ ಆಗಿದೆ.


ಪಿಡಿಒ ಬಯೋಮೆಟ್ರಿಕ್ ನೀಡದೆ ಪಂಚತಂತ್ರ ಲಾಗಿನ್ ಆಗಲ್ಲ..!
ಹೊಸ ಸಾಪ್ಟ್‌ವೇರ್‌ನಲ್ಲಿ ಎಲ್ಲಾ ಎಂಟ್ರಿಗಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಲಾಗಿನ್ ಮೂಲಕವೇ ಕ್ಲರ್ಕ್/ಡಾಟ ಎಂಟ್ರಿ ಅಪರೇಟರ್‌ಗಳು ನಿರ್ವಹಿಸಬೇಕಾಗುತ್ತದೆ. ಪಂಚತಂತ್ರ ಲಾಗಿನ್ ಆಗಬೇಕಾದರೆ ಪಿಡಿಒ ಬಯೋಮೆಟ್ರಿಕ್ ನೀಡಬೇಕಾಗುತ್ತದೆ. ಇದಕ್ಕಾಗಿ ಪಂಚಾಯತ್‌ಗಳಲ್ಲಿ ಪಿಡಿಒ ಅಗತ್ಯ. ಒಂದು ವೇಳೆ ಅಭಿವೃದ್ಧಿ ಅಧಿಕಾರಿಯವರು ಗ್ರಾಮಭೇಟಿ, ಮೀಟಿಂಗ್‌ಗಳಿಗೆ ಹೋದರೆ ಎಂಟ್ರಿ ಸಾಧ್ಯವಿಲ್ಲ, ಎರಡು ಪಂಚಾಯತ್‌ಗಳಲ್ಲಿ ಪ್ರಭಾರ ಹೊತ್ತಿರುವ ಪಿಡಿಒಗಳಿರುವ ಪಂಚಾಯತ್‌ಗಳಲ್ಲಿ ಎಂಟ್ರಿಯೇ ಆಗುತ್ತಿಲ್ಲ. ಕೆಲವು ಕಡೆಗಳಲ್ಲಿ ಪಿಡಿಒಗಳ ಸಹಕಾರ ಇಲ್ಲದೇ ಇರುವುದರಿಂದ ಎಂಟ್ರಿ ಸಾಧ್ಯವಾಗಿಲ್ಲ. ಇಲಾಖೆ ಇದ್ಯಾವುದನ್ನು ಪರಿಗಣಿಸದೆ ಕೇವಲ ನೌಕರರ ವೇತನಕ್ಕೆ ತಡೆ ನೀಡಿರುವುದು ಯಾವ ಸೀಮೆಯ ನ್ಯಾಯ ಎನ್ನುತ್ತಾರೆ ನೌಕರರು.


ತಾಂತ್ರಿಕ ಸಮಸ್ಯೆಗಳಿಂದ ತೊಂದರೆ
ಪಂಚಾಯತ್‌ನ ಎಲ್ಲಾ ಕಾರ್ಯಗಳು ಆನ್‌ಲೈನ್‌ನಲ್ಲಿಯೇ ಆಗುತ್ತಿದ್ದು ಎಲ್ಲಾ ಡಾಟಗಳನ್ನು ಆನ್‌ಲೈನ್ ಮೂಲಕವೇ ಎಂಟ್ರಿ ಮಾಡಬೇಕಾಗುತ್ತದೆ. ಹಳೆಯ ಪಂಚತಂತ್ರದಲ್ಲಿ ದಾಖಲಾದ ವಿವರ ಹೊಸ ಪಂಚತಂತ್ರ 2.0 ಸಾಪ್ಟ್‌ವೇರ್‌ಗೆ ದಾಖಲಿಸುವ ಸಂದರ್ಭ ಹಲವು ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿದೆ. ಕೆಲವೊಮ್ಮೆ ಆಸ್ತಿ ಲೆಕ್ಕಚಾರದಲ್ಲಿ ವ್ಯತ್ಯಸವಾಗುತ್ತಿದೆ. ತೆರಿಗೆ ವಿವರದಲ್ಲೂ ಗೊಂದಲಗಳು ಇವೆ.ಸರ್ವರ್ ಸಮಸ್ಯೆ ಬಹುತೇಕ ಪಂಚಾಯತ್‌ಗಳನ್ನು ಕಾಡುತ್ತಿದೆ. ಹೀಗಿದ್ದರೂ ಪಂಚತಂತ್ರ ಅಪ್‌ಡೇಟ್ ಮಾಡುತ್ತಿದ್ದರೂ ಇಲಾಖೆ ನೌಕರರ ಸಂಬಳಕ್ಕೆ ತಡೆ ನೀಡಿರುವುದು ಸರಿಯಾದ ಕ್ರಮ ಅಲ್ಲ ಎನ್ನುತ್ತಾರೆ ನೌಕರರು.


ಪ್ರಿಯಾಂಕ್ ಖರ್ಗೆಯವರೇ ಗಮನಿಸಿ
ಗ್ರಾಮ ಪಂಚಾಯತ್‌ಗಳಲ್ಲಿ ಕನಿಷ್ಠ ಕೂಲಿಗಾಗಿ ದುಡಿಯುವ ನೌಕರರ ಹಲವು ಸಮಸ್ಯೆಗಳಿದ್ದು ಹತ್ತು ಹಲವು ಬಾರಿ ಸರಕಾರದ ಗಮನಕ್ಕೂ ತಂದಿದ್ದಾರೆ. ಮುಖ್ಯವಾಗಿ ನೌಕರರಿಗೆ ಸಿ ಮತ್ತು ಡಿ ಗ್ರೂಪ್ ಮಾನ್ಯತೆ ನೀಡಬೇಕು ಎಂಬುದು ಹಲವು ವರ್ಷಗಳ ಬೇಡಿಕೆ ಆಗಿದೆ. ನೌಕರರು ಭವಿಷ್ಯ ನಿಧಿ, ಆರೋಗ್ಯ ಭದ್ರತೆ, ಸರಿಯಾದ ವೇತನ ಶ್ರೇಣಿ ಇಲ್ಲದೆ, ಉದ್ಯೋಗ ಭದ್ರತೆ ಇಲ್ಲದೇ ನಿವೃತ್ತಿ ಜೀವನಕ್ಕೆ ಭದ್ರತೆ ಇಲ್ಲದೆ ಕಳೆದ ಮೂರು ದಶಕಗಳಿಂದ ಕೇವಲ ಕನಿಷ್ಠ ಕೂಲಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಎಲ್ಲಾ ಸರಕಾರಿ ನೌಕರರಂತೆ ಪಂಚಾಯತ್ ನೌಕಕರಿಗೂ ಸೂಕ್ತ ಸ್ಥಾನಮಾನ ನೀಡಬೇಕಾಗಿದೆ. ನೌಕರರಿಗೆ ಸಿ ಮತ್ತು ಡಿ ಗ್ರೂಪ್ ಮಾನ್ಯತೆ ನೀಡಬೇಕು ಎನ್ನುವುದು ನೌಕರರ ಮನವಿಯಾಗಿದೆ.

ಪಂಚಾಯತ್ ಕಾರ್ಮಿಕರ ವೇತನವನ್ನು ಪಂಚತಂತ್ರದಲ್ಲಿ ತಡೆ ಹಿಡಿದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಇಲಾಖಾ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
ಪ್ರಿಯಾಂಕ್ ಖರ್ಗೆ, ಸಚಿವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ

ಪಂಚತಂತ್ರ 2.0ದಲ್ಲಿ ತೆರಿಗೆ ಪ್ರಗತಿಯಾಗಿಲ್ಲ ಎಂದು ಪಂಚಾಯತ್ ನೌಕರರನ್ನು ಮಾತ್ರ ಗುರಿಯಾಗಿಟ್ಟುಕೊಂಡು ವೇತನ ತಡೆ ಹಿಡಿದಿರುವುದು ವಿಚಾರ ಸರಿಯಲ್ಲ. ತೆರಿಗೆ ಪರಿಸ್ಕರಣೆ ಮಾಡಲು ಅವಕಾಶ ನೀಡಿರುವುದು ಪಿಡಿಓ ಲಾಗಿನ್ ನಲ್ಲಿ, ಈ ವ್ಯವಸ್ಥೆ ಪಂಚಾಯಿತಿ ನೌಕರರಿಗೆ ಅವಕಾಶ ನೀಡಬೇಕಿತ್ತು, ಅವೈಜ್ಞಾನಿಕ ಬದಲಾವಣೆ ಮಾಡುವ ಬದಲು, ಯುಸರ್ ಫ್ರೆಂಡ್ಲಿ ನೀಡಬಹುದಿತ್ತು. ತೆರಿಗೆ ಪರಿಷ್ಕರಣೆ ವಿಧಾನ ಇಲಾಖೆಯಲ್ಲಿಯೇ ಗೊಂದಲವಿದ್ದು ಪದೇ ಪದೇ ಬದಲಾವಣೆ ಮಾಡುವುದು ಸರಿಯಲ್ಲ, ಇದರಿಂದ ತಲಮಟ್ಟದ ನೌಕರರು ತೊಂದರೆ ಅನುಭವಿಸುತ್ತಿದ್ದಾರೆ. ಈ ವಿಚಾರ ಸಚಿವರ ಗಮನಕ್ಕೆ ಬಾರದೆ ಈ ರೀತಿಯ ನಿರ್ಧಾರವಾಗಿರುವುದರಿಂದ ಸಂಘದಿಂದ ಸಚಿವರ ಗಮನಕ್ಕೆ ತರಲಾಗಿದೆ. ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿನಲ್ಲಿ ಮಾನಸಿಕ ಒತ್ತಡದಿಂದ ಕೆಲಸ ಮಾಡುತ್ತಿರುವ ನೌಕರರು ಸರಕಾರ ನೀಡುವ ಕನಿಷ್ಠ ವೇತನಕ್ಕೆ ಪರದಾಡುವ ಪರಿಸ್ಥಿತಿ ಬಂದಿದೆ. ಪ್ರಗತಿಯನ್ನು ಮುಂದಿಟ್ಟುವೇತನ ತಡೆಹಿಡಿದದ್ದು ಸರಕಾರದ ನೀತಿ ಸರಿಯಲ್ಲ. ಇಂತಹ ಧೋರಣೆಗಳನ್ನು ಬದಿಗಿಟ್ಟು ಕೂಡಲೇ ಬಡ ನೌಕರರಿಗೆ ವೇತನ ಪಾವತಿಸಲು ಪಂಚತಂತ್ರ 2.0ದಲ್ಲಿ ಎಚ್‌ಆರ್‌ಎಂಎಸ್ ಮಾಡ್ಯುಲ್ ಅನ್ನು ಅನ್ಲಾಕ್ ಮಾಡಿ ಅವಕಾಶ ನೀಡುವಂತೆ ಒತ್ತಾಯಿಸುತ್ತೇನೆ.
-ಡಾ. ದೇವಿಪ್ರಸಾದ್ ಬೊಲ್ಮ, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್. ಡಿ. ಪಿ. ಆರ್. ಬೆಂಗಳೂರು

LEAVE A REPLY

Please enter your comment!
Please enter your name here