ನಿಡ್ಪಳ್ಳಿ; ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಅನುತ್ತೀರ್ಣರಾಗಿದ್ದ ಒರ್ವ ವಿದ್ಯಾರ್ಥಿನಿ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮರು ಮೌಲ್ಯಮಾಪನದಲ್ಲಿ ತೇರ್ಗಡೆ ಹೊಂದಿದ ಕಾರಣ ಶಾಲೆಗೆ ಪ್ರಥಮ ಬಾರಿಗೆ 100% ಫಲಿತಾಂಶ ಬಂದಿರುತ್ತದೆ.
ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳಲ್ಲಿ ಒರ್ವ ವಿದ್ಯಾರ್ಥಿನಿ ಶ್ರೇಯಾ.ಎಲ್.ಜಿ ವಿಜ್ಞಾನ ವಿಷಯದಲ್ಲಿ 14 ಅಂಕ ಪಡೆದು ಅನುತ್ತೀರ್ಣಳಾದ ಕಾರಣ ನೂರು ಫಲಿತಾಂಶ ಪಡೆಯುವಲ್ಲಿ ಶಾಲೆ ವಂಚಿತವಾಗಿತ್ತು. ಈಗ ಮರು ಮೌಲ್ಯಮಾಪನ ಮಾಡಿಸಿದ ಪರಿಣಾಮ ಹೆಚ್ಚುವರಿ 6 ಅಂಕ ಪಡೆದು ಅವಳು ಒಟ್ಟು 406 ಅಂಕಗಳೊಂದಿಗೆ ಉತ್ತೀರ್ಣಳಾದ ಕಾರಣ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲಾ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ 100% ಫಲಿತಾಂಶ ಬಂದಿರುತ್ತದೆ.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಈ ವರ್ಷ ಶೇ.100 ಫಲಿತಾಂಶ ಬಂದು ಹೊಸ ದಾಖಲೆ ನಿರ್ಮಿಸಬೇಕೆಂದು ನಾವೆಲ್ಲಾ ಬಹಳ ಶ್ರಮ ಪಟ್ಟಿದ್ದೇವು. ಮಕ್ಕಳಿಗೆ ವಿಶೇಷ ತರಗತಿ ನಡೆಸಿ ಶ್ರಮ ವಹಿಸಲು ಎಲ್ಲಾ ಶಿಕ್ಷಕರು, ಪೋಷಕರು ಹಾಗೂ ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರು ಮತ್ತು ಸದಸ್ಯರು ಬಹಳ ಸಹಕಾರ ನೀಡಿದ್ದರು.ಇವರೆಲ್ಲರ ಉತ್ತಮ ಸಹಕಾರ ಪ್ರೊತ್ಸಾಹ ಮತ್ತು ಮಾಜಿ ಶಾಸಕರ ಮಾರ್ಗದರ್ಶನ ನಮಗೆಲ್ಲಾ ಪ್ರೇರಣೆ ನೀಡಿದ್ದು ಈ ಫಲಿತಾಂಶ ನಮಗೆ ಸಂತಸ ತಂದಿದೆ.ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
—-ವಿಜಯ ಕುಮಾರ್, ಮುಖ್ಯ ಗುರು ಬೆಟ್ಟಂಪಾಡಿ ಸ.ಪ್ರೌ .ಶಾಲೆ