ಜನಸಾಮಾನ್ಯರಿಗೆ, ಬಡವರಿಗೆ ತೊಂದರೆಯಾದರೆ ಸಹಿಸಲ್ಲ-ನೆರೆ ಮುಂಜಾಗೃತ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: ಇನ್ನೇನು ಮಳೆಗಾಲ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳು ಈಗಿಂದಲೇ ಸನ್ನದ್ಧರಾಗಬೇಕು. ಯಾವುದೇ ಕಾರಣಕ್ಕೂ ಬಡವರಿಗೆ, ಜನಸಾಮಾನ್ಯರಿಗೆ ತೊಂದರೆ ಆದರೆ ಅದನ್ನು ನಾನು ಸಹಿಸಲಾರೆ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.


ಉಪ್ಪಿನಂಗಡಿಯ ನೇತ್ರಾವತಿ ಸಮುದಾಯ ಭವನದಲ್ಲಿ ಪುತ್ತೂರು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ನಡೆದ ಉಪ್ಪಿನಂಗಡಿ ಕಂದಾಯ ಹೋಬಳಿಯ ನೆರೆ ಮುಂಜಾಗೃತಾ ಸಭೆಯಲ್ಲಿ ಮಾತನಾಡಿದ ಅವರು, ಎರಡು ನದಿಗಳು ಹಾದು ಹೋಗುವ ಉಪ್ಪಿನಂಗಡಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳು ನೆರೆ ಬಾಧಿತವಾಗುವ ಪ್ರದೇಶಗಳಾಗಿವೆ. ಇದನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿ ವರ್ಗ ಈಗಿನಿಂದಲೇ ಕಾರ್ಯಪ್ರವೃತರಾಗಬೇಕಿದೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿ ಮನೆಗಳು ಹಾನಿಗೊಳ್ಳುವಂತಹ ಪ್ರಕರಣಗಳು ನಡೆದರೆ ಅವರಿಗೆ ಸರಕಾರದ ತಕ್ಷಣದ ಪರಿಹಾರ 10 ಸಾವಿರ ರೂಪಾಯಿಯನ್ನು ತುರ್ತಾಗಿ ನೀಡುವ ಕೆಲಸ ಆಗಬೇಕು. ಆ ಬಳಿಕ ವರದಿ ತಯಾರಿಸಿ ಹೆಚ್ಚಿನ ಪರಿಹಾರ ಧನಕ್ಕೆ ಸರಕಾರಕ್ಕೆ ಕಳುಹಿಸಿ ಕೊಡುವ ಕೆಲಸಗಳನ್ನು ಅಧಿಕಾರಿಗಳು ಶೀಘ್ರವಾಗಿ ಮಾಡಬೇಕು. ಮನೆಗಳ ಮೇಲೆ ಬೀಳಲು ಆಗಿರುವ ಮರಗಳನ್ನು ಕಡಿಯಲು ಅನುಮತಿಗಾಗಿ ಜನರು ಅರಣ್ಯ ಇಲಾಖೆಗೆ ಪತ್ರ ಬರೆದರೆ, ಅದಕ್ಕೆ ತಕ್ಷಣದ ಪರಿಹಾರ ಕಲ್ಪಿಸುವ ಕಾರ್ಯ ಅಧಿಕಾರಿಗಳಿಂದ ನಡೆಯಬೇಕು. ಒಂದು ವೇಳೆ ಅಂತಹ ಪತ್ರಕ್ಕೆ ಅರಣ್ಯಾಧಿಕಾರಿಗಳಿಂದ ಸ್ಪಂದನೆ ದೊರಕದಿದ್ದಲ್ಲಿ ನೀವೇ ಅಂತಹ ಮರಗಳನ್ನು ಕಡಿದು ತೆಗೆಯಿರಿ. ಮತ್ತೇನಾಗುತ್ತೋ ನಾನು ನೋಡಿಕೊಳ್ಳುತ್ತೇನೆ ಎಂದು ಸಾರ್ವಜನಿಕರಿಗೆ ತಿಳಿಸಿದ ಅವರು, ಅಧಿಕಾರಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸದೇ ಜನರಿಗೆ, ಬಡವರಿಗೆ ತೊಂದರೆಗಳುಂಟಾದರೆ ಅದನ್ನು ಖಂಡಿತಾ ನಾನು ಸಹಿಸಲಾರೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ಉಪ್ಪಿನಂಗಡಿಯಲ್ಲಿ ಜಲ ಜೀವನ್ ಮೆಷಿನ್‌ನ ಅಪೂರ್ಣ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದು, ಆಗ ಮಾತನಾಡಿದ ಶಾಸಕರು, ಹಿಂದಿನ ಸರಕಾರವಿದ್ದಾಗ ಈ ಕಾಮಗಾರಿಗಳ ಗುತ್ತಿಗೆಯನ್ನು ನೀಡಲಾಗಿದೆ. ಇದರ ಗುತ್ತಿಗೆಯನ್ನು ಪಡೆದವರು ಇಲ್ಲಿಯವರಲ್ಲ. ಬೇರೆ ಕಡೆಯವರು ಪಡೆದಿದ್ದಾರೆ. ಕಾಮಗಾರಿ ಸರಿಯಾಗಿ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಹಾಕೋದು ದೊಡ್ಡ ಕೆಲಸವೇನಲ್ಲ. ಆದರೆ ಆಗ ಗುತ್ತಿಗೆದಾರರು ಅದರ ಮೇಲೆ ಕೋರ್ಟ್‌ಗೆ ಹೋದರೆ ಮತ್ತೆ ನಮ್ಮ ಕೆಲಸ ಅಪೂರ್ಣವಾಗಿಯೇ ಉಳಿಯಲಿದೆ. ಆದ್ದರಿಂದ ಅವರು ಹಿಡಿದ ಕೆಲಸವನ್ನು ಬೇಗ ಮುಗಿಸಿಕೊಡುವ ಹಾಗೆ ಅವರ ಮನವೊಲಿಸುವ ಕೆಲಸ ಮಾಡೋಣ. ಆ ಬಳಿಕ ಬೇಕಾದರೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರುವ ಗುತ್ತಿಗೆದಾರರಿಗೆ ಕೆಲಸ ಕೊಡದಿರೋಣ ಎಂದರಲ್ಲದೆ, ಜೆಜೆಎಂನಡಿ ಕೊಳವೆ ಬಾವಿಗೆ ಸಂಪರ್ಕ ಕೊಡಬೇಕಾದರೆ ಮೆಸ್ಕಾಂನವರು ಅದಕ್ಕೆ ಪ್ರತ್ಯೇಕ ಟಿಸಿ ಹಾಕಬೇಕು ಎಂದು ಕೇಳುತ್ತೀರಿ. ಇದಕ್ಕೆ ಹಣ ಹೊಂದಿಸಲು ಕೆಲ ಗ್ರಾ.ಪಂ.ಗಳಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚಿನ ಕಡೆ ಕೊಳವೆ ಬಾವಿ ಇದ್ದರೂ, ಅದಕ್ಕೆ ಸಂಪರ್ಕ ಕೊಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕ ಕುಡಿಯುವ ನೀರಿನ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಕೇಳುವುದು ಸರಿಯಲ್ಲ. ಇದಕ್ಕೆ ಪ್ರತ್ಯೇಕ ಟಿಸಿ ಬೇಡವೆಂದು ಸರಕಾರಕ್ಕೆ ಬರೆಯಿರಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೇ, ವಿದ್ಯುತ್ ಲೈನ್‌ಗೆ ತಾಗಿಕೊಂಡಿರುವ ಗೆಲ್ಲುಗಳ ಕಟಾವು ಮಾಡಲು ಸೂಚಿಸಿದರು.


ಉಪ್ಪಿನಂಗಡಿ ಗ್ರಾ.ಪಂ. ಸದಸ್ಯ ಸಣ್ಣಣ್ಣ ಮಾತನಾಡಿ, ಗ್ರಾ.ಪಂ. ವತಿಯಿಂದ ನೂಜಿ ಎಂಬಲ್ಲಿ ಕೊಳವೆ ಬಾವಿ ತೋಡಿ ಒಂದು ವರ್ಷವಾಗಿದೆ. ಆದರೆ ಅದಕ್ಕಿನ್ನೂ ವಿದ್ಯುತ್ ಸಂಪರ್ಕ ನೀಡಿಲ್ಲ ಎಂದರು. ಈ ಬಗ್ಗೆ ಶಾಸಕರು ಗ್ರಾ.ಪಂ. ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್ ಅವರಲ್ಲಿ ಮಾಹಿತಿ ಕೇಳಿದ್ದು, ಚುನಾವಣಾ ನೀತಿ ಸಂಹಿತೆ ಇದ್ದ ಕಾರಣ ವಿಳಂಬವಾಗಿದೆ ಎಂದರು. ಪ್ರತಿಕ್ರಿಯಿಸಿದ ಶಾಸಕರು, 10 ದಿನದೊಳಗೆ ಇಲ್ಲಿನ ಸಮಸ್ಯೆ ಪರಿಹರಿಸಬೇಕು ಎಂದು ಪಿಡಿಒಗೆ ಗಡುವು ನೀಡಿದರು.


ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ರೈ ಅವರು ಆರೋಗ್ಯ ಇಲಾಖೆಯ ಬಗ್ಗೆ ಮಾಹಿತಿ ನೀಡುತ್ತಿರುವಾಗ ಪ್ರತಿಕ್ರಿಯಿಸಿದ ಸಾರ್ವಜನಿಕರು ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಉತ್ತಮ ಕಟ್ಟಡ ಸೌಲಭ್ಯವಿದೆ. ಅದರೆ ಇಲ್ಲಿ ವೈದ್ಯರು ಇಲ್ಲ. ಎಕ್ಸ್‌ರೇ ಮೆಷಿನ್ ಇದ್ದರೂ ಅದಕ್ಕೆ ಟೆಕ್ನಿಷಿಯನ್ ಇಲ್ಲ ಎಂದರು. ಆಗ ಡಾ. ದೀಪಕ್ ರೈ ಪ್ರತಿಕ್ರಿಯಿಸಿ, ಈಗ ಒಬ್ಬರು ವೈದ್ಯರು ಇದ್ದಾರೆ. ಇನ್ನು ಗುತ್ತಿಗೆ ಆಧಾರದಲ್ಲಿ ಒಬ್ಬ ವೈದ್ಯರ ನೇಮಕಾತಿ ನಡೆಯಲಿದೆ. ಎಕ್ಸ್‌ರೇ ಟೆಕ್ನಿಷಿಯನ್‌ನ ನೇಮಕಾತಿಯೂ ನಡೆಯಲಿದೆ. ಪುತ್ತೂರು ತಾಲೂಕಿನ ಸರಕಾರಿ ಆಸ್ಪತ್ರೆಯೊಂದಿಗೆ ಎರಡು ಮೆಡಿಕಲ್ ಕಾಲೇಜುಗಳು ಟೈ ಅಪ್ ಮಾಡಿಕೊಂಡಿವೆ. 40 ಜನ ಪಿ.ಜಿ. (ಪೋಸ್ಟ್ ಗ್ರಾಜ್ಯುವೇಟೆಡ್) ವೈದ್ಯರು ಸೇವೆ ನೀಡುತ್ತಿದ್ದಾರೆ ಎಂದರು. ಆಗ ಇದರ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಇಲ್ಲಿ ವೈದ್ಯರಿಲ್ಲ ಎಂದು ಜನಗಳು ಖಾಸಗಿ ಆಸ್ಪತ್ರೆಗಳತ್ತ ಹೋಗುತ್ತಾರೆ ಎಂದರು. ಆಗ ಶಾಸಕ ಅಶೋಕ್ ಕುಮಾರ್ ರೈ ಅವರು ಸರಕಾರಿ ಆಸ್ಪತ್ರೆಯಲ್ಲಿರುವ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಕಾರ್ಯವಾಗಬೇಕು. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಬಾರದಂತೆ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.


ರಾಷ್ಟ್ರೀಯ ಹೆದ್ದಾರಿಯಿಂದ ಹಿರೇಬಂಡಾಡಿ ರಸ್ತೆಗೆ ಸಂಪರ್ಕ ಪಡೆಯುವಲ್ಲಿ ರಸ್ತೆಯ ಮೇಲೆಯೇ ಕಳೆದ ಮಳೆಗಾಲದಲ್ಲಿ ಕಲ್ಲುಗಳು ಜರಿದು ಬಿದ್ದಿದೆ. ಅದನ್ನು ಇನ್ನೂ ತೆರವುಗೊಳಿಸದಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ರವರನ್ನು ಶಾಸಕರು ಪ್ರಶ್ನಿಸಿದರು. ಆ ಸಂದರ್ಭ ಉತ್ತರಿಸಿದ ಎಂಜಿನಿಯರ್ ಅದು ಸಮೀಪದ ಜಾಗದಲ್ಲಿರುವ ನಾಗನ ಕಟ್ಟೆಯ ಕಲ್ಲುಗಳು ರಸ್ತೆಗೆ ಬಿದ್ದಿವೆ. ಅದನ್ನು ತೆರವು ಮಾಡಲು ಹೋದರೆ ನಾಗನ ಕಲ್ಲನ್ನು ಅಲ್ಲಿಂದ ತೆರವು ಮಾಡಬೇಕು. ಆದ್ದರಿಂದ ಅದು ಹಾಗೆಯೇ ಉಳಿದಿದೆ ಎಂದರು. ಆಗ ಅಶೋಕ್ ಕುಮಾರ್ ರೈ ಮಾತನಾಡಿ, ನಾಗನ ಕಟ್ಟೆಯ ಕಲ್ಲುಗಳು ಹೀಗೆ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಕ್ಕಿಂತ ಅದು ವ್ಯವಸ್ಥಿತ ಜಾಗದಲ್ಲಿದ್ದರೆ ಉತ್ತಮವಲ್ಲವೇ? ಅಲ್ಲಿನ ನಾಗನ ಕಲ್ಲನ್ನು ಅಲ್ಲೇ ಒಪ್ಪ ಓರಣವಾಗಿ ಇಟ್ಟು ರಸ್ತೆಯಲ್ಲಿ ಬಿದ್ದಿದ್ದ ಕಲ್ಲುಗಳನ್ನು ತೆಗೆಯಿರಿ ಎಂದರು. ಅದಕ್ಕೆ ಎಂಜಿನಿಯರ್ ಅವರು ಅದನ್ನು ಮಾಡಲು ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಬೇಕಾಗಿದೆ. ಆ ಜಾಗದವರು ಇಲ್ಲಿ ಇಲ್ಲ. ಆದ್ದರಿಂದ ಅದನ್ನು ಮುಟ್ಟಲು ಯಾರೂ ಕೇಳುತ್ತಿಲ್ಲ ಎಂದರು. ಅದಕ್ಕೆ ಶಾಸಕರು, ಇದಕ್ಕೊಂದು ಊರವರನ್ನು ಸೇರಿಸಿಕೊಂಡು ಸಮಿತಿ ಮಾಡಿ ಮುಂದುವರಿಯಿರಿ. ಕಟ್ಟೆಯನ್ನು ನಿರ್ಮಿಸಿ ಅದರಲ್ಲಿ ನಾಗನ ಕಲ್ಲನ್ನು ಪ್ರತಿಷ್ಟೆ ಮಾಡಿ. ನೀವು ಇದಕ್ಕೆ ಮುಂದುವರಿದರೆ ನಿಮಗೆ ಬೇಕಾದ ಎಲ್ಲಾ ಸಹಕಾರ ಲೋಕೋಪಯೋಗಿ ಇಲಾಖೆ ಮಾಡಲಿದೆ ಎಂದರಲ್ಲದೆ, ಸಭೆಯಲ್ಲಿದ್ದ ಪ್ರಮುಖರಾದ ಕೃಷ್ಣರಾವ್ ಆರ್ತಿಲರಲ್ಲಿ ನಿಮ್ಮ ನೇತೃತ್ವದಲ್ಲೇ ಇದು ಆಗಲಿ ಎಂದರು.


ರಸ್ತೆ ಬದಿ ಇರುವ ಅಪಾಯಕಾರಿ ಮರಗಳನ್ನು ಹಾಗೂ ಹೆದ್ದಾರಿ ಬದಿಗಳಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಹಾಲ್ಮಡ್ಡಿ (ಧೂಪದ) ಮರಗಳ ತೆರವಿಗೆ ಶಾಸಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಯಪ್ರಕಾಶ್ ಬದಿನಾರು ಅವರು ಕೋಡಿಂಬಾಡಿ ಗ್ರಾಮದಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿರುವ ಜಾಗದ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ನಿವೇಶನದಲ್ಲಿ ಯಾರೆಲ್ಲಾ ಹಕ್ಕು ಪತ್ರ ಪಡೆದುಕೊಂಡಿದ್ದಾರೋ ಅವರೆಲ್ಲರೂ ಮನೆ ನಿರ್ಮಾಣ ಮಾಡುವಂತೆ ಆದೇಶಿಸಿದರು. ಮನೆ ಕಟ್ಟುವ ಜಾಗದಲ್ಲಿ ಮರಗಳಿದ್ದರೆ ಆ ಜಾಗದಲ್ಲಿ ಮರಗಳನ್ನು ಕಡಿಯಲು ಇಲಾಖೆಯು ಕ್ರಮ ಕೈಗೊಳ್ಳುತ್ತದೆ. ಮನೆ ನಿವೇಶನ ಹೊರತುಪಡಿಸಿ ಉಳಿದ ಜಾಗದಲ್ಲಿರುವ ಮರಗಳನ್ನು ಉಳಿಸಿಕೊಳ್ಳಬೇಕು. ಸದ್ರಿ 1.34 ಎಕ್ರೆಯಲ್ಲಿ 29 ಮಂದಿಗೆ ನಿವೇಶನದ ಹಕ್ಕು ಪತ್ರ ನೀಡಲಾಗಿದ್ದು, ಅವರೆಲ್ಲರೂ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.


ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳಿಂದ ಮಳೆಗಾಲದ ಸನ್ನದ್ಧತೆಯ ಬಗ್ಗೆ ಮಾಹಿತಿ ಪಡೆದುಕೊಂಡ ಶಾಸಕರು ಅವರಿಗೆ ಸೂಕ್ತ ಸಲಹೆ- ಸೂಚನೆಗಳನ್ನು ನೀಡಿದರು.
ಪುತ್ತೂರು ಸಹಾಯಕ ಉಪವಿಭಾಗಾಧಿಕಾರಿ ಗಿರೀಶ್ ನಂದನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ತಹಶೀಲ್ದಾರ್ ಶಿವಶಂಕರ ಜೆ., ಪುತ್ತೂರು ಡಿವೈಎಸ್ಪಿ ಗಾನಕುಮಾರಿ, ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಉಷಾಚಂದ್ರ ಮುಳಿಯ ಉಪಸ್ಥಿತರಿದ್ದರು. ಸಭೆಯಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ಅಬ್ದುರ್ರಹ್ಮಾನ್ ಕೆ., ಅಬ್ದುಲ್ ರಶೀದ್, ಧನಂಜಯ ನಟ್ಟಿಬೈಲು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಪ್ರಮುಖರಾದ ಅಶ್ರಫ್ ಬಸ್ತಿಕ್ಕಾರ್, ಹರೀಶ್ ನಾಯಕ್ ನಟ್ಟಿಬೈಲು, ರಾಘವೇಂದ್ರ ನಾಯಕ್ ನಟ್ಟಿಬೈಲು, ಯು.ರಾಮ, ಆದಂ ಕೊಪ್ಪಳ, ವೆಂಕಪ್ಪ ಮರುವೇಲು ಮತ್ತಿತರರು ಉಪಸ್ಥಿತರಿದ್ದರು.
ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಸ್ವಾಗತಿಸಿ, ವಂದಿಸಿದರು. ಕಂದಾಯ ನಿರೀಕ್ಷಕ ರಂಜನ್, ಗ್ರಾಮಕರಣಿಕರಾದ ರಮೇಶ್ ಕೆ., ನಮಿತಾ, ಶರಣ್ಯ, ನರಿಯಪ್ಪ, ಜಂಗಪ್ಪ, ಗ್ರಾಮ ಸಹಾಯಕರಾದ ಯತೀಶ, ದಿವಾಕರ, ಪುರುಷೋತ್ತಮ, ವೀರಪ್ಪ ಗೌಡ, ವಸಂತ ಗೌಡ, ಮನೋಹರ, ಬಾಲಕೃಷ್ಣ ಗೌಡ ವಿವಿಧ ಸಹಕರಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಈ ಬಾರಿ ಮಳೆಗಾಲದಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರ ಬಳಿ ತಿಳಿಸಿದರು. ಹಲವು ಕಡೆ ಇದ್ದ ಮೋರಿ, ಚರಂಡಿಗಳನ್ನು ಬಂದ್ ಮಾಡಲಾಗಿದ್ದು, ಇದರಿಂದ ಈ ಬಾರಿ ಈ ಭಾಗದಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಸಮಸ್ಯೆಗಳನ್ನು ಸಾವಕಾಶವಾಗಿ ಆಲಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ಹೆದ್ದಾರಿ ಇಲಾಖೆ ಅಧಿಕಾರಿಯವರನ್ನು ಕರೆದು, ಸಮಸ್ಯೆಗಳನ್ನು ಮಳೆಗಾಲದ ಮುಂಚಿತವಾಗಿ ಪರಿಹರಿಸಬೇಕು ಎಂದು ಸೂಚನೆ ನೀಡಿದರಲ್ಲದೆ, ಮುಂದಿನ ವಾರ ಹೆದ್ದಾರಿ ಇಲಾಖೆಯ ಎಂಜಿನಿಯರ್‌ರವರೊಂದಿಗೆ ಸಮಸ್ಯೆಗಳು ಇರುವಲ್ಲಿಗೆ ಖುದ್ದಾಗಿ ಬಂದು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

`ಸುದ್ದಿ’ ಸಸ್ಯ ಜಾತ್ರೆಯ ಬಗ್ಗೆ ಪ್ರಶಂಸೆ
ತೋಟಗಾರಿಕಾ ಹಾಗೂ ಕೃಷಿ ಇಲಾಖೆಯ ಅಧಿಕಾರಿಯೊಂದಿಗೆ ಮಾತನಾಡುತ್ತಾ, ಇಲಾಖೆಯ ಸೌಲಭ್ಯಗಳನ್ನು ಜನರಿಗೆ ತಿಳಿಸುವ ಪ್ರಯತ್ನಗಳು ಅಧಿಕಾರಿಗಳಿಂದ ನಡೆಯಬೇಕು. ಕೆಲವು ತಿಂಗಳ ಹಿಂದೆ ಸುದ್ದಿ ಬಿಡುಗಡೆ ಪತ್ರಿಕೆಯವರು ಪುತ್ತೂರಿನಲ್ಲಿ ಸಸ್ಯ ಜಾತ್ರೆಯನ್ನು ಆಯೋಜಿಸಿದ್ದು, ಇದು ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಸುದ್ದಿ ಬಿಡುಗಡೆಯ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಕೃಷಿಕರಿಗೆ ಅನುಕೂಲವಾಗುವಂತಹ ಇಂತಹ ಮೇಳಗಳನ್ನು ಪತ್ರಿಕೆಯೊಂದು ಸಂಘಟಿಸಲು ಸಾಧ್ಯವಾಗುತ್ತದೆ ಎಂದರೆ ಇಲಾಖೆಗಳಿಗೆ ಯಾಕೆ ಸಾಧ್ಯವಾಗುತ್ತಿಲ್ಲ. ಜನರಿಗೆ ಅನುಕೂಲವಾಗುವಂತಹ ಇಂತಹ ಮೇಳಗಳನ್ನು ಖಾಸಗಿ ಸಂಘ- ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಲಾಖೆಯವರು ಸಂಘಟಿಸಿ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here