ಪುತ್ತೂರು: ವರುಣನ ಕೃಪೆ ಮತ್ತು ಲೋಕಕ್ಷೇಮಕ್ಕಾಗಿ ಜೂ. 11ರಂದು ಬೆಳಿಗೆ ಗಂಟೆ 8 ರಿಂದ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ರುದ್ರಪಠಣ, ಪರ್ಜನ್ಯ ಜಪ, ಭಕ್ತರಿಂದ ಸಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಅವರು ಮಾಹಿತಿ ನೀಡಿದ್ದಾರೆ.
ವೇದಗಳೆಂಬ ಸಾಗರದಲ್ಲಿ ಪಾಪ ವಿಮೋಚನೆಗಾಗಿಯೂ ಸರ್ವೈಶ್ವರ್ಯಲಾಭಕ್ಕಾಗಿಯೂ ಇರುವ ಯಜುರ್ವೇದ ಸಂಹಿತಾಂತರ್ಗತ ರುದ್ರಾಧ್ಯಾಯವು ಶ್ರೀ ರುದ್ರನ ಪ್ರೀತಿಗೋಸ್ಕರವಾಗಿ ಪಠಿಸಲು ಅತ್ಯಂತ ಪ್ರಶಸ್ತವಾದ ಮಂತ್ರ. ಅದೇ ರೀತಿಯಾಗಿ ರುದ್ರ ಪ್ರೀತಿಗಾಗಿ ರುದ್ರಾಧ್ಯಾಯದ ಪಠಣ, ಪಠಣದೊಂದಿಗಿನ ಅಭಿಷೇಕವು ಅತ್ಯಂತ ಪ್ರಭಾವವುಳ್ಳದ್ದಾಗಿದ್ದು ಇದರಿಂದ ಆ ರುದ್ರನು ಸಂತುಷ್ಟನಾಗುತ್ತಾನೆ. ಹೀಗೆ ಸಂತುಷ್ಟನಾದ ರುದ್ರನು, ವೃಷ್ಟಿಯನ್ನು ಅನುಗ್ರಹಿಸಿ ಸಕಲ ಜಂತುಗಳಿಗೂ ಅಭಯವನ್ನು ನೀಡುತ್ತಾನೆ ಎನ್ನುವ ದೃಷ್ಟಿಯಿಂದ ಶ್ರೀ ರುದ್ರಾಧ್ಯಾಯದ ಪಠಣವನ್ನು ಹಮ್ಮಿಕೊಂಡಿದ್ದೇವೆ ಇದರೊಂದಿಗೆ ಹೆಸರೇ ತಿಳಿಸುವಂತೆ ಮಳೆಯ ಸಮೃದ್ಧಿಗೋಸ್ಕರ ಪರ್ಜನ್ಯ ಸೂಕ್ತದ ಪುರಶ್ಚರಣೆಯು ನಡೆಯುತ್ತದೆ. ಸಕಾಲದಲ್ಲಿ ಬರದಿರುವಂತಹ ವೃಷ್ಟಿಯಿಂದ ತತ್ತರಿಸಿದ ನಾವುಗಳು ರುದ್ರಧ್ಯಾಯವನ್ನು ಪಠಿಸಿ ಆ ಭಗವಂತನ ಪರಮೇಶ್ವರನ ಅನುಗ್ರಹಕ್ಕೆ ಪಾತ್ರರಾಗಿ ವೃಷ್ಟಿಯನ್ನು ಪಡೆದು ಸಕಲ ಸಸ್ಯ ಸಂಪತ್ತನ್ನು, ಸಮೃದ್ಧಿಯನ್ನು ಪಡೆಯುವುದಕ್ಕಾಗಿ ಎಲ್ಲರ ಸಹಕಾರವನ್ನು ಅಪೇಕ್ಷಿಸುತ್ತೆವೆ ಎಂದು ಅವರು ತಿಳಿಸಿದ್ದಾರೆ.