ಪುತ್ತೂರು:ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ವತಿಯಿಂದ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕ ಡಾ.ಎಂ. ಮೋಹನ ಆಳ್ವರವರಿಗೆ ಸ್ವರ್ಣ ಸಾಧನಾ ಪ್ರಶಸ್ತಿ’ ಪ್ರದಾನ ಸಮಾರಂಭ ಹಾಗೂ ಸಂಘದ ವಾರ್ಷಿಕ ಮಹಾಸಭೆಯು ಜೂ.17ರಂದು ಬಪ್ಪಳಿಗೆ ಜೈನ ಭವನದ ವಠಾರದಲ್ಲಿ ನಡೆಯಲಿದೆ ಎಂದು ಸಂಘಟ ಅಧ್ಯಕ್ಷ ಐತ್ತಪ್ಪ ನಾಯ್ಕ ತಿಳಿಸಿದರು.
ಜೂ.17ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ಸಾಧಕರನ್ನು ಗುರುತಿಸಿ ಸ್ವರ್ಣ ಸಾಧನಾ ಪ್ರಶಸ್ತಿ’ಯನ್ನು ನೀಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿಯನ್ನು ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾಗಿರುವ ಡಾ. ಎಂ. ಮೋಹನ ಆಳ್ವರವರಿಗೆ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯ ಜೊತೆಗೆ ರೂ.15,000 ನಗದು ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈಯವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ವೈ ಶಿವರಾಮಯ್ಯ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇತಿಹಾಸ ಸಂಶೋಧಕರಾಗಿರುವ ನಿವೃತ್ತ ಪ್ರಾಧ್ಯಾಪಕ ಡಾ| ಪುಂಡಿಕಾ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಘದ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದ ವಿಶಿಷ್ಠ ಸಾಧನೆ ಮಾಡಿದ ಮೂಡಬಿದರೆ ಆಳ್ವಾಸ್ ಕಾಲೇಜಿನ ಅನನ್ಯ ಕೆ.ಎ., ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ಉತ್ತಮ್ ಜಿ., ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಹಿಮಾನಿ ಎ.ಸಿ. ಹಾಗೂ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ತೇಜಸ್‌ವರನ್ನು ಅಭಿನಂದಿಸಲಾಗುವುದು.
2023 ಮಾರ್ಚ್ 31ಕ್ಕೆ 75 ವರ್ಷ ಪೂರ್ಣಗೊಳಿಸಿದ 38 ಮಂದಿ ಸದಸ್ಯರು, 80 ವರ್ಷ ಪೂರ್ಣಗೊಳಿಸಿದ 12 ಮಂದಿ ಸದಸ್ಯರು ಹಾಗೂ 85 ವರ್ಷ ಪೂರ್ಣಗೊಳಿಸಿದ 11 ಮಂದಿ ಸೇರಿದಂತೆ ಒಟ್ಟು 61 ಮಂದಿ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಗುವುದು. ಸನ್ಮಾನ ಕಾರ್ಯಕ್ರಮದ ಬಳಿಕ ಸಂಘದ ವಾರ್ಷಿಕ ಮಹಾಸಭೆಯು ನಡೆಯಲಿರುವುದಾಗಿ ಅವರು ತಿಳಿಸಿದರು.
ಸಂಘದ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ , ಕೃಷಿ ಹಾಗೂ ನೀರಾವರಿ ಕ್ಷೇತ್ರದ ಸಾಧಕರಿಗೆ ಸ್ವರ್ಣಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಪ್ರಥಮ ವರ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿ ಮತ್ತು ನೀರಾವರಿ ಕ್ಷೇತ್ರದ ಸಾಧಕ ಅಮೈ ಮಹಾಲಿಂಗ ನಾಯ್ಕರವರಿಗೆ ನೀಡಿ ಗೌರವಿಸಲಾಗಿದೆ. ಎರಡನೇ ವರ್ಷದ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕ ಡಾ.ಎಂ ಮೋಹನ ಆಳ್ವರವರಿಗೆ ನೀಡಿ ಗೌರವಿಸಲಾಗುವುದು. ಸದಸ್ಯರ ಮೂಲಕವೇ ಸಂಘ ನಡೆಯುತ್ತಿದೆ. ಹೊರಗಿನಿಂದ ಯಾವುದೇ ದೇಣಿಗೆ ಸಂಗ್ರಹ ಮಾಡುವುದಿಲ್ಲ. ರೂ.15 ಲಕ್ಷ ಮೊತ್ತದ ಸಂಘದ ಕಚೇರಿಯನ್ನು ಲೀಸಿಗೆ ಪಡೆದುಕೊಂಡಿದ್ದು ಈ ಮೊತ್ತವನ್ನು ಸಂಘದ ಸದಸ್ಯರಿಂದಲೇ ಸಂಗ್ರಹಿಸಲಾಗಿದೆ. ಸಮಾಜದಿಂದ ಸಂಗ್ರಹ ಮಾಡುವುದಿಲ್ಲ ಎಂಬ ಗುರಿಯನ್ನು ಹಾಕಿಕೊಳ್ಳಲಾಗಿದೆ. ಸಂಘದಲ್ಲಿ ಒಟ್ಟು 937 ಮಂದಿ ಸದಸ್ಯರಿದ್ದಾರೆ. ವರ್ಷದಿಂದ ವರ್ಷಕ್ಕೆ ಸದಸ್ಯರ ಸಂಖ್ಯೆ ವೃದ್ಧಿಯಾಗುತ್ತಿದೆ ಎಂದು ಅಧ್ಯಕ್ಷ ಐತ್ತಪ್ಪ ನಾಯ್ಕ ತಿಳಿಸಿದರು.
ಸಂಘದ ಕಾರ್ಯದರ್ಶಿ ತಿರುಮಲೇಶ್ವರ ಭಟ್ ಪಿ., ಕೋಶಾಧಿಕಾರಿ ಶಾಂತಿ ಟಿ. ಹೆಗಡೆ, ಉಪಾಧ್ಯಕ್ಷರಾದ ಪ್ರೋ|ಎಂ ವತ್ಸಲಾ ರಾಜ್ಞಿ ಹಾಗೂ ರಾಮದಾಸ್ ಗೌಡ ಎಸ್. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.