ಮಾನವೀಯತೆಯ ಗುಣಗಳಿದ್ದಲ್ಲಿ ಕುಟುಂಬ ಪಾವಿತ್ರ್ಯತೆ ಹೊಂದುವುದು-ವಂ|ಜೋಸೆಫ್ ಮಾರ್ಟಿಸ್
ಪುತ್ತೂರು: ಕುಟುಂಬದಲ್ಲಿನ ಶೋಕೇಶ್‌ನಲ್ಲಿ ಬೆಲೆಬಾಳುವ ವಸ್ತ್ರ, ಆಭರಣಗಳನ್ನು ಜೋಡಿಸಿಡುವುದು ಮುಖ್ಯವಲ್ಲ ಬದಲಾಗಿ ಪ್ರಾರ್ಥನೆ, ತಾಳ್ಮೆ, ಒಗ್ಗಟ್ಟು, ಸಮಧಾನ, ಶಾಂತಿ, ಆಧರಿಸಿ-ಸುಧಾರಿಸಿಕೊಂಡು ಹೋಗುವ ಗುಣ, ಪರಸ್ಪರ ಕ್ಷಮಿಸುವ, ಪ್ರೀತಿ ಮಾಡುವ ಗುಣ, ಎಲ್ಲರನ್ನು ನಮ್ಮವರಂತೆ ಕಾಣುವ ಗುಣ ಮುಂತಾದ ಮಾನವೀಯತೆಯ ಗುಣಗಳಿಂದ ಕುಟುಂಬದಲ್ಲಿನ ಶೋಕೇಶ್ ತುಂಬಿದಾಗ ಕುಟುಂಬ ಪಾವಿತ್ರ್ಯತೆಯನ್ನು ಹೊಂದುತ್ತದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ದೆರೆಬೈಲ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಜೋಸೆಫ್ ಮಾರ್ಟಿಸ್‌ರವರು ಹೇಳಿದರು.
ಅವರು ಜೂ.13 ರಂದು ಬನ್ನೂರು ಸಂತ ಆಂತೋನಿ ಚರ್ಚ್‌ನಲ್ಲಿ ಜರಗಿದ ಸಂತ ಅಂತೋನಿಯರವರ ವಾರ್ಷಿಕ ಮಹೋತ್ಸವದ ಪ್ರಧಾನ ದಿವ್ಯ ಬಲಿಪೂಜೆಯನ್ನು ನೆರವೇರಿಸಿ, ಭಕ್ತಾಧಿಗಳಿಗೆ ಪವಿತ್ರ ಬೈಬಲ್ ಮೇಲೆ ಸಂದೇಶ ನೀಡಿದರು. ಸಂತ ಅಂತೋನಿಯವರದ್ದು ತುಂಬಾ ಸಣ್ಣ ಪ್ರಾಯ ಅಂದರೆ ಒಂಭತ್ತು ಶತಮಾನದ ಹಿಂದೆ ಅವರು ಜೀವಿಸಿದ್ದು, ತನ್ನ 36 ವರ್ಷಗಳಲ್ಲೇ ಜೀವಿತಾವಧಿಯನ್ನು ಕಳೆದುಕೊಂಡವರಾಗಿದ್ದಾರೆ. ಇರುವ ಸಂತರ ಪೈಕಿ ಸಂತ ಅಂತೋನಿಯವರಿಗೆ ಮೊದಲ ಸ್ಥಾನ ದೊರಕುತ್ತದೆ ಎಂದೇ ಹೇಳಬಹುದು. ಯಾಕೆಂದರೆ ಅವರ ಜೀವಿತದ ಹಾದಿಯೇ ಅಂತಹುದು. ಜಗತ್ತಿನ ಯಾವ ಮೂಲೆಗಾದರೂ ಹೋಗಿ, ಸಂತ ಅಂತೋನಿಯವರ ಪುಣ್ಯಕ್ಷೇತ್ರ, ಕಾನ್ವೆಂಟ್ ಅಥವಾ ಸಂಸ್ಥೆ ಕಾಣ ಸಿಗುವುದು ಎಂದ ಅವರು ಮಾನವನ ಹೃದಯ ಹಾಗೂ ಮನಸ್ಸಿನಲ್ಲಿ ದೇವರನ್ನು ಹೊಂದುವಂತಾಗಬೇಕು. ನಮ್ಮ ಜೀವನದಲ್ಲಿ ಯಾವುದು ಬೇಡ ಅದನ್ನು ದೂರವಿಡಿ. ಎಲ್ಲಿ ಕೆಟ್ಟದ್ದು ಇದೆಯೋ ಅಲ್ಲಿ ಒಳ್ಳೆಯದನ್ನು ಭಿತ್ತುವ ಮನಸ್ಸು ನಮ್ಮದಾಗಲಿ. ಕುಟುಂಬದಲ್ಲಿ ಜೀವಿಸುವ ನಾವೆಲ್ಲರೂ ಉತ್ತಮ ರೀತಿಯಲ್ಲಿ, ಯಾರಿಗೂ ನೋಯಿಸದೆ ಜೀವನ ನಡೆಸಿದಾಗ ಆ ಕುಟುಂಬ ಮಾದರಿ ಕುಟುಂಬ ಎನಿಸಬಲ್ಲುದು ಎಂದು ಅವರು ಹೇಳಿದರು.
ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಹಾಗೂ ಪುತ್ತೂರು ವಲಯ ಚರ್ಚ್‌ಗಳ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಬನ್ನೂರು ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋ, ಸ್ಥಾಪಕ ಧರ್ಮಗುರು ವಂ|ಆಲ್ಫೋನ್ಸ್ ಮೊರಾಸ್, ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವಂ|ನಿಕೋಲಸ್ ಡಿ’ಸೋಜ, ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚ್‌ನ ವಂ|ವಲೇರಿಯನ್ ಫ್ರ್ಯಾಂಕ್, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್, ಧರ್ಮಗುರುಗಳಾದ ಸಂಪಾಜೆ ಚರ್ಚ್‌ನ ವಂ|ಪಾವ್ಲ್ ಕ್ರಾಸ್ತಾ, ಫಿಲೋಮಿನಾ ಕಾಲೇಜಿನ ಕಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಫಿಲೋಮಿನಾ ಕಾಲೇಜಿನ ವಾರ್ಡನ್ ವಂ|ರಿತೇಶ್ ತಾವ್ರೋ, ಪಂಜ ಚರ್ಚ್‌ನ ವಂ|ಅಮಿತ್, ಸುಳ್ಯ ಚರ್ಚ್‌ನ ವಂ|ವಿಕ್ಟರ್ ಡಿ’ಸೋಜ, ನಿಡ್ಪಳ್ಳಿ ಚರ್ಚ್‌ನ ವಂ|ಜೇಸನ್, ವಂ|ಪ್ರಕಾಶ್ ಡಿ’ಸೋಜ, ಬನ್ನೂರು ಚರ್ಚ್‌ನ ಸಹಾಯಕ ಧರ್ಮಗುರು ವಂ|ಬೆನೆಡಿಕ್ಟ್ ಗೋಮ್ಸ್, ಧರ್ಮಭಗಿನಿಯರು ಮತ್ತು ಭಕ್ತಾಧಿಗಳೊಂದಿಗೆ ದಿವ್ಯ ಬಲಿಪೂಜೆಯಲ್ಲಿ ಪಾಲ್ಗೊಂಡರು.
ಚರ್ಚ್‌ನ ಪಾಲನಾ ಸಮಿತಿಯ ಉಪಾಧ್ಯಕ್ಷ ತೋಮಸ್ ಫೆರ್ನಾಂಡೀಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜ, ಗಾಯನ ಮಂಡಳಿ, ವೇದಿ ಸೇವಕರು, ವಿವಿಧ ವಾಳೆಯ ಗುರಿಕಾರರು, ಚರ್ಚ್ ಸ್ಯಾಕ್ರಿಸ್ಟಿಯನ್ ಜೋನ್ ಡಿ’ಮೆಲ್ಲೋ, ವಿವಿಧ ಸಂಘ-ಸಂಸ್ಥೆಯ ಸದಸ್ಯರು ಸಹಕರಿಸಿದರು. ಬಳಿಕ ಪ್ರಸಾದ ಬೋಜನ ನೆರವೇರಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗೌರವ..
ಚರ್ಚ್ ವ್ಯಾಪ್ತಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಕಾಂನಲ್ಲಿ ಮೂರನೇ ರ್‍ಯಾಂಕ್ ಗಳಿಸಿದ ವಿನೋಲಿಯಾ ಜಾಸ್ಲಿನ್ ಮಿನೇಜಸ್, ಎಂಎಸ್ಸಿ ಕೆಮಿಸ್ಟ್ರೀಯಲ್ಲಿ ಪ್ರಥಮ ರ್‍ಯಾಂಕ್ ಗಳಿಸಿದ ವಿನೋಲ ಅಮಿತ ಲೋಬೊ, ಮಂಗಳೂರು ವಿಶ್ವವಿದ್ಯಾನಿಲಯದ ಎಂಕಾಂನಲ್ಲಿ ಮಾರಿಯೆಟ್ ಅನುಷಾ ಪಾಸ್, ಕ್ಲೀಟ ರೇಶ್ಮಾ ಗೊನ್ಸಾಲ್ವಿಸ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಸುಮಿತ್ ಮಸ್ಕರೇನ್ಹಸ್, ಡೆನೋಲ್ ಮಸ್ಕರೇನ್ಹಸ್‌ರವರಿಗೆ ಈ ಸಂದರ್ಭದಲ್ಲಿ ಪುತ್ತೂರು ವಲಯದ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಹೂಗುಚ್ಛ ನೀಡಿ ಗೌರವಿಸಿದರು. ಬನ್ನೂರು ಚರ್ಚ್‌ನ ಪ್ರಧಾನ ಧರ್ಮಗುರು ವಂ|ಬಾಲ್ತಜಾರ್ ಪಿಂಟೋರವರು ಪ್ರತಿಭಾನ್ವಿತರ ಹೆಸರನ್ನು ಓದಿದರು.
ಮೊಂಬತ್ತಿ ವಿತರಣೆ..
ದಿವ್ಯಬಲಿಪೂಜೆ ಮುನ್ನ ಹಬ್ಬದ ಪ್ರಯುಕ್ತ ಹಣದ, ವಸ್ತುಗಳ ರೂಪದಲ್ಲಿ ನೀಡಿದ ದಾನಿಗಳಿಗೆ ಶುದ್ಧೀಕರಿಸಿದ ಮೊಂಬತ್ತಿಯನ್ನು ಸ್ಮರಣಿಕೆಯನ್ನಾಗಿ ವಿತರಿಸಲಾಯಿತು. ಹಬ್ಬದ ಪ್ರಧಾನ ದಿವ್ಯ ಬಲಿಪೂಜೆ ನೆರವೇರಿಸಿದ ಮಂಗಳೂರು ಧರ್ಮಪ್ರಾಂತ್ಯದ ದೆರೆಬೈಲ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಜೋಸೆಫ್ ಮಾರ್ಟಿಸ್‌ರವರು ಪವಿತ್ರ ಮೊಂಬತ್ತಿಯನ್ನು ವಿತರಿಸಿ, ಆಶೀರ್ವಾದ ನೀಡಿದರು.