ಪುತ್ತೂರು: ವೃದ್ದೆಯರಿಬ್ಬರು ವಾಸವಿರುವ ಮನೆಯಲ್ಲಿ ಚಿನ್ನಾಭರಣ ದಿಢೀರನೆ ಕಾಣೆಯಾಗಿದ್ದು, ಹುಡುಕಾಡಿದರೂ ಚಿನ್ನಾಭರಣ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಬರುವುದರೊಳಗಾಗಿ ಬೆಡ್ನ ತಲೆದಿಂಬಿನಡಿಯಲ್ಲಿ ಚಿನ್ನಾಭರಣ ಪತ್ತೆಯಾದ ಘಟನೆ ನಗರದ ದರ್ಬೆಯಲ್ಲಿ ನಡೆದಿದೆ.
ದರ್ಬೆ ಆಸ್ಪತ್ರೆಯ ಬಳಿ ಮನೆಯೊಂದರಲ್ಲಿ ನಿವೃತ್ತ ವೃದ್ದ ಶಿಕ್ಷಕಿಯರಿಬ್ಬರು ವಾಸ ಮಾಡುತ್ತಿದ್ದು, ಇವರಿಬ್ಬರನ್ನು ಹೊರತು ಪಡಿಸಿದರೆ ಕೆಲಸದಾಳು ಬಂದು ತನ್ನ ಕೆಲಸ ಮುಗಿಸಿ ಹೋಗುವುದನ್ನು ಬಿಟ್ಟರೆ ಬೇರೆ ಯಾರೂ ಮನೆಯಲ್ಲಿಲ್ಲ.
ಕಳೆದ ಎರಡು ದಿನಗಳ ಹಿಂದೆ ಕಪಾಟಿನಲ್ಲಿಟ್ಟಿದ್ದ ಚಿನ್ನದ ಹಾರವೊಂದು ಕಾಣೆಯಾಗಿತ್ತು. ಇಬ್ಬರು ವೃದ್ದೆಯರು ಮತ್ತು ಕೆಲಸದಾಳು ಸೇರಿ ಮನೆಯಲ್ಲೆಲ್ಲಾ ಇಡೀ ದಿನ ಹುಡುಕಾಡಿದರೂ ಚಿನ್ನದ ಸರ ಪತ್ತೆಯಾಗಿರಲಿಲ್ಲ. ಮಾರನೇ ದಿನವೂ ಇಡೀ ಮನೆಯನ್ನೇ ಗುಡಿಸಿ ಹುಡುಕಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ವೃದ್ದೆಯರಿಬ್ಬರು ಸಮಾಜ ಸೇವಕರೋರ್ವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಮನೆಗೆ ಬಂದ ಸಮಾಜ ಸೇವಕರು ಹುಡುಕಾಟ ನಡೆಸಿದ್ದಾರೆ ಆದರೂ ಚಿನ್ನದ ಸರ ಪತ್ತೆಯಾಗಿರಲಿಲ್ಲ. ಕೊನೆಗೆ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಲಾಯಿತು. . ಪೊಲೀಸರ ಬರುವಿಕೆಯನ್ನು ಕಾಯುತ್ತಾ ಕುಳಿತಿದ್ದ ವೃದ್ದೆಯರ ಕೈ ಯಲ್ಲಿ ಚಿನ್ನದ ಸರವನ್ನಿಟ್ಟ ಕೆಲಸದಾಳು ಬೆಡ್ರೂಂನ ತಲೆದಿಂಬಿನಡಿಯಲ್ಲಿ ಇತ್ತು ಎಂದು ಹೇಳಿದ್ದಾಳೆ. ಅಷ್ಟು ಹುಡುಕಾಡಿದರೂ ಸಿಗದ ಚಿನ್ನ ಏಕಾಏಕಿ ತಲೆದಿಂಬಿನಡಿಯಲ್ಲಿ ಹೇಗೆ ಬಂತು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ.
Home ಇತ್ತೀಚಿನ ಸುದ್ದಿಗಳು ವೃದ್ದೆಯ ಮನೆಯಲ್ಲಿ ಕಾಣೆಯಾದ ಚಿನ್ನದ ಸರ – ಪೊಲೀಸರಿಗೆ ಕರೆ ಮಾಡಿದಾಗ ತಲೆದಿಂಬಿನಡಿಯಲ್ಲಿ ಪತ್ತೆ