ಪುತ್ತೂರು: ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳಕ್ಕೆ ನಾದವನ್ನು ನಿಷೇಕಿಸಿದ ಕಲಾವಿದ ಪುತ್ತೂರು ಗೋಪಾಲಕೃಷ್ಣಯ್ಯ ನಿಧನವಾಗಿ 50 ವರ್ಷದ ನೆನಪಿನಲ್ಲಿ 7ನೇ ವರ್ಷದ ಗೋಪಣ್ಣ ಸ್ಮೃತಿ ಕಾರ್ಯಕ್ರಮ ಜೂ.16ರಂದು ಬಪ್ಪಳಿಗೆ ಅಗ್ರಹಾರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಿರಿಯ ಭಾಗವತ ಯಕ್ಷಗುರು ಗೋವಿಂದ ನಾಯಕ್ ಪಾಲೆಚ್ಚಾರು ಮತ್ತು ನಿವೃತ್ತ ಶಿಕ್ಷಕಿ ಬಿ ಸುಲೋಚನಾ ಅವರನ್ನು ಗೌರವಿಸಲಾಯಿತು.
ಯಕ್ಷಗಾನದ ಹಿಮ್ಮೇಳನದ ಹಿರಿಯ ಕಲಾವಿದರಾದ ಶಂಕರನಾರಾಯಣ ಪದ್ಯಾಣ, ಲಕ್ಷ್ಮೀಶ ಅಮ್ಮಣ್ಣಾಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗೋಪಾಲಕೃಷ್ಣಯ್ಯ ಅವರ ಪುತ್ರ ಪಿ ಜಿ ಜಗನ್ನಿವಾಸ ರಾವ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ ಜಿ ಚಂದ್ರಶೇಖರ್ ಅಭಿನಂದನಾ ಭಾಷಣ ಮಾಡಿದರು. ವೈಷ್ಣವಿ ಜೆ ರಾವ್ ಮತ್ತು ಭಾಗವತ ರಮೇಶ್ ಭಟ್ ಸನ್ಮಾನಿತರ ಗೌರವ ಪತ್ರವನ್ನು ವಾಚಿಸಿದರು. ವಿದ್ಯಾ ಜೆ ರಾವ್, ರತ್ನಾಕುಮಾರಿ ಅತಿಥಿಗಳನ್ನು ಗೌರವಿಸಿದರು. ಯಕ್ಷಗಾನ ಕಲಾವಿದ ನಾ ಕಾರಂತ ಪೆರಾಜೆ ಅವರು ಕಾರ್ಯಕ್ರಮ ನಿರೂಪಿಸಿದರು. ಹರ್ಷಗೋಪಾಲ್, ಶ್ರೀಕೃಷ್ಣ, ಪಿ.ಜಿ.ಜಗನ್ನಿವಾಸ ರಾವ್ ಅವರ ಸಹೋದರಿಯರಾದ ರೇವತಿ, ಸುಜಾತಾ, ಶಾಂತಾ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಗೋಪಣ್ಣ ಸ್ಮೃತಿ ಬಳಿಕ ಯಕ್ಷಗಾನ ತಾಳಮದ್ದಳೆ ನಡೆಯಿತು.