ಶಿಸ್ತು ಬದ್ಧ, ಜನಪರ ಕೆಲಸ ಮಾಡದ ಅಧಿಕಾರಿಗಳು ಇಲಾಖೆಗೆ ಬೇಡವೇ ಬೇಡ -ಸಚಿವ ಮಂಕಾಳ ವೈದ್ಯ

0

ಮಂಗಳೂರು: ಸಂತ್ರಸ್ತ ಮೀನುಗಾರರು ಹಾಗೂ ಅವರ ಕುಟುಂಬಕ್ಕೆ ಸಕಾಲದಲ್ಲಿ ಪರಿಹಾರ ನೀಡದೇ ಇದ್ದಲ್ಲಿ ಅಥವಾ ವಿಳಂಬವಾದರೆ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಶಿಸ್ತು ಬದ್ಧ ಹಾಗೂ ಜನರ ಕೆಲಸ ಮಾಡದ ಅಧಿಕಾರಿಗಳು ಈ ಇಲಾಖೆಗೆ ಬೇಡವೇ ಬೇಡ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ವೈದ್ಯ ಹೇಳಿದರು.

ಜೂ.16ರಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ, ಕಡಲ್ಕೊರೆತ ಸೇರಿದಂತೆ ಬಂದರು, ಮೀನುಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂತ್ರಸ್ತರಿಗೆ ಕನಿಷ್ಠ ಒಂದು ತಿಂಗಳೊಳಗೆ ಪರಿಹಾರ ನೀಡಲು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು.ಇಲ್ಲದೇ ಹೋದಲ್ಲಿ ಕ್ರಮ ಖಚಿತ ಎಂದರು. ಸುಮಾರು 20 ಮೀನುಗಾರರ ಕುಟುಂಬಗಳಿಗೆ ಒಂದು ವರ್ಷ ಕಳೆದರೂ ಪರಿಹಾರ ನೀಡದಿರುವ ಪ್ರಕರಣ ಸಭೆಯಲ್ಲಿ ಗಮನಕ್ಕೆ ಬಂದಾಗ ಸಚಿವ ಮಂಕಾಳ ವೈದ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶೀಘ್ರವೇ ಪರಿಹಾರ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಮತ್ಸ್ಯ ಸಂಪದ ಯೋಜನೆ ಮೂಲಕ ಸಾಮೂಹಿಕ ವಿಮೆ ಯೋಜನೆಯ ಸೌಲಭ್ಯಗಳು ಮೂರು ತಿಂಗಳೊಳಗೆ ಮೀನುಗಾರರಿಗೆ ದೊರೆಯದೆ ಇರುವ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಕಿ ಇರುವ 1.60 ಕೋಟಿ ರೂ.ಗಳ ಪರಿಹಾರವನ್ನು ರಾಜ್ಯ ಸರ್ಕಾರದಿಂದ ನೀಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಅದೇ ರೀತಿ ಕೇಂದ್ರ ಸರ್ಕಾರದಿಂದ ಮೀನುಗಾರರ ಸಂತ್ರಸ್ತ ಕುಟುಂಬಕ್ಕೆ ಬರಬೇಕಾದ ಪರಿಹಾರದ ಮೊತ್ತವನ್ನು ಪಾವತಿ ಮಾಡಲು ಪ್ರಯತ್ನಿಸಲಾಗುತ್ತದೆ ಎಂದು ಸಚಿವರು ಹೇಳಿದರು.

ಕಡಲ್ಕೊರೆತ ಇರುವ ಪ್ರದೇಶದಲ್ಲಿ ತುರ್ತು ಕಾಮಗಾರಿ ಹಾಗೂ ತುರ್ತು ಪರಿಹಾರ ಕ್ರಮ ಕೈಗೊಳ್ಳಬೇಕು. ಈ ಬಾರಿ ಮೀನುಗಾರರಿಗೆ ಡೀಸೆಲ್ ಸಹಾಯಧನ, ಸೀಮೆಎಣ್ಣೆ ದೊರಕಿಸಿಕೊಡಲು ಮುಂಚಿತವಾಗಿ ಅಧಿಕಾರಿಗಳು ಸಿದ್ದರಾಗಬೇಕು. ಸಿಆರ್‌ಝೆಡ್ ನಿಯಮಗಳು ಅಭಿವೃದ್ಧಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಯೋಜನೆಯೊಂದನ್ನು ರೂಪಿಸಬೇಕು ಎಂದು ಸಚಿವರು ತಿಳಿಸಿದರು. ಸಮುದ್ರ ತೀರದಲ್ಲಿ ಮೀನು ಬಲೆಯನ್ನು ನೇಯ್ಗೆ ಮಾಡುವವರಿಗೆ ಮಳೆ ಬಂದಾಗ ರಕ್ಷಣೆಗೆ ಶೆಡ್ ನಿರ್ಮಾಣ ಮಾಡಬೇಕು. ಮೀನು ಮಾರಾಟ ಮಾಡುವ ಮಹಿಳೆಯರಿಗೆ ಶೆಡ್ ಹಾಗೂ ನೀರಿನ ವ್ಯವಸ್ಥೆ ಮಾಡಬೇಕು ಎಂದೂ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಾತನಾಡಿ, ಸಚಿವರು ನೀಡಿದ ಸಲಹೆಯಂತೆ ಕೂಡಲೇ ಈ ಬಗ್ಗೆ ಕ್ರಮಕ್ಕೆ ಮುಂದಾಗಲಾಗುತ್ತದೆ ಎಂದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಕುಮಾರ್, ಡಿಎ-ಒ ದಿನೇಶ್ ಕುಮಾರ್, ಬಂದರು ಅಽಕಾರಿ ಸ್ವಾಮಿ, ರಾಥೋಡ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

LEAVE A REPLY

Please enter your comment!
Please enter your name here