ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದ ಕನಸುಗಳು – 2025 ರ ಉದ್ಘಾಟನಾ ಸಮಾರಂಭ

0

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 15 ವಿವಿಧ ಸ್ಪರ್ಧೆಗಳು

ಯಶಸ್ವೀ ಜೀವನಕ್ಕೆ ಕನಸುಗಳೇ ಅಡಿಪಾಯ : ರೂಪಲೇಖ


ಪುತ್ತೂರು: ಬಾಲ್ಯದಿಂದಲೇ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಆತ್ಮವಿಶ್ವಾಸ ಬೆಳೆಯಬೇಕು. ತನ್ನ ಮುಂದಿನ ಭವಿಷ್ಯದ ಸಲುವಾಗಿ ಕನಸು ಕಾಣಬೇಕು. ಶಿಕ್ಷಣವನ್ನು ಪೂರೈಸಿ, ಜೀವನದಲ್ಲಿ ಯಶಸ್ಸು ಗಳಿಸಲು ಕನಸುಗಳೇ ಕಾರಣವಾಗುತ್ತವೆ. ಗೆಲುವನ್ನು ಸಾಧಿಸಲು ಆಯ್ಕೆ ಮಾಡುವ ದಾರಿಯು ಸನ್ಮಾರ್ಗದಲ್ಲಿರಬೇಕು, ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತಮಂಡಳಿಯ ಜೊತೆಕಾರ್ಯದರ್ಶಿಗಳಾದ ರೂಪಲೇಖ ಹೇಳಿದರು.

ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ ರಾಜ್ಯಮಟ್ಟದ ಕನಸುಗಳು – 2025 ಇದರ ಉದ್ಘಾಟನೆಯನ್ನು ನಡೆಸಿಕೊಟ್ಟು ಮಾತನಾಡುತ್ತಾ, ಭವಿಷ್ಯದ ಸಮಾಜವನ್ನು ನಿರ್ಮಾಣ ಮಾಡಲಿರುವ ವಿದ್ಯಾರ್ಥಿಗಳು ದೃಢನಿಶ್ಚಯ, ದೃಢಸಂಕಲ್ಪ ಹೊಂದಿ ಆತ್ಮವಿಶ್ವಾಸದೊಂದಿಗೆ ಹೆಜ್ಜೆ ಇಟ್ಟು ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಕೈಜೋಡಿಸಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿಯ ನಿರ್ದೇಶಕರಾದ ಡಾ. ಕೃಷ್ಣಪ್ರಸನ್ನ .ಕೆ ವಹಿಸಿಕೊಂಡು, ಕನಸು ಕಾಣುವುದು ಮನುಷ್ಯ ನಲ್ಲಿರುವ ಸಹಜ ಗುಣ. ಆದರೆ ನಿದ್ದೆಗೆಡಿಸಬಲ್ಲ ಯೋಚನೆಗಳೇ ನಿಜವಾದ ಕನಸುಗಳು. ಅಂತಹ ಕನಸುಗಳು ವಿದ್ಯಾರ್ಥಿಗಳನ್ನು ಕಾಡಬೇಕು. ಸರಿ-ತಪ್ಪುಗಳನ್ನು ವಿವೇಚಿಸುವ ವಿವೇಕ ವಿದ್ಯಾರ್ಥಿಗಳಲ್ಲಿರಬೇಕು ಎಂದರು.


ಉದ್ಘಾಟನಾ ಸಮಾರಂಭದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸುಮಾರು 15 ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಚಿತ್ರಕಲೆ, ಕನ್ನಡ ಕವನ ರಚನೆ ಮತ್ತು ವಾಚನ , ಪ್ರಾಕೃತಿಕ ರಂಗೋಲಿ, ಯುವ ಪತ್ರಕರ್ತ, ಯುವ ವಾಣಿಜ್ಯೋದ್ಯಮಿ, ಮುಖವರ್ಣಿಕೆ, ವೀಡಿಯೋ ಸಂಕಲನ , ಚರ್ಚಾ ಸ್ಪರ್ಧೆ, ಯಕ್ಷಗಾನ ಭಾಗವತಿಕೆ, ಕಲರವ – ಸಾಂಸ್ಕೃತಿಕ ವೈವಿಧ್ಯ , ನಿಧಿಶೋಧ , ಭಗವದ್ಗೀತಾ ಕಂಠಪಾಠ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಯಿತು.


ಕಾರ್ಯಕ್ರಮದ ವೇದಿಕೆಯಲ್ಲಿ ಕನಸುಗಳು ಕಾರ್ಯಕ್ರಮದ ಸಂಯೋಜಕಿ ದಯಾಮಣಿ ಟಿ. ಕೆ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಪ್ರಾಂಶುಪಾಲರಾದ ದೇವಿಚರಣ್ ರೈ ಎಂ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಭೌತಶಾಸ್ತ್ರ ಉಪನ್ಯಾಸಕಿ ಅಕ್ಷತಾ ವಂದಿಸಿ, ಆಂಗ್ಲಭಾಷಾ ಉಪನ್ಯಾಸಕಿ ಸವಿತಾ ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here