ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ವಿದ್ಯಾರ್ಜನೆಗೈದ ಹಿರಿಯ ಹಳೇ ವಿಧ್ಯಾರ್ಥಿ ಹರಿನಾರಾಯಣ ಎಂಬವರ ಸಹಕಾರದಿಂದ ಕೆಮ್ಮಾರ ಸರಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಊಟದ ತಟ್ಟೆ, ಬ್ಯಾಗ್, ಬಳಪ, ಜೊತೆಗೆ ಪಠ್ಯ ಪರಿಕರಗಳನ್ನು ಉಚಿತವಾಗಿ ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಇಂದು ಪೋಷಕರ ಸಭೆ ನಡೆದಿದ್ದು, ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಗಣ್ಯರ ಉಪಸ್ಥಿತಿಯಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಹರಿನಾರಾಯಣ ರವರನ್ನು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಶಾಲಾ ಮುಖ್ಯೋಪಾಧ್ಯಾಯಿನಿ ಜಯಶ್ರೀ ಎಂ ಮಾತನಾಡಿ ನಮ್ಮ ಸರಕಾರಿ ಶಾಲೆಯಲ್ಲಿ ಹೆಚ್ಚಾಗಿ ಬಡ ಕುಟುಂಬದ ಮಕ್ಕಳು ಕಲಿಯುತ್ತಿದ್ದು ಪಠ್ಯಪುಸ್ತಕಗಳು ಸರಕಾರದಿಂದ ದೊರಕಿದರೆ ನೋಟ್ ಪುಸ್ತಕ ಸೇರಿದಂತೆ ಇತರ ಪರಿಕರಗಳನ್ನು ಪಡೆಯಲು ಹಾಗೂ ಒಂದು ಮನೆಯಿಂದ ಎರಡು ಮೂರು ಮಕ್ಕಳು ಕಲಿಯುವ ಪೋಷಕರಿಗೆ ಕೊಂಡುಕೊಳ್ಳಲು ಕಷ್ಟವಾಗುತ್ತಿತ್ತು. ಹರಿನಾರಾಯಣರಂತಹ ಉದಾತ್ತ ದಾನಿಗಳು ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹವು ಶಾಲಾ ಮಕ್ಕಳನ್ನು ಮತ್ತಷ್ಟು ಶೈಕ್ಷಣಿಕ ಬೆಳವಣಿಗೆಗೆ ಕಾರಣವಾಗುತ್ತಿದೆ. ಇಂತಹ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ವೇದಿಕೆಯಲ್ಲಿ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ, ಹಿರೆಬಂಡಾಡಿ ಗ್ರಾಮ ಪಂಚಾಯತ್ ಸದಸ್ಯೆ ವಾರಿಜಾಕ್ಷಿ ಬಡ್ಡಮೆ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಪದ್ಮನಾಭ ಶೆಟ್ಟಿ ಬಡಿಲ, ಅಬ್ಬಾಸ್, ಖಾದರ್ ಅಡೆಕ್ಕಲ್ , ಸುಮಯ್ಯ, ಹಾಗೂ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.