ಬಿಡ್ಸೋಕೆ ಕಷ್ಟ.ತಿನ್ನೋಕೆ ಇಷ್ಟ..

0

ಸಿಶೇ ಕಜೆಮಾರ್


ಪುತ್ತೂರು: ಹಣ್ಣುಗಳ ರಾಜ ಎಂದೇ ಕರೆಸಿಕೊಂಡಿರುವ, ಮನುಷ್ಯನ ಆರೋಗ್ಯದ ವಿಚಾರದಲ್ಲೂ ಬಹು ಮಹತ್ತರ ಪಾತ್ರ ವಹಿಸುವ, ಮನೆಯ ಸುತ್ತಮುತ್ತ, ತೋಟಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಸಿಗುವ ಬಾಂಗ್ಲಾ ದೇಶದ ರಾಷ್ಟ್ರೀಯ ಹಣ್ಣು ಆಗಿರುವ ಹಲಸಿನ ಹಣ್ಣು ಈಗ ಹಣ್ಣಾಗಲು ಆರಂಭವಾಗಿದ್ದು ಎಲ್ಲೆಲ್ಲೂ ಹಲಸಿನ ಹಣ್ಣು ದೊರೆಯುತ್ತಿದೆ. ಗಾತ್ರದಲ್ಲಿ ತಾನೇ ದೊಡ್ಡವ ಎಂದುಕೊಂಡಿರುವ ಹಲಸು ಕೇವಲ ಹಣ್ಣು ಮಾತ್ರವಲ್ಲ ಕಾಯಿ, ಹಣ್ಣು, ಬೀಜ ಎಲ್ಲವೂ ಆಹಾರ ಪದಾರ್ಥಗಳ ತಯಾರಿಗೆ ಬರುತ್ತದೆ. ನಮ್ಮನೆಯ ತೋಟದ ಹಲಸಿನ ಹಣ್ಣು ಹಾಳಾಗುವ ಮುನ್ನ ಅದರ ಮಹತ್ವ ಅರಿತುಕೊಳ್ಳೋಣ


ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ:
ಹಳ್ಳಿ ಕಡೆ ಹೆಚ್ಚಿನವರು ಹೇಳುವುದುಂಟು ಹಲಸಿನ ಹಣ್ಣು ತಿಂದರೆ ಹೊಟ್ಟೆ ಉಬ್ಬರ ಬರುತ್ತದೆ ಎಂದು ಆದರೆ ಯಾವುದನ್ನೇ ಆಗಲಿ ಒಂದು ಮಿತಿಯಲ್ಲಿ ತಿಂದರೆ ಯಾವ ತೊಂದರೆಯೂ ಉಂಟಾಗುವುದಿಲ್ಲ. ಮುಖ್ಯವಾಗಿ ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಅತ್ಯಧಿಕ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಹೊಂದಿದೆ. ದೇಹಕ್ಕೆ ಸೋಂಕು ತರುವ ಬ್ಯಾಕ್ಟೀರಿಯಾ ಕ್ರಿಮಿಗಳಿಂದ ರಕ್ಷಣೆ ನೀಡುತ್ತದೆ. ರಕ್ತದಲ್ಲಿರುವ ಬಿಳಿ ರಕ್ತಕಣಗಳ ಸಂಖ್ಯೆ ಹೆಚ್ಚು ಮಾಡಲು ಹಲಸು ಸಹಕಾರಿಯಾಗಿದೆ. ದೇಹಕ್ಕೆ ದಾಳಿ ಮಾಡುವ ಕ್ರಿಮಿಗಳ ವಿರುದ್ಧ ಸೆಣೆಸುವ ಮೂಲಕ ದೇಹವನ್ನು ಆರೋಗ್ಯದಿಂದ ಇಡಲು ಸಹಕಾರಿಯಾಗಿದೆ.


ಜೀರ್ಣಕ್ರಿಯೆಗೆ ಸಹಕಾರಿ:
ನೀವು ನಂಬುತ್ತೀರಾ ಇಲ್ಲವೋ ಗೊತ್ತಿಲ್ಲ ಹಲವು ಮಾರಕ ಕ್ಯಾನ್ಸರ್ ರೋಗ ಬರುವುದನ್ನು ಕೂಡ ತಪ್ಪಿಸುತ್ತದೆ ಎನ್ನುತ್ತಾರೆ. ಹಲಸಿನಲ್ಲಿ ಲಿಗ್ನಾನ್ಸ್, ಸ್ಯಾಪೋನಿನ್ಸ್ ಮತ್ತು ಐಸೋ-ವೋನ್ಸ್ ಎಂಬ ಪೋಷಕಾಂಶಗಳಿವೆ. ಇವು ದೇಹಕ್ಕೆ ಬರಬಹುದಾದ ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಆವರಿಸದಂತೆ ತಡೆಯುತ್ತದೆ. ಹಲಸಿನ ಹಣ್ಣು ಸೇವನೆಯಿಂದ ಕರುಳುಗಳ ಹುಣ್ಣು ಶೀಘ್ರವಾಗಿ ವಾಸಿಯಾಗುತ್ತದೆ. ಮಲಬದ್ಧತೆಯನ್ನು ತಡೆಯುವ ಶಕ್ತಿ ಕೂಡ ಈ ಹಣ್ಣಿಗಿದೆ.


ಬಿಪಿ ಕಡಿಮೆ ಮಾಡುತ್ತದೆ:
ಅಂಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಹಲಸು ಸಹಕಾರಿಯಾಗಿದೆ. ಹಲಸಿನಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ರಕ್ತಸಂಚಾರ ಸುಗಮಗೊಂಡು ಹೃದಯಸ್ಥಂಭನದ ಸಂಭವತೆಯನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಮಹಿಳೆಯರಲ್ಲಿ ಬರುವ ರಕ್ತಹೀನತೆಯನ್ನು ಕಡಿಮೆಗೊಳಿಸಲು ಹಲಸಿನ ಹಣ್ಣು ಸೇವನೆ ಪ್ರಯೋಜನಕಾರಿಯಾಗಿದೆ.ಅಸ್ಥಿಮಜ್ಜೆಯಿಂದ ಹೊಸ ರಕ್ತಕಣಗಳು ಉತ್ಪತ್ತಿಯಾಗಲು ಹಣ್ಣು ಸಹಕಾರಿಯಾಗಿದೆ. ಇದಲ್ಲದೆ ಥೈರಾಯ್ಡ್ ಗ್ರಂಥಿಯಿಂದ ನಿಯಮಿತವಾಗಿ ಹಾರ್ಮೊನು ಬಿಡುಗಡೆ ಮಾಡುವುದರಿಂದ ಥೈರಾಯ್ಡ್ ಸೋಂಕು ಆಗುವುದನ್ನು ಕೂಡ ತಪ್ಪಿಸುತ್ತದೆ. ಮೂಳೆಗಳನ್ನು ಬಲಪಡಿಸಲು ಕೂಡ ಹಲಸು ಸಹಕಾರಿಯಾಗಿದೆ. ಒಟ್ಟಿನಲ್ಲಿ ಹಲಸಿನ ಹಣ್ಣು ಆರೋಗ್ಯದಾಯಕ ಹಣ್ಣು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.


ಕೇರಳ ರಾಜ್ಯದ ಅಧಿಕೃತ ಹಣ್ಣು:
ಹಣ್ಣುಗಳ ರಾಜ ಎಂದೇ ಕರೆಸಿಕೊಂಡಿರುವ ಹಲಸಿನ ಹಣ್ಣನ್ನು ಕೇರಳ ರಾಜ್ಯದ ಅಧಿಕೃತ ಹಣ್ಣಾಗಿ ಘೋಷಣೆ ಮಾಡಲಾಗಿದೆ. ಕೇರಳದಲ್ಲಿ ಅತ್ಯಽಕ ಪ್ರಮಾಣದಲ್ಲಿ ಹಲಸು ಬೆಳೆಸಲಾಗುತ್ತಿದೆ. ವಿವಿಧ ತಳಿಯ ಕೋಟ್ಯಾಂತರ ಹಲಸಿನ ಹಣ್ಣುಗಳು ಇಲ್ಲಿ ಬೆಳೆಯುತ್ತವೆ. ಪ್ರತಿ ವರ್ಷ ಸುಮಾರು 15 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುತ್ತದೆ. ಕರ್ನಾಟಕದಲ್ಲೂ ಹಲಸಿನ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು ಕಳೆದ ಕೆಲವು ವರ್ಷದಿಂದ ಬಹಳಷ್ಟು ಮಂದಿ ಹಲಸಿನ ಹಣ್ಣು ಬೆಳೆಯುತ್ತಿದ್ದಾರೆ. ಅಲ್ಲಲ್ಲಿ ಹಲಸಿನ ಮೇಳಗಳು ನಡೆಯುತ್ತಿವೆ.


ರುಚಿಯಾದ ಉಪ್ಪಡಚ್ಚಿಲ್:
ಹಳ್ಳಿಗಳಲ್ಲಿ ಹಲಸಿನ ಹಣ್ಣಿನ ಸೋಳೆಯನ್ನು ತೆಗೆದು ಬಿಸಿಲಿನಲ್ಲಿ ಒಣಗಿಸಿ ಮಳೆಗಾಲಕ್ಕೆ ಕಟ್ಟಿ ಇಡುತ್ತಾರೆ. ಇದನ್ನು ಮಳೆಗಾಲದಲ್ಲಿ ತಿನ್ನೋಕೆ ರುಚಿಯಾಗಿರುತ್ತದೆ. ಹಲಸಿನ ಕಾಯಿಯ ಸೋಳೆಯಿಂದ ಬೀಜವನ್ನು ತೆಗೆದು ಸೋಳೆಯನ್ನು ಭರಣಿಯಲ್ಲಿ ಉಪ್ಪು ನೀರಲ್ಲಿ ಹಾಕಿಡಬೇಕು. ವರ್ಷ ಬಿಟ್ಟು ತೆಗೆದರೂ ಹಲಸಿನ ಸೋಳೆ ಹಾಗೆಯೇ ಇರುತ್ತದೆ. ಇದನ್ನು ಹಳ್ಳಿಗಳಲ್ಲಿ ಉಪ್ಪಡಚ್ಚಿಲ್ ಎಂದು ಕರೆಯುತ್ತಾರೆ. ಇದನ್ನು ಶುಗರ್ ಇರುವವರೂ ಕೂಡ ಬಳಸಬಹುದಾಗಿದೆ. ಹಲಸಿನ ಬೀಜವನ್ನು ಮಣ್ಣು ಮತ್ತು ಎಂಜಿರ್ ಬಳ್ಳಿಯ ಎಲೆಗಳನ್ನು ಬೆರೆಸಿ ವರ್ಷಗಟ್ಟಲೆ ಇಡಬಹುದಾಗಿದೆ.

ಘಮಘಮಿಸುವ ಖಾದ್ಯಗಳು
ಬಹಳ ಸುಲಭದಲ್ಲಿ ಸಿಗುವ ಹಲಸಿನ ಹಣ್ಣಿನಿಂದ ವಿವಿಧ ರೀತಿಯ ಆರೋಗ್ಯಭರಿತ ಖಾದ್ಯಗಳನ್ನು ತಯಾರು ಮಾಡಬಹುದಾಗಿದೆ. ಹಲಸಿನ ಹಣ್ಣನ್ನು ಕೊಯ್ದು ಬಿಡಿಸಲು ಸ್ವಲ್ಪ ಕಷ್ಟವಾದರೂ ತಿನ್ನೋಕೆ ಮಾತ್ರ ಇಷ್ಟವಾಗುತ್ತದೆ. ಮುಖ್ಯವಾಗಿ ಹಲಸಿನ ಹಣ್ಣಿನ ಹಪ್ಪಳ, ಐಸ್‌ಕ್ರೀಮ್, ಹಲ್ವ, ಪಾಯಸ, ಹೋಳಿಗೆ, ಚಿಪ್ಸ್, ಜಾಮ್, ಸಂಡಿಗೆ ಇತ್ಯಾದಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಬಹುದು.

ಹಲಸಿನ ಹಣ್ಣಿನಲ್ಲಿ ಆರೋಗ್ಯಕರವಾದ ಬಹಳಷ್ಟು ವಿಟಮಿನ್ ಇದೆ.ಬಿಳಿ ಕಲರ್ ಇರುವ ಹಲಸಿನ ಹಣ್ಣು ಆರೋಗ್ಯಕ್ಕೆ ಉತ್ತಮ, ತುಂಬಾ ಹಳದಿ ಇರುವ ಹಣ್ಣಿನಲ್ಲಿ ಪಿತ್ತದ ಅಂಶ ಕೊಂಚ ಜಾಸ್ತಿ ಇರುತ್ತದೆ. ಶುಗರ್ ಇರುವವರು ಉಪ್ಪಡಚ್ಚಿಲ್ ತಿನ್ನುವುದು ಉತ್ತಮ. ಹಲಸಿನ ಬೀಜದಲ್ಲೂ ಆರೋಗ್ಯದಾಯಕ ವಿಟಮಿನ್ ಇದೆ. ಹಲಸಿನ ಹಣ್ಣನ್ನು ಖಾಲಿ ಹೊಟ್ಟೆಗೆ ತಿನ್ನಬೇಕು. ಹೊಟ್ಟೆ ತುಂಬಿದ ನಂತರ ತಿಂದರೆ ಕೆಲವೊಮ್ಮೆ ಹೊಟ್ಟೆಯುಬ್ಬರದಂತಹ ಸಮಸ್ಯೆ ಬರುತ್ತದೆ.
ಡಾ| ಬಾಲಕೃಷ್ಣ ಡೆಚ್ಚಾರ್, ಆಯುರ್ವೇದ ತಜ್ಞರು ಕೃಪಾ ಕ್ಲಿನಿಕ್ ಪುತ್ತೂರು

ವರ್ಷದಿಂದ ವರ್ಷಕ್ಕೆ ಹಲಸಿನ ಗಿಡಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಎಲ್ಲಾ ಋತುಗಳಲ್ಲಿ ಹಣ್ಣು ದೊರೆಯುವ ಹಲಸಿನ ಗಿಡಗಳಿಗೆ ತುಂಬಾ ಬೇಡಿಕೆ ಇದೆ. ಹಲಸು ಬೆಳೆಯುವತ್ತ ಕೃಷಿಕರು ಮನಸ್ಸು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಜಾಕ್ ಅನಿಲ್ ಪುತ್ತೂರು, ನಿನ್ನಿಕಲ್ಲು ನರ್ಸರಿ
..
ಸಕ್ಕರೆ ಖಾಯಿಲೆ ಇರುವವರೂ ಕೂಡ ಹಲಸಿನ ಹಣ್ಣು ತಿನ್ನಬಹುದು ಆದರೆ ಮಿತವಾಗಿ ತಿನ್ನುವುದು ಉತ್ತಮ. ಹಲಸಿನ ಹಣ್ಣು ತಿನ್ನುವುದರಿಂದ ಶುಗರ್ ಜಾಸ್ತಿ ಆಗುವುದಿಲ್ಲ ಆದರೆ ಓವರ್ ಶುಗರ್ ಇರುವವರು ಸ್ವಲ್ಪ ಜಾಗ್ರತೆ ವಹಿಸಬೇಕು.
ಡಾ| ಮುರಳೀಕೃಷ್ಣ ರೈ, ಚಿರಾಯು ಕ್ಲಿನಿಕ್ ಕುಂಬ್ರ

LEAVE A REPLY

Please enter your comment!
Please enter your name here