ಕಾಣಿಯೂರು: ಕಾಣಿಯೂರು ಗ್ರಾಮ ಪಂಚಾಯತ್ ವತಿಯಿಂದ ದೋಳ್ಪಾಡಿ, ಚಾರ್ವಾಕ ಗ್ರಾಮಗಳ ಬಸ್ ವ್ಯವಸ್ಥೆಯನ್ನು ಸರಿಪಡಿಸುವಂತೆ ನೀಡಿದ ಮನವಿಗೆ ತಕ್ಷಣ ಸ್ಪಂದಿಸಿದ ಪುತ್ತೂರು ವಿಭಾಗ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಜೂ 20ರಂದು ಆಗಮಿಸಿ ಮಾರ್ಗ ಪರಿಶೀಲನೆ ನಡೆಸಿದರು. ಬೆಳಿಗ್ಗೆ 8 ಗಂಟೆಗೆ ಪುತ್ತೂರು – ನಾಣಿಲ -ಅಭಿಕಾರ ಮತ್ತು ಪುತ್ತೂರು – ಕಾಣಿಯೂರು -ಮುದುವ (ರಾತ್ರಿ )ಬಸ್ಸು ಗುಜ್ಜರ್ಮೆ ತನಕ ಸಂಚರಿಸುವುದನ್ನು ಹಾಗೂ ದೋಳ್ಪಾಡಿಗೆ ರಾತ್ರಿ ನಿಲುಗಡೆ ಬಸ್ ನೀಡಿದ್ದು ಅದು ಬೆಳಿಗ್ಗೆ ಅಂದಾಜು 7.20ರ ಸಮಯದಲ್ಲಿ ಅಲ್ಲಿಂದ ಹೊರಡುವ ವ್ಯವಸ್ಥೆಯನ್ನು ಅತೀ ಶೀಘ್ರದಲ್ಲಿ ಕಾರ್ಯಗತ ಮಾಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಕಾಣಿಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಗಣೇಶ್ ಉದನಡ್ಕ, ಪಿ.ಲ್.ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಖಂಡಿಗ, ಚಾರ್ವಾಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಧನಂಜಯ ಕೇನಾಜೆ, ನಾಣಿಲ ಬಿ.ಜೆ.ಪಿ. ಬೂತ್ ಅಧ್ಯಕ್ಷ ವೀರಪ್ಪ ಉದ್ಲಡ್ಡ, ದರ್ಣಪ್ಪ ಆಂಬುಲ ಮತ್ತಿತರರು ಉಪಸ್ಥಿತರಿದ್ದರು.
ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಾರ್ವಾಕ ಮತ್ತು ದೋಳ್ಪಾಡಿ ಗ್ರಾಮಕ್ಕೆ ಸರಕಾರಿ ಬಸ್ ಸೌಲಭ್ಯವನ್ನು ಕಲ್ಪಿಸುವಂತೆ ಕಾಣಿಯೂರು ಗ್ರಾಮ ಪಂಚಾಯತ್ ವತಿಯಿಂದ ಪುತ್ತೂರು ವಿಭಾಗ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಸದ್ರಿ ಮನವಿಗೆ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಸ್ಪಂದನೆ ನೀಡಿದ್ದಾರೆ.