ಕಡಬ, ನೆಲ್ಯಾಡಿ ಭಾಗದಲ್ಲಿ ಶಂಕಿತ ಡೆಂಗ್ಯೂ ಪ್ರಕರಣ; ಬಾಧಿತರು ಆಸ್ಪತ್ರೆಯಲ್ಲಿ ದಾಖಲು:ಇಲಾಖೆಯಿಂದ ಮುನ್ನೆಚ್ಚರ

0

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಮತ್ತು ಬೆಳ್ತಂಗಡಿ ತಾಲೂಕಿನ ನೆಲ್ಯಾಡಿ ಸಮೀಪದ ಕೆಲವು ಪ್ರದೇಶದಲ್ಲಿ ಹಲವರಿಗೆ ಶಂಕಿತ ಡೆಂಗ್ಯೂ ಜ್ವರ ಬಾಧಿಸಿದ್ದು ಕೆಲವರು ಆಸ್ಪತ್ರೆಗಳಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಬಾಧಿತ ಇಬ್ಬರು ದಾಖಲಾಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಜ್ವರ ಪೀಡಿತ ಪ್ರದೇಶಗಳ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡುವ ಮೂಲಕ ಜ್ವರದ ನಿಯಂತ್ರಣಕ್ಕೆ ಮುಂದಾಗಿದ್ದಾರೆ. ಪುತ್ತೂರು ಪೇಟೆಯಲ್ಲಿ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿಲ್ಲ.
ಕುದ್ಮಾರಿನ 13 ವರ್ಷದ ಬಾಲಕಿಯೊಬ್ಬರು ಶಂಕಿತ ಡೆಂಗ್ಯೂ ಬಾಧಿತರಾಗಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೇ ರೀತಿ ನೆಲ್ಯಾಡಿಯಲ್ಲೂ ಶಂಕಿತ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ನಿಯಂತ್ರಣ ಮಾರ್ಗಗಳು: ಸೋಂಕು ಹೊಂದಿದ ಈಡಿಸ್ ಈಜಿಪ್ಟೆ ಸೊಳ್ಳೆಗಳಿಂದಾಗಿ ಡೆಂಗ್ಯೂ ಹರಡುತ್ತದೆ. ಮುಖ್ಯವಾಗಿ ಈ ಸೊಳ್ಳೆಗಳು ಮುಸ್ಸಂಜೆ ಮತ್ತು ಮುಂಜಾನೆಯ ವೇಳೆ ಕಚ್ಚುತ್ತವೆ. ಡೆಂಗ್ಯೂ ಜ್ವರದಿಂದ ತೊಂದರೆಗೊಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ಹಗಲು ಹೊತ್ತಿನಲ್ಲಿ ಮನೆಯಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿಯರು, ಬಾಣಂತಿ ಹಾಗೂ ವಯಸ್ಸಾದವರು ಕೂಡ ಸೊಳ್ಳೆ ಪರದೆ ಉಪಯೋಗಿಸಬೇಕು. ಮನೆಯ ಪರಿಸರದಲ್ಲಿ ಸ್ವಚ್ಛತೆ, ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಸುವುದು, ನೀರು ನಿಂತ ಸ್ಥಳಗಳಿಗೆ ವಾರದಲ್ಲಿ 1 ಸಲ ಟೆಮೋಫಾಸ್ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮ ಕೈಗೊಂಡಾಗ ಸೊಳ್ಳೆಗಳ ಬೆಳವಣಿಗೆಯನ್ನು ನಿಯಂತ್ರಿಸಬಹುದು.

ಇಲಾಖೆಯಿಂದ ಮುನ್ನೆಚ್ಚರ
ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಂಪೂರ್ಣ ಸನ್ನದ್ಧವಾಗಿದೆ. ಜ್ವರ ಪೀಡಿತ ಪ್ರದೇಶಗಳಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಜಾಗೃತಿ ಕರಪತ್ರಗಳನ್ನು ಹಂಚುವ ಕೆಲಸ ನಡೆಯುತ್ತಿದೆ-
ಡಾ.ದೀಪಕ್ ರೈ,
ತಾಲೂಕು ಆರೋಗ್ಯಾಧಿಕಾರಿ

ಡೆಂಗ್ಯೂ ಜ್ವರ ಲಕ್ಷಣಗಳು

ಇದ್ದಕ್ಕಿದ್ದಂತೆಯೇ ತೀವ್ರ ಜ್ವರ, ಹಣೆಯ ಭಾಗದಲ್ಲಿ ನೋವು, ಕಣ್ಣುಗುಡ್ಡೆಗಳಲ್ಲಿ ನೋವು, ಮಾಂಸಖಂಡಗಳಲ್ಲಿ ತೀವ್ರ ನೋವು ಇದ್ದಲ್ಲಿ ಇದು ಡೆಂಗ್ಯೂ ಜ್ವರದ ಲಕ್ಷಣಗಳು ಎಂದು ತಿಳಿಯಬಹುದು. ಮೈಮೇಲೆ ಕೆಂಪು ಗುಳ್ಳೆಗಳು, ಕಣ್ಣು ಕೆಂಪಾಗುವುದು, ವಸಡು ಹಾಗೂ ಮೂಗಿನಲ್ಲಿ ರಕ್ತಸ್ರಾವದ ಲಕ್ಷಣ, ಕೆಂಪಾದ ಮೂತ್ರ, ಮಲ ಕಪ್ಪಾಗಿದ್ದಲ್ಲಿ ಕೂಡಲೇ ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here