ಕುಟುಂಬದ ಸದಸ್ಯರಂತೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವುದು ಹೆಮ್ಮೆಯ ವಿಚಾರ – ಭಾಗೀರಥಿ ಮುರುಳ್ಯ
ಕಾಣಿಯೂರು: ಒಳ್ಳೆಯ ಪರಂಪರೆ, ಸಂಸ್ಕೃತಿ, ಆಚಾರ ವಿಚಾರಗಳನ್ನು ಬೋಧಿಸುತ್ತಿರುವ ಸಂಸ್ಥೆಗಳು ಪ್ರಸ್ತುತ ದಿನಗಳಲ್ಲಿ ಅಗತ್ಯ. ಸಮಾಜಕ್ಕೆ ಸೇವಾ ಮನೋಭಾವ ನೀಡುವ ಗುಣ, ಬೆಳೆಸುವ ಪ್ರಕ್ರಿಯೆ ಶಿಕ್ಷಣದಿಂದ ಆಗಬೇಕು. ಆ ಕೆಲಸವನ್ನು ಪ್ರಗತಿ ವಿದ್ಯಾಸಂಸ್ಥೆ ನಿರಂತರವಾಗಿ ಮಾಡುತ್ತಿದೆ. ನಮ್ಮ ಬದುಕನ್ನು ಸುಂದರಗೊಳಿಸುವ ಸಾಂಸ್ಕೃತಿಕ ವಿಚಾರಧಾರೆಯ ಸಂಸ್ಕಾರಯುತ ಶಿಕ್ಷಣ ನೀಡಿ. ಪ್ರಗತಿ ವಿದ್ಯಾಸಂಸ್ಥೆಯ ಅಧ್ಯಾಪಕ ವರ್ಗ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವುದರ ಮೂಲಕ ಸಂಸ್ಥೆಯಲ್ಲಿ ಉತ್ತಮ ಫಲಿತಾಂಶ ದಾಖಲಾಗಿರುವುದು ಶ್ಲಾಘನೀಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಅವರು ಜೂ 22ರಂದು ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಒಂದು ವಿದ್ಯಾಸಂಸ್ಥೆಯನ್ನು ನಡೆಸಬೇಕಾದರೆ ಅದರ ಕಷ್ಟ, ನೋವು ಸಂಸ್ಥೆಯನ್ನು ನಡೆಸುವವರಿಗೆ ಮಾತ್ರ ಗೊತ್ತು. ಒಂದೇ ಮನೆಯ, ಒಂದೇ ಕುಟುಂಬದ ಸದಸ್ಯರ ಹಾಗೆ ಒಟ್ಟಿಗೆ ಸೇರಿ ಕೆಲಸ ಮಾಡುವ ಪ್ರಗತಿ ವಿದ್ಯಾಸಂಸ್ಥೆಯ ಬಗ್ಗೆ ತುಂಬಾ ಹೆಮ್ಮೆಯಿದೆ. ಕಾನೂನಿನ ಚೌಕಟ್ಟು ನೋಡಿಕೊಂಡು ಸಂಸ್ಥೆಯ ಅಭಿವೃದ್ಧಿಗೆ ಅನುದಾನ ಒದಗಿಸುತ್ತೇನೆ ಎಂದರು.
ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಅಧ್ಯಕ್ಷ, ನಿವೃತ್ತ ಡಿವೈಎಸ್‌ಪಿ ಜಗನ್ನಾಥ ರೈ ನುಳಿಯಾಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿಯಾಗಿ ಸಂಸ್ಥೆ ಬೆಳೆಯಲು ಕಾರಣಕರ್ತರಾದ ಪೋಷಕರು ಸಂಸ್ಥೆಯ ಬೆನ್ನೆಲುಬು. ಎಲ್ಲರ ಕೂಡುವಿಕೆಯಿಂದ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನಡೆಯುತ್ತಿವೆ. ಪ್ರಗತಿ ವಿದ್ಯಾಸಂಸ್ಥೆಗಳಲ್ಲಿ ಇಂತಹ ಉತ್ತಮವಾದ ಚಟುವಟಿಕೆಗಳು ನಿರಂತರ ನಡೆಯುತ್ತಿದೆ ಎಂಬುದಕ್ಕೆ ಸಂಸ್ಥೆಯ ಸಾಧನೆಗಳೇ ಸಾಕ್ಷಿ ಎಂದರು.
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಮಾತನಾಡಿ, ಮೌಲ್ಯ ತುಂಬಿದ ಜೀವನದ ಪಾಠ ಕಲಿತು ಸಮಾಜಕ್ಕೆ ಮಾದರಿಯಾಗಬೇಕು. ವಿದ್ಯಾರ್ಥಿಗಳು ಕಲಿಕೆಯ ಜತೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಕುರಿತು ಅರಿತುಕೊಳ್ಳಬೇಕು ಎಂದರು. ಶಾಲಾಡಳಿತ ಸಮಿತಿ ಸದಸ್ಯರಾದ ನಾಗೇಶ್ ರೈ ಮಾಳ, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಗೌರವಾಧ್ಯಕ್ಷ ಉಮೇಶ್ ಎಂ.ಕೆ.ವಿ ಶುಭಹಾರೈಸಿದರು.
ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಸಂಸ್ಥೆಯ ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಕೋಶಾಧಿಕಾರಿ ಉದಯ ರೈ ಮಾದೋಡಿ, ಟ್ರಸ್ಟಿಗಳಾದ ವೃಂದಾ ಜೆ. ರೈ, ದೇವಿಕಿರಣ್ ರೈ ಮಾದೋಡಿ, ಹರಿಚರಣ್ ರೈ ಮಾದೋಡಿ,ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ಜ್ಞಾನೇಶ್ವರಿ ಕಾಣಿಯೂರು, ಹಿರಿಯ ಶಿಕ್ಷಕಿಯರಾದ ಹೇಮಾನಾಗೇಶ್ ರೈ ಮಾಳ, ಅನಿತಾ ಜೆ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ಸರಸ್ವತಿ ಎಂ ಪ್ರತಿಜ್ಞಾ ವಿಧಿ ಬೋಧಿಸಿ, ವಂದಿಸಿದರು.
ವಿದ್ಯಾರ್ಥಿನಿ ಈಶಿತಾ ಪ್ರಾರ್ಥಿಸಿದರು. ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ಸ್ವಾಗತದೊಂದಿಗೆ, ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಶಿಕ್ಷಕಿ ವಿನಯ ವಿ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಾಸಕರಿಗೆ ಸನ್ಮಾನ: ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಭಾಗೀರಥಿ ಮುರುಳ್ಯ ಅವರನ್ನು ಪ್ರಗತಿ ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಗಮನ ಸೆಳೆದ ವಿದ್ಯಾರ್ಥಿ ಪಾರ್ಲಿಮೆಂಟ್
ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ಪಾರ್ಲಿಮೆಂಟ್ ಬಹಳ ಯಶಸ್ವಿಯಾಗಿ ಸ್ಪೀಕರ್ ಪ್ರತೀತ ಪಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರವಾದ ಚರ್ಚೆಗಳು ನಡೆದು ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸ್ಪೀಕರ್ ಯಶಸ್ವಿಯಾದರು. ಸ್ವಚ್ಛತೆ ,ಶಿಸ್ತು , ಆಹಾರ , ಕ್ರೀಡೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಚಾರ , ಆರೋಗ್ಯ ಇವುಗಳ ಬಗ್ಗೆ ತೀವ್ರ ವಾಗ್ವಾದಗಳು ನಡೆದು ಸಂಸ್ಥೆಯ ಬೆಳವಣಿಗೆಗೆ ಮತ್ತು ಯಶಸ್ವಿಗೆ ಎರಡು ಪಕ್ಷಗಳು ಕೈಜೋಡಿಸಿ ಸಹಕರಿಸಬೇಕೆಂದು ಹೇಳಿ ಸ್ಪೀಕರ್ ನ್ಯಾಯ ಒದಗಿಸಿದರು. ಒಟ್ಟಿನಲ್ಲಿ ವಿದ್ಯಾರ್ಥಿ ಪಾರ್ಲಿಮೆಂಟ್ ಎಲ್ಲರ ಗಮನ ಸೆಳೆಯಿತು.