ಕಡಬ: ಕಳೆದ ಎರಡು ತಿಂಗಳ ಹಿಂದೆ ಅಟ್ಟಹಾಸ ಮೆರೆದಿದ್ದ ಕಾಡಾನೆಗಳು ಮತ್ತೆ ಕಾಡಿನಿಂದ ರಸ್ತೆಗಿಳಿಯುತ್ತಿವೆ. ಜೂ.24ರ ಮುಂಜಾನೆ ಐತ್ತೂರು, ಆಜನ ಭಾಗದಲ್ಲಿ ಕಾಡಾನೆಗಳು ಸಂಚರಿಸಿ ಕೃಷಿ ನಾಶ ಮಾಡಿರುವುದು ಅಲ್ಲದೆ, ಮರ್ದಾಳ ಪೇಟೆಯ ಸಮೀಪ ಇರುವ ವಿಶೇಷ ಶಾಲೆಯ ಬಳಿಯೂ ಕಾಡಾನೆಗಳು ಕಾಣ ಸಿಕ್ಕಿದ ಬಗ್ಗೆ ತಿಳಿದು ಬಂದಿದೆ.ಕಾಡಾನೆಗಳು ಇದೀಗ ಪೇಟೆಯ ಕಡೆಗೂ ಬಂದಿರುವುದರಿಂದ ಸಹಜವಾಗಿ ಜನರು ಆತಂಕಿತರಾಗಿದ್ದಾರೆ.
ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ:
ಕಾಡಾನೆಗಳು ಕಂಡರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದು ಅರಣ್ಯಾಧಿಕಾರಿಗಳು ಹೇಳುತ್ತಿದ್ದರೂ, ಆನೆ ಬಂದಾಗ ಮಾಹಿತಿ ನೀಡಿದರೆ ಅರಣ್ಯ ಇಲಾಖೆಯವರು ಕಾಟಾಚಾರಕ್ಕೆ ಬಂದು ಭೇಟಿ ಕೊಡುತ್ತಾರೆ, ಕೇವಲ ರಸ್ತೆಯಲ್ಲಿ ಮಾತ್ರ ಸಂಚರಿಸುತ್ತಾರೆ ಎಂದು, ಆನೆಗಳ ಉಪಟಳದಿಂದ ಬೇಸತ್ತಿರುವ ಜನರು ಅರಣ್ಯ ಇಲಾಖೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.