ಜ್ಞಾನದ ಬೆಳಕು ನೀಡುತ್ತಿರುವ ವಿದ್ಯಾಸಂಸ್ಥೆ: ಡಾ| ಗೀವರ್ಗೀಸ್ ಮಾರ್ ಮಕರಿಯೋಸ್
ನೆಲ್ಯಾಡಿ: ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನಲ್ಲಿ ವಿಜ್ಞಾನ ಪ್ರಯೋಗಾಲಯ ಹಾಗೂ ಕಿಂಡರ್ ಗಾರ್ಟನ್‌ನ ಹೊಸ ವಿಭಾಗ ಜೂ.24ರಂದು ಉದ್ಘಾಟನೆಗೊಂಡಿತು.
ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂದನೀಯ ರೆ.ಫಾ.ಡಾ| ಗೀವರ್ಗಿಸ್ ಮಾರ್ ಮಕರಿಯೋಸ್‌ರವರು ಉದ್ಘಾಟಿಸಿ ಆಶೀರ್ವಚನ ವಿಧಿ ವಿಧಾನ ನೆರವೇರಿಸಿದರು.
ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ದೇಶದ ಸತ್ಪ್ರಜೆಯಾಗಿಸುವಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರು ಹಾಗೂ ಸಮಾಜದ ಮೇಲಿದೆ. ನೆಲ್ಯಾಡಿ ಜ್ಞಾನೋದಯ ವಿದ್ಯಾಸಂಸ್ಥೆಯು ನೆಲ್ಯಾಡಿ ಹಾಗೂ ಅಸುಪಾಸಿನ ಗ್ರಾಮಗಳ ಮಕ್ಕಳಿಗೆ ಜ್ಞಾನದ ಬೆಳಕು ನೀಡುತ್ತಿದೆ. ಸಮಾಜ, ಸರಕಾರದ ಸಹಕಾರದಿಂದಲೇ ವಿದ್ಯಾಸಂಸ್ಥೆ ಬೆಳೆದಿದೆ ಎಂದರು. 1986ರಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡ ವಿದ್ಯಾಸಂಸ್ಥೆ 2023ರ ತನಕ ಹಲವು ರೀತಿಯಲ್ಲಿ ಎದ್ದುನಿಂತಿದೆ. ಇದಕ್ಕೆ ಈ ಭಾಗದ ಎಲ್ಲರ ಸಹಕಾರ ಸಿಕ್ಕಿದೆ. ಶಾಲೆ ಕಟ್ಟಡಗಳ ಸಮುಚ್ಚಯವಲ್ಲ, ಅದು ದೇವ ಮಂದಿರ. ದೇವರಿಗೆ ಸಮಾನರಾದ ಹೆತ್ತವರು, ಗುರುಗಳಿಗೆ ಮಕ್ಕಳು ಗೌರವ ಕೊಡಬೇಕು. ವಿದ್ಯೆ,ಜ್ಞಾನದಿಂದ ಬದುಕು ರೂಪುಗೊಳ್ಳುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಥನಿ ನವಜ್ಯೋತಿ ಪ್ರೊವಿನ್ಸ್‌ನ ಪ್ರೊವಿನ್ಸಿಯಲ್ ಸುಪಿರಿಯರ್ ರೆ.ಡಾ.ಜಾರ್ಜ್ ಜೋಸೆಫ್ ಅಯ್ಯನೆತ್ ಒಐಸಿ ಅವರು ಮಾತನಾಡಿ, ಕಳೆದ 50ವರ್ಷಗಳಿಂದ ಬೆಥನಿ ವಿದ್ಯಾಸಂಸ್ಥೆಯು ಸಮಾಜದಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಇದಕ್ಕೆ ಎಲ್ಲರ ಸಹಕಾರ, ಪ್ರೋತ್ಸಾಹ ಸಿಕ್ಕಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದರು.
ಅತಿಥಿಯಾಗಿದ್ದ ಜಿ.ಪಂ.ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು ಅವರು ಮಾತನಾಡಿ, ತಪ್ಪು ಮಾಡಿದ ಮಕ್ಕಳಿಗೆ ಹೊಡೆತ ನೀಡಿಯೇ ಸರಿದಾರಿಗೆ ತರಬೇಕಾಗಿದೆ. ಈ ರೀತಿಯಾದಲ್ಲಿ ಮಕ್ಕಳೂ ಒಳ್ಳೆಯ ನಾಗರಿಕರಾಗಿ ಬೆಳೆಯಲಿದ್ದಾರೆ ಎಂದರು. ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ಸ್ಥಾಪಕ ಧರ್ಮಗುರು ರೆ.ಫಾ.ಜಕಾರಿಯಾಸ್ ನಂದಿಯಾಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗೌರವಾರ್ಪಣೆ:
ಸೈನ್ಸ್ ಲ್ಯಾಬ್ ಹಾಗೂ ಕಿಂಡರ್ ಗಾರ್ಟನ್ ವಿಭಾಗ ಆರಂಭಿಸುವಲ್ಲಿ ನಾನಾ ರೀತಿಯ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ಪ್ರಾಂಶುಪಾಲ ರೆ.ಫಾ.ತೋಮಸ್ ಬಿಜಿಲಿ ಒಐಸಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜೋಸ್ಲಿ ವಂದಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷರಾದ ಅಬ್ರಹಾಂ ಕೆ.ಪಿ., ಗಂಗಾಧರ ಶೆಟ್ಟಿ ಹೊಸಮನೆ, ನೆಲ್ಯಾಡಿ ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್, ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್‌ನ ಸಂಚಾಲಕ ರೆ.ಫಾ.ಹನಿ ಜೇಕಬ್, ಡಾ.ಅನೀಸ್ ಸೇರಿದಂತೆ ಧರ್ಮಗುರುಗಳು, ಧರ್ಮಭಗಿನಿಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಆರಂಭಕ್ಕೂ ಮೊದಲು ಧರ್ಮಾಧ್ಯಕ್ಷರು ಹಾಗೂ ಅತಿಥಿಗಳನ್ನು ಬ್ಯಾಂಡ್ ವಾದ್ಯದೊಂದಿಗೆ ಕರೆ ತರಲಾಯಿತು.