





ಬೆಂಗಳೂರು:ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ಕ್ಷೇತ್ರ ಮರುವಿಂಗಡನೆ ಮತ್ತು ಮೀಸಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ 10 ವಾರಗಳ ಕಾಲಾವಕಾಶ ನೀಡಿದೆ.


ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬಾಕಿ ಉಳಿದಿರುವ ಅರ್ಜಿಯನ್ನು ಅಡ್ವೊಕೇಟ್ ಜನರಲ್ ಜೂ.28ರಂದು ಪ್ರಸ್ತಾಪಿಸಿದರು.ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಪಟ್ಟಿಗಳನ್ನು ಮರುಪರಿಶೀಲಿಸಲು ಮತ್ತು ಅಧಿಸೂಚನೆಗಳನ್ನು ಹೊರಡಿಸಲು ಇಂದಿನಿಂದ 10 ವಾರಗಳ ಕಾಲಾವಕಾಶವನ್ನು ಕೋರಿದರು.10 ವಾರಗಳಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿಯ ಅಗತ್ಯ ಅಧಿಸೂಚನೆಗಳನ್ನು ಒದಗಿಸುವಂತೆ ಮತ್ತು ಅನುಸರಣೆ ವರದಿಯನ್ನು ಸಲ್ಲಿಸುವಂತೆ ರಾಜ್ಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಂತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.ಅರ್ಜಿಯ ವಿಚಾರಣೆಯನ್ನು 11 ವಾರಗಳ ನಂತರ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ.2021ರ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ತಯಾರಿ ನಡೆಸಿತ್ತು. ಈ ಮಧ್ಯೆ ಎಸ್ಇಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವ ಮೊದಲು,ಹಿಂದಿನ ಬಿಜೆಪಿ ಸರ್ಕಾರ ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯ್ದೆಗೆ ತಿದ್ದುಪಡಿ ಮಾಡಿತು.ಕ್ಷೇತ್ರಗಳನ್ನು ಮರುವಿಂಗಡಣೆ ಮತ್ತು ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸುವ ಆಯೋಗದ ಅಧಿಕಾರವನ್ನು ಹಿಂತೆಗೆದುಕೊಂಡಿತು.ಇದೀಗ ಪ್ರಕ್ರಿಯೆ ನಡೆಸಲು ರಾಜ್ಯವು ಹೊಸ ಸಮಿತಿಯನ್ನು ರಚಿಸಿದೆ.












