ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ

0

ರಾಷ್ಟ್ರೀಯ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಮೂಡಬೇಕು : ಅರುಣ್ ಕುಮಾರ್ ಪುತ್ತಿಲ


ಪುತ್ತೂರು: ದೇಶ ಸೇವೆ, ಸಂಸ್ಕೃತಿ, ಸಂಸ್ಕಾರಗಳ ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಜಾರಿಯಲ್ಲಿರಬೇಕು. ರಾಷ್ಟ್ರೀಯ ಚಿಂತನೆಗಳನ್ನು ಶಿಕ್ಷಣದ ಮೂಲಕ ನೀಡಿ ನಾಳಿನ ಸಮಾಜವನ್ನು ನಿರ್ಮಾಣ ಮಾಡುವ ಗುರುತರ ಹೊಣೆ ಶೈಕ್ಷಣಿಕ ಕ್ಷೇತ್ರಕ್ಕಿದೆ. ಆರ್ಥಿಕ ಲೆಕ್ಕಾಚಾರದ ಮೇಲೆ ನಡೆಸುವ ಶಿಕ್ಷಣ ಸಂಸ್ಥೆಗಳಿಗಿಂತ ದೇಶದ ಬಗೆಗೆ ನಿಜ ಕಾಳಜಿಯಿಂದ ಶಿಕ್ಷಣ ಪ್ರಸಾರ ಮಾಡುವ ಸಂಸ್ಥೆಗಳಿಗೆ ಸಮಾಜದಲ್ಲಿ ಅಪಾರ ಮೌಲ್ಯವಿದೆ ಎಂದು ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕೋತ್ಸವ – ಉದ್ಘೋಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೂ.26ರಂದು ಮಾತನಾಡಿದರು.


ರಾಷ್ಟ್ರಕ್ಕಾಗಿ ಮಿಡಿಯುವ ಮನಸ್ಸು ನಮ್ಮದಾಗಬೇಕು. ದೇಶದ ಉನ್ನತಿಕೆಯನ್ನು ಜಗದಗಲ ವಿಸ್ತರಿಸಿದ ಡಾ.ಅಬ್ದುಲ್ ಕಲಾಂ, ಪ್ರಧಾನಿ ನರೇಂದ್ರ ಮೋದಿಯಂಥಹ ವ್ಯಕ್ತಿತ್ವಗಳು ಯುವಸಮುದಾಯಕ್ಕೆ ಆದರ್ಶವಾಗಬೇಕು. ರಾಷ್ಟ್ರವಾದದ ಬಗೆಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೇ ನಿಜವಾದ ಶಿಕ್ಷಣ. ಆದ್ದರಿಂದ ವಿದ್ಯಾರ್ಥಿಗಳನ್ನು ರಾಷ್ಟ್ರಭಕ್ತರನ್ನಾಗಿ ರೂಪಿಸುವ ಉದ್ದೇಶದೊಂದಿಗೆ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು. ಅಂಬಿಕಾ ಶಿಕ್ಷಣ ಸಂಸ್ಥೆ ಇಂದು ರಾಜ್ಯದಲ್ಲೇ ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಅಭಿಪ್ರಾಯಪಟ್ಟರು.


ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಆನಂದ ಭಟ್ ಬಿ ಮಾತನಾಡಿ ಕೇವಲ ಆಧುನಿಕ ಶಿಕ್ಷಣವನ್ನು ಪಡೆದು ದೂರದೂರುಗಳಿಗೋ, ವಿದೇಶಕ್ಕೋ ಹೋಗಿ ನಮ್ಮ ಮೂಲವನ್ನು ಮರೆಯುವುದು ಸಂಸ್ಕಾರವೆನಿಸುವುದಿಲ್ಲ. ಬದಲಾಗಿ ನಾವೆಲ್ಲೇ ಇದ್ದರೂ ಭಾರತೀಯ ಸಂಸ್ಕೃತಿ, ಸಂಸ್ಕಾರಗಳ ಬಗೆಗೆ, ನಮ್ಮ ಮೂಲದ ಬಗೆಗೆ ಗೌರವ ಹೊಂದಿ ಬದುಕಬೇಕು. ಮಕ್ಕಳಿಗೆ ಶಿಕ್ಷಣದೊಂದಿಗೆ ಭಾರತೀಯತೆಯ ಭಾವವನ್ನು ಮೂಡಿಸಬೇಕು. ಇದು ಹೆತ್ತವರ ಜವಾಬ್ದಾರಿ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಕಮಲದ ಹೂವೊಂದು ಕೆಸರಿನಲ್ಲಿದ್ದರೂ ತನ್ನ ದಿವ್ಯತೆಯನ್ನು ಕಾಪಾಡಿಕೊಳ್ಳುತ್ತದೆ. ನಮ್ಮ ವ್ಯಕ್ತಿತ್ವವೂ ಹಾಗೆಯೇ ರೂಪುಗೊಳ್ಳಬೇಕು. ಅವೆಷ್ಟೇ ಕೆಟ್ಟ ವಿಚಾರಗಳು ನಮ್ಮ ಸುತ್ತ ಸುಳಿದಾಡುತ್ತಿದ್ದರೂ ನಮ್ಮ ವ್ಯಕ್ತಿತ್ವದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಮುನ್ನಡೆಯಬೇಕು. ವ್ಯಕ್ತಿತ್ವ, ಸಂಸ್ಕಾರಗಳನ್ನು ರೂಪಿಸುವಂತಹ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯ ಎಂದು ನುಡಿದರು.


ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಬಿಎ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಶ್ರೀಲಕ್ಷ್ಮೀ, ಬಿ.ಎಸ್ಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾರ್ತಿಕ್ ಕೆದಿಮಾರ್, ತತ್ತ್ವಶಾಸ್ತ್ರ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರಕೃತಿ ಇವರನ್ನು ಶೈಕ್ಷಣಿಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಅಂತೆಯೇ ಸಿ.ಎ ಪರೀಕ್ಷೆಗಳಾದ ಐಪಿಸಿಸಿ ಗ್ರೂಪ್ – 1 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿ ಸ್ವರ್ಣಾ ಶೆಣೈ, ಸಿ.ಎ – ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅನ್ಮಯ್ ಭಟ್, ಸಿಂಚನಾ ಹಾಗೂ ತೇಜಸ್ವಿನಿ ಅವರನ್ನು ಅಭಿನಂದಿಸಲಾಯಿತು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸರ್ವಾಂಗೀಣ ಸಾಧನೆ ತೋರಿದ ಚೈತನ್ಯಾ ಸಿ. ಅವರಿಗೆ ಸಾಂಸ್ಕೃತಿಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರೆ ಕ್ರೀಡಾ ವಿಭಾಗದಲ್ಲಿ ಸರ್ವಾಂಗೀಣ ಸಾಧನೆ ಮೆರೆದ ವಿದ್ಯಾರ್ಥಿ ನವನೀತ್ ಹಾಗೂ ವಿದ್ಯಾರ್ಥಿನಿ ಕೀರ್ತಿ ಕೆ.ಸಿ ಅವರಿಗೆ ಕ್ರೀಡಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾದ ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಅಂಬಿಕಾ ಪರಿವಾರ ಸಂಸ್ಥೆಗಳ ಬೋಧಕವೃಂದ, ಹೆತ್ತವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರಾದ ಶ್ರಾವ್ಯ, ಅನಘಾ ಹಾಗೂ ಮೇಘ ಪ್ರಾರ್ಥನೆಗೈದರು. ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಸ್ವಾಗತಗೈದು ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಭರತ್ ಸಾಧಕ ವಿದ್ಯಾರ್ಥಿಗಳ ವಿವರವನ್ನು ಒದಗಿಸಿಕೊಟ್ಟರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ನಯನಾ ವಂದಿಸಿದರು. ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು. ಸಭಾಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

LEAVE A REPLY

Please enter your comment!
Please enter your name here