ನಾನು ಮೈಸೂರಿನಲ್ಲಿ ಸೈಕಲಲ್ಲಿ ಬ್ರೆಡ್ ಮಾರುತ್ತಿದ್ದೆ..!- ವಿದ್ಯಾರ್ಥಿಗಳ ಬದುಕಿನಲ್ಲಿ ದೈರ್ಯ ತುಂಬಿದ ಶಾಸಕ ಅಶೋಕ್ ಕುಮಾರ್ ರೈ-

0

ಪುತ್ತೂರು: ನಾವು ಜೀವನದಲ್ಲಿ ಹೇಗೆ ಯಶಸ್ಸು ಆಗಬೇಕು ಎಂಬುದನ್ನು ಪ್ರತೀಯೊಬ್ಬ ವಿದ್ಯಾರ್ಥಿಯೂ ಕನಸು ಕಾಣುತ್ತಿರಬೇಕು. ಎಲ್ಲರಿಗೂ ಡಾಕ್ಟರ್ , ಇಂಜಿನಿಯರ್ ಆಗಲು ಸಾಧ್ಯವಿಲ್ಲ ಆದರೂ ನಾವು ಆ ಕನಸನ್ನು ಕಾಣಬೇಕು, ನಾನು ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಬೇಕು, ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಉದ್ದೇಶ ಎಲ್ಲರಿಗೂ ಇರಲಿ ಅದು ನಮ್ಮನ್ನು ಉತ್ತುಂಗತ್ತ ಏರಿಸುತ್ತದೆ. ನಾನು ದೊಡ್ಡ ಉದ್ಯಮ ಆರಂಭಿಸಿ ಉದ್ಯಮಿಯಾಗಲಿಲ್ಲ ನಾನು ಶಾಲಾ ಅವಧಿಯಲ್ಲೇ ಮೈಸೂರಿನಲ್ಲಿ ಸೈಕಲ್‌ನಲ್ಲಿ ತೆರಳಿ ಬ್ರೆಡ್ ಮಾರುತ್ತಿದ್ದೆ ಎಂದು ಶಾಸಕ ಅಶೋಕ್‌ ಕುಮಾರ್ ರೈ ವಿದ್ಯಾರ್ಥಿಗಳ ಜೊತೆ ತನ್ನ ಬಾಲ್ಯದ ವಿಚಾರವನ್ನು ಹಂಚಿಕೊಂಡರು.‌

ಅವರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅರಣ್ಯ ಇಲಾಖೆ ಮಂಗಳೂರು ವಿಭಾಗ, ಪುತ್ತೂರು ವಲಯದಿಂದ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಪುತ್ತೂರಿನಿಂದ 50 ರೂ ಹಿಡಿದುಕೊಂಡು ನಾನು ಮೈಸೂರಿಗೆ ಹೋಗಿದ್ದೆ. ಅಲ್ಲೇ ಉನ್ನತ ವಿದ್ಯಾಬ್ಯಾಸ ಮಾಡಿದೆ. ಸಂಜೆಯಾಗುತ್ತಲೇ ಸೈಕಲಲ್ಲಿ ಬ್ರೆಡ್ ಕಟ್ಟಿಕೊಂಡು ಅಂಗಡಿ ಅಂಗಡಿ ಹೋಗಿ ಸೇಲ್ ಮಾಡುತ್ತಿದ್ದೆ. ನನ್ನ ಸಹಪಾಠಿಗಳು ತಮಾಷೆ ಮಾಡುತ್ತಾರೆಂದು ಅವರಿಗೆ ಕಣ್ಣಿಗೆ ಬೀಳದ ಹಾಗೆ ನನ್ನ ಬ್ರೆಡ್ ಮಾರಾಟ ಕೆಲಸ ಮಾಡುತ್ತಿದ್ದೆ. ಅದರಿಂದ ಉಳಿತಾಯವಾದ ಹಣ ಇಟ್ಟುಕೊಂಡು ನಾನು ಮೈಸೂರಿನಲ್ಲಿ ನನ್ನ ಅಣ್ಣನ ನೆರವಿನೊಂದಿಗೆ ಅಂದಿನ ಕಾಲದ ಫೇಮಸ್ ರೆನಾಲ್ಟ್ ಪೆನ್ ಮಾರಾಟ ಮಾಡಲು ಬ್ಯಾಂಕಿನಿಂದ 5000 ಲೋನ್ ಪಡೆದು ಪೆನ್ ಉದ್ಯಮಕ್ಕೆ ಕೈ ಹಾಕಿದೆ ಅದರಲ್ಲಿ ಅಂದಿನ ಎರಡು ಲಕ್ಷ ವ್ಯವಹಾರ ಮಾಡಿದೆ. ಆ ಬಳಿಕ ಅದೇ ಉದ್ಯಮದಲ್ಲಿ 2 ಕೋಟಿಗೂ ಮಿಕ್ಕಿದ ವ್ಯವಹಾರ ಮಾಡಿದೆ ಆ ಬಳಿಕ ತಿರುಗಿ ನೋಡಲಿಲ್ಲ. ಮತ್ತೆ ಬೇರೆ ಬೇರೆ ಉದ್ಯಮಕ್ಕೆ ಕೈ ಹಾಕಿ ಅದರಲ್ಲಿ ಯಶಸ್ವಿಯಾದೆ ಎಂದು ತನ್ನ ಬಾಲ್ಯದ ಕಥೆ ಹೇಳಿದಾಗ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟುವ ಮೂಲಕ ಶಾಸಕರ ಸಾಹಸಕ್ಕೆ ಜೈ ಹೇಳಿದರು. ಪ್ರಾಮಾಣಿಕತೆ, ನಾವು ಬದುಕಬೇಕು, ಸಮಾಜದಲ್ಲಿ ಹೆಸರುಗಳಿಸಬೇಕು, ಉತ್ತಮ ಪ್ರಜೆಯಾಗಬೇಕು ಎಂಬ ಹಂಬಲ ಇದ್ದರೆ ದೇವರೇ ನಮಗೆ ಉನ್ನತ ದಾರಿಯನ್ನು ತೋರಿಸುತ್ತಾನೆ ಎಂಬುದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ಹೇಳಿದ ಶಾಸಕರು ಯಾವ ಕಾರಣಕ್ಕೂ ಜೀವನದಲ್ಲಿ ಧೈರ್ಯಗುಂದಬಾರದು ಎಂದು ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here