ಬೆಂಗಳೂರು: ಕೆ.ಆರ್.ಪುರಂ ತಾಲ್ಲೂಕಿನ ತಹಶೀಲ್ದಾರ್ ಆಗಿರುವ ಪುತ್ತೂರು ಮೂಲದ ಅಜಿತ್ ಕುಮಾರ್ ರೈ ಸೊರಕೆ ಅವರನ್ನು ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಆರೋಪದಲ್ಲಿ ಹೆಚ್ಚಿನ ವಿಚಾರಣೆಗಾಗಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಅಜಿತ್ ಕುಮಾರ್ ರೈಯವರು ಭಾರೀ ಪ್ರಮಾಣದ ಬೇನಾಮಿ ಆಸ್ತಿಗಳನ್ನು ಹೊಂದಿರುವ ದಾಖಲೆಗಳು ಪತ್ತೆಯಾಗಿದ್ದು ಅವುಗಳ ಕುರಿತು ವಿಚಾರಣೆ ನಡೆಸಬೇಕಿದೆ.ಬೇನಾಮಿ ವ್ಯಕ್ತಿಗಳನ್ನೂ ವಿಚಾರಣೆ ಮಾಡಬೇಕಿದೆ.ಬುಧವಾರ ತಡ ರಾತ್ರಿ ಆರೋಪಿ ಅಜಿತ್ ರೈಯವರನ್ನು ವಶಕ್ಕೆ ಪಡೆದಿದ್ದೆವು.ಜೂ.29ರಂದು ಬೆಳಿಗ್ಗೆ ಬಂಽಸಿದ್ದೇವೆ ಎಂದು ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್.ಪಿ.ಕೆ.ವಿ.ಅಶೋಕ್ ತಿಳಿಸಿದ್ದಾರೆ.
ಈವರೆಗೆ 150 ಎಕರೆಗೂ ಹೆಚ್ಚು ಬೇನಾಮಿ ಆಸ್ತಿಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.ಆರೋಪಿಯು ಆಸ್ತಿಗಳ ಮೂಲ ಮತ್ತು ಖರೀದಿ ಕುರಿತು ಸರಿಯಾದ ಮಾಹಿತಿ ಒದಗಿಸುತ್ತಿಲ್ಲ. ಈ ಕಾರಣದಿಂದ ಬಂಽಸಲಾಗಿದೆ ಎಂದು ಎಸ್.ಪಿ.ಯವರು ಮಾಹಿತಿ ನೀಡಿದರು.ಇನ್ನೂ ಭಾರೀ ಪ್ರಮಾಣದ ಬೇನಾಮಿ ಆಸ್ತಿಗಳನ್ನು ಹೊಂದಿರುವ ದಾಖಲೆಗಳು ಪತ್ತೆಯಾಗಿರುವುದಾಗಿ ಎಸ್ಪಿಯವರು ಮಾಹಿತಿ ನೀಡಿದ್ದಾರೆ.
ಜೂ.28ರಂದು ಲೋಕಾಯುಕ್ತ ದಾಳಿ ನಡೆದಿತ್ತು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ ಸೇರಿದಂತೆ ರಾಜ್ಯದ 15 ಅಧಿಕಾರಿಗಳ ಮನೆ,ಕಚೇರಿಗಳ ಮೇಲೆ ದಾಳಿ ಮಾಡಿದ್ದ ಲೋಕಾಯುಕ್ತ ಪೊಲೀಸರು ಕೋಟ್ಯಂತರ ರೂ.ಮೌಲ್ಯದ ಸೊತ್ತು, ದಾಖಲೆಗಳನ್ನು ಪತ್ತೆ ಮಾಡಿದ್ದರು.
ಅಜಿತ್ ಕುಮಾರ್ ರೈಯವರ ಬೆಂಗಳೂರು ಮನೆ, ಬೆಂಗಳೂರುನಲ್ಲಿರುವ ಅವರ ಸಹೋದರ ಆಶಿತ್ ರೈ ಮನೆ, ಕೆಯ್ಯೂರು ಗ್ರಾಮದ ಸಾಗುವಿನಲ್ಲಿರುವ ಅವರ ತಾಯಿ ಮನೆ, ಬೆಂಗಳೂರಲ್ಲಿರುವ ಸ್ನೇಹಿತ ಗೌರವ್ ಶೆಟ್ಟಿಯವರ ಮನೆ ಸೇರಿದಂತರ ಅಜಿತ್ ಕುಮಾರ್ ರೈಯವರಿಗೆ ಸಂಬಂಧಿಸಿ ಏಕಕಾಲದಲ್ಲಿ 11 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ 40 ಲಕ್ಷ ರೂ.ನಗದು, 700 ಗ್ರಾಂ ಚಿನ್ನ ಸೇರಿ 1.90 ಕೋಟಿ ರೂ.ಮೌಲ್ಯದ ಆಸ್ತಿ ದಾಖಲೆ ಪತ್ರ ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು.
ದಾಳಿ ವೇಳೆ ಅಜಿತ್ ರೈ ಅವರಿಗೆ ಸೇರಿದ 100 ಎಕರೆಗೂ ಅಧಿಕ ಆಸ್ತಿ ಪತ್ರಗಳು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಇರುವ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ಕುಮಾರ್ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಕೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಅವರನ್ನು ಬಂಽಸಲಾಗಿದೆ.ಸತತ 30 ಗಂಟೆಗಳ ಶೋಧ ನಡೆಸಿದ್ದ ಲೋಕಾಯುಕ್ತ ಪೊಲೀಸರು ಲಭ್ಯವಾದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು.