ನೆಲ್ಯಾಡಿ: ಎರಡನೇ ಅವಧಿಗೆ ಗ್ರಾಮ ಪಂಚಾಯತ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿಗೊಂಡಿದ್ದು ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಹಲವು ಆಕಾಂಕ್ಷಿಗಳಿದ್ದಾರೆ.
18 ಸದಸ್ಯ ಬಲದ ಕೌಕ್ರಾಡಿ ಗ್ರಾಮ ಪಂಚಾಯಿತಿಯಲ್ಲಿ 11 ಬಿಜೆಪಿ ಬೆಂಬಲಿತ ಸದಸ್ಯರಿದ್ದು, 7 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ 11 ಸದಸ್ಯ ಬಲದೊಂದಿಗೆ ಬಹುಮತ ಪಡೆದುಕೊಂಡಿರುವ ಬಿಜೆಪಿಗೆ ಸಲೀಸಾಗಿ ಲಭಿಸುವ ಸಾಧ್ಯತೆ ಇದ್ದರೂ 7 ಸದಸ್ಯ ಬಲಹೊಂದಿರುವ ಕಾಂಗ್ರೆಸ್ ಸಹ ಸ್ಪರ್ಧೆ ಮಾಡುವ ಉತ್ಸಾಹದಲ್ಲಿದೆ.
ಬಿಜೆಪಿಯಲ್ಲಿ ನಾಲ್ವರು ಆಕಾಂಕ್ಷಿಗಳು:
11 ಸದಸ್ಯ ಸ್ಥಾನ ಹೊಂದಿರುವ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸದ್ಯ ನಾಲ್ವರು ಪ್ರಬಲ ಆಕಾಂಕ್ಷಿಗಳಿದ್ದಾರೆ. ಕೌಕ್ರಾಡಿ 2ನೇ ವಾರ್ಡ್ನ ಸದಸ್ಯ ಲೋಕೇಶ್ ಬಾಣಜಾಲು, ಕೌಕ್ರಾಡಿ 1ನೇ ವಾರ್ಡ್ನ ಸದಸ್ಯ ಮಹೇಶ್, ಕೌಕ್ರಾಡಿ ೩ನೇ ವಾರ್ಡ್ನ ಸದಸ್ಯ ಉದಯಕುಮಾರ್, ಕೌಕ್ರಾಡಿ 1ನೇ ವಾರ್ಡ್ನ ಸದಸ್ಯೆ, ಹಾಲಿ ಉಪಾಧ್ಯಕ್ಷೆ ಭವಾನಿ ಜಿ. ಅವರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ ಲೋಕೇಶ್ ಬಾಣಜಾಲು ಅವರು 2ನೇ ಬಾರಿಗೆ ಗ್ರಾಮ ಪಂಚಾಯತ್ ಸದಸ್ಯರಾಗಿ ಚುನಾಯಿತರಾದವರು. ಉಳಿದವರು ಮೊದಲ ಸಲ ಗ್ರಾಮ ಪಂಚಾಯಿತಿಗೆ ಸದಸ್ಯರಾಗಿ ಪ್ರವೇಶಿಸಿದ್ದಾರೆ. ಜಿ.ಭವಾನಿ ಅವರಿಗೆ ಮೊದಲ ಬಾರಿಗೇ ಉಪಾಧ್ಯಕ್ಷೆಯಾಗುವ ಅವಕಾಶವೂ ಸಿಕ್ಕಿದೆ. ಹಾಲಿ ಅಧ್ಯಕ್ಷೆ ವನಿತಾ, ಜಿ.ಸುಧಾಕರ, ಪುಷ್ಪಾ, ಜನಾರ್ದನ, ದೇವಕಿ, ವಿಶ್ವನಾಥ, ಸಂಧ್ಯಾ ಪಂಚಾಯಿತಿಯಲ್ಲಿರುವ ಬಿಜೆಪಿ ಬೆಂಬಲಿತ ಇತರೇ ಸದಸ್ಯರಾಗಿದ್ದಾರೆ.
ಕಾಂಗ್ರೆಸ್ನಿಂದಲೂ ಸ್ಪರ್ಧೆ ಸಾಧ್ಯತೆ:
7 ಸದಸ್ಯ ಬಲಹೊಂದಿರುವ ಕಾಂಗ್ರೆಸ್ ಸಹ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಚಿಂತನೆ ಮಾಡಿದೆ ಎಂದು ವರದಿಯಾಗಿದೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಗಳಿರುವುದರಿಂದ ಅದರ ಲಾಭ ಪಡೆದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆಯೂ ಇದೆ. 5 ಬಾರಿ ಗೆದ್ದು, 1 ಅವಧಿಗೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಕೆ.ಎಂ.ಹನೀಫ್ರವರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೈಲಾ ೩ ಬಾರಿ, ಸವಿತಾ ಅವರು 2 ಸಲ ಪಂಚಾಯತ್ ಸದಸ್ಯೆಯಾಗಿ ಚುನಾಯಿತರಾದವರು. ಟಿ.ಎಂ.ರೋಯಿ ಯಾನೆ ಕುರಿಯಾಕೋಸ್, ದಿನೇಶ್, ಡೈಸಿ ವರ್ಗೀಸ್, ರತ್ನಾವತಿ ಪಂಚಾಯಿತಿಯಲ್ಲಿರುವ ಕಾಂಗ್ರೆಸ್ ಬೆಂಬಲಿತ ಇತರೇ ಸದಸ್ಯರಾಗಿದ್ದಾರೆ. ಎರಡೂ ಪಕ್ಷದಲ್ಲೂ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳಿರುವುದರಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆಯೂ ಇದೆ. ಮುಂದಿನ ಆಗಸ್ಟ್ನಲ್ಲಿ ೨ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಹಿಂದುಳಿದ ವರ್ಗ ಎ ಮಹಿಳೆಗೆ ಉಪಾಧ್ಯಕ್ಷತೆ
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಬಿಜೆಪಿ ಬೆಂಬಲಿತರಾಗಿರುವ ಇಚ್ಲಂಪಾಡಿ 2ನೇ ವಾರ್ಡ್ನ ಸದಸ್ಯೆ ಸಂಧ್ಯಾ ಹಾಗೂ ಕೌಕ್ರಾಡಿ 1ನೇ ವಾರ್ಡ್ನ ಸದಸ್ಯೆ, ಹಾಲಿ ಅಧ್ಯಕ್ಷೆಯೂ ಆಗಿರುವ ವನಿತಾ ಅವರಿಗೆ ಉಪಾಧ್ಯಕ್ಷರಾಗಲು ಅವಕಾಶವಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶೈಲಾ ಅವರಿಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಲು ಅವಕಾಶವಿದೆ. ಈ ಮೂವರಲ್ಲಿ ಒಬ್ಬರು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಲಿದ್ದಾರೆ. ಕೌಕ್ರಾಡಿ ಗ್ರಾ.ಪಂ.ನಲ್ಲಿ ಪ್ರಸ್ತುತ ಹಿಂದುಳಿದ ವರ್ಗ ಎ ಮಹಿಳೆ ಕೆಟಗರಿಗೆ ಸೇರಿದ ವನಿತಾದಿನೇಶ್ ಅಧ್ಯಕ್ಷೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಜಿ.ಭವಾನಿ ಅವರು ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.