ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆ, ಆಕ್ರೋಶ -ತನಿಖೆಗೆ ಜಿ.ಪಂ ಸಿಇಓಗೆ ಬರೆಯಲು ತೀರ್ಮಾನ
ಪುತ್ತೂರು: ನೆ.ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ವೈನ್‌ಶಾಪ್ ತೆರೆಯಲು ಕಟ್ಟಡಕ್ಕೆ ಪಿಡಿಓ ಅವರು ಗ್ರಾ.ಪಂ ಆಡಳಿತದ ಒಪ್ಪಿಗೆ ಪಡೆಯದೇ ಏಕಾಏಕಿ ಅನುಮತಿ ನೀಡಿದ್ದಾರೆ ಎನ್ನುವ ಆರೋಪ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಗೊಂಡು ತೀವ್ರ, ಚರ್ಚೆ, ವಾಗ್ವಾದ, ಆಕ್ರೋಶ, ಆರೋಪ, ಪ್ರತ್ಯಾರೋಪ ನೆ.ಮುಡ್ನೂರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಸಭೆ ಜೂ.28ರಂದು ಗ್ರಾ.ಪಂ ಸಭಾಂಗಣದಲ್ಲಿ ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯ ಇಬ್ರಾಹಿಂ ಕೆ ವಿಚಾರ ಪ್ರಸ್ತಾಪಿಸಿ, ಗಾಳಿಮುಖದಲ್ಲಿ ವೈನ್‌ಶಾಪ್‌ಗೆ 9/11 ಯಾವ ಮಾನದಂಡದಲ್ಲಿ ಕೊಟ್ಟಿದ್ದೀರಿ ಮತ್ತು ಅರ್ಜಿ ಸಲ್ಲಿಸದೇ ಡೋರ್ ನಂಬರ್ ಹೇಗೆ ನೀಡಿದ್ದೀರಿ ಎಂದು ಪ್ರಶ್ನಿಸಿದರು. ಸದಸ್ಯ ರಿಯಾಝ್ ಧ್ವನಿಗೂಡಿಸಿದರು.
ಸದಸ್ಯ ಚಂದ್ರಹಾಸ ಮಾತನಾಡಿ 9/11 ಗೆ ಈ ಹಿಂದೆಯೇ ಅವರು ಅರ್ಜಿ ಕೊಟ್ಟಿದ್ದಾರೆ, ಆಗ ಸದಸ್ಯರು ಯಾಕೆ ಕೇಳಿಲ್ಲ? ಈಗ ಕೇಳುವ ಉದ್ದೇಶವೇನು ಎಂದು ಕೇಳಿದರು. ಒಂದು ಕಟ್ಟಡದ ವಿಚಾರದಲ್ಲಿ ಯಾಕೆ ಟಾರ್ಗೆಟ್ ಮಾಡಲಾಗುತ್ತದೆ, ಗ್ರಾ.ಪಂ ವ್ಯಾಪ್ತಿಯ ಎಲ್ಲ ಕಟ್ಟಡಗಳದ್ದೂ ತನಿಖೆಯಾಗಲಿ ಎಂದು ಅವರು ಆಗ್ರಹಿಸಿದರು. ಸದಸ್ಯ ಪ್ರದೀಪ್ ಧ್ವನಿಗೂಡಿಸಿದರು.
ಇಬ್ರಾಹಿಂ ಕೆ ಮಾತನಾಡಿ ನಾವು ವೈನ್‌ಶಾಪ್ ಮಾಡುವುದಕ್ಕೆ ವಿರೋಧವಿಲ್ಲ, ಕಾನೂನಾತ್ಮಕವಾಗಿ, ದಾಖಲೆ ಸರಿ ಇದ್ದುಕೊಂಡು ಮಾಡಿದ್ದಾರಾ ಎನ್ನುವುದು ನಮ್ಮ ಪ್ರಶ್ನೆ. ಈ ವಿಷಯದಲ್ಲಿ ಈಗಾಗಲೇ ನಮ್ಮ ಪಂಚಾಯತ್‌ನ ಮರ್ಯಾದೆ ಬೀದಿಯಲ್ಲಿ ಹರಾಜಾಗುತ್ತಿದೆ, ಜನರು ಪಂಚಾಯತ್ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದುವಂತೆ ಆಗಿದೆ ಎಂದು ಅವರು ಹೇಳಿದರು.
ಉಪಾಧ್ಯಕ್ಷೆ ಫೌಝಿಯಾ ಮಾತನಾಡಿ ವೈನ್‌ಶಾಪ್‌ಗೆ ಡೋರ್ ನಂಬರ್ ನೀಡುವ ವಿಚಾರ ಅಧ್ಯಕ್ಷರ ಗಮನಕ್ಕೆ ಬಂದಿದೆಯಾ? ಈ ಬಗ್ಗೆ ಪಿಡಿಓ ಉತ್ತರಿಸಬೇಕು ಎಂದು ಹೇಳಿದರು.
ಸದಸ್ಯ ರಾಮ ಮೇನಾಲ ಮಾತನಾಡಿ ಅಲ್ಲಿನ ಕಟ್ಟಡದ ಪರವಾನಿಗೆಗೆ ಅರ್ಜಿ ಕಳೆದ ಸಭೆಯಲ್ಲಿ ಬಂದಿಲ್ಲ, ಹಾಗಾದರೆ ಅಧ್ಯಕ್ಷರಿಗೂ, ಸದಸ್ಯರಿಗೂ ಗೊತ್ತಾಗದೇ ನಿಯಮ ಮೀರಿ ಹೇಗೆ ಕೊಟ್ಟಿದ್ದೀರಿ ಎಂದು ಪಿಡಿಓ ಅವರಲ್ಲಿ ಕೇಳಿದರು. ಅಧ್ಯಕ್ಷರಿಗೆ ಈ ವಿಚಾರ ಗೊತ್ತಾಗಿದೆಯಾ ಎಂದು ರಾಮ ಮೇನಾಲ ಕೇಳಿದಾಗ ‘ನನಗೆ ಗೊತ್ತಿಲ್ಲ’ ಎಂದು ಅಧ್ಯಕ್ಷ ರಮೇಶ್ ರೈ ಸಾಂತ್ಯ ಹೇಳಿದರು.
ಇಬ್ರಾಹಿಂ ಕೆ ಮಾತನಾಡಿ ಇದರಲ್ಲಿ ಪಿಡಿಓ ಅವರು ಬಲಿಪಶು ಆಗಿರುವ ಸಾಧ್ಯತೆಯಿದೆ. ಯಾರದೋ ಒತ್ತಡಕ್ಕೆ ಪಿಡಿಓ ಮಣಿದಿರಬಹುದು ಎಂದು ಹೇಳಿದರು. ಸದಸ್ಯ ಶ್ರೀರಾಮ್ ಪಕ್ಕಳ ಮಾತನಾಡಿ ಅರ್ಜಿ ಯಾರ ಕೈಯಲ್ಲಿ ಬಂದದ್ದು ಎಂದು ತಿಳಿಸಿ ಎಂದು ಹೇಳಿದರು. ಅರ್ಜಿ ನನ್ನ ಟೇಬಲ್ ಮೇಲಿತ್ತು ಎಂದು ಪಿಡಿಓ ಸಂದೇಶ್ ಉತ್ತರಿಸಿದರು. ಅರ್ಜಿಯಲ್ಲಿರುವ ಸಹಿ ಬಗ್ಗೆಯೂ ಹಲವು ಸದಸ್ಯರು ಸಂಶಯ ವ್ಯಕ್ತಪಡಿಸಿದರು. ಫೋರ್ಜರಿ ಸಹಿ ಆಗಿರುವ ಸಾಧ್ಯತೆ ಇದೆ ಎಂದು ಸದಸ್ಯರು ಅನುಮಾನ ವ್ಯಕ್ತಪಡಿಸಿದರು. ಚಂದ್ರಹಾಸ ಮಾತನಾಡಿ ಸಹಿ, ದಿನಾಂಕ ಅದೆಲ್ಲಾ ವಿಷಯವಲ್ಲ. ಮೂರು ಸಹಿ ವಿವಿಧ ರೀತಿಯಲ್ಲಿ ಹಾಕುವವರು ಇದ್ದಾರೆ, ನಾನೂ ಬೇರೆ ಬೇರೆ ರೀತಿಯಲ್ಲಿ ಸಹಿ ಹಾಕುತ್ತೇನೆ, ಹಿಂದಿನ ಅರ್ಜಿಗಳನ್ನೂ ಪರಿಶೀಲಿಸಿ ಎಂದು ಹೇಳಿದರು.
ರಾಮ ಮೇನಾಲ ಮಾತನಾಡಿ ಇದು ದೊಡ್ಡ ತಪ್ಪು. ಸಹಿ ಯಾರದ್ದಾದರೂ ಒಂದೇ ರೀತಿ ಇರಬೇಕು ಎಂದು ಹೇಳಿದರು. ಚಂದ್ರಹಾಸ ಮಾತನಾಡಿ ಇಲ್ಲಿ ನಿರ್ಣಯ ಆದದ್ದು ಯಾವುದೂ ಅನುಷ್ಠಾನ ಆಗಿಲ್ಲ. ನಮ್ಮ ಪಂಚಾಯತ್ ಬಾಡಿ ವೀಕ್ ಆಗಿದೆ. ಹಾಗಾಗಿ ಅಧಿಕಾರಿಗಳು ನಿಮ್ಮ ನಿಯಂತ್ರಣದಲ್ಲಿಲ್ಲ ಎಂದು ಅಧ್ಯಕ್ಷರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾನರ್ ವಿಚಾರ ಹಾಗೂ ತೆರಿಗೆ ಸಂಗ್ರಹ ವಿಚಾರವನ್ನು ಅದಕ್ಕೆ ಉದಾಹರಣೆಯಾಗಿ ನೀಡಿದರು.
ರಾಮ ಮೇನಾಲ ಮಾತನಾಡಿ ಅಧ್ಯಕ್ಷರಿಗೆ ತಮ್ಮ ಪವರ್ ತೋರಿಸುವ ಕಾಲ ಕೂಡಿ ಬಂದಿದೆ. ವೈನ್ ಶಾಪ್ ವಿಚಾರದಲ್ಲಿ ತಮ್ಮ ಪವರ್ ತೋರಿಸಿ ಅಧ್ಯಕ್ಷರೇ ಎಂದು ಹೇಳಿದರು.
ಸದಸ್ಯ ಪ್ರದೀಪ್ ಕುಮಾರ್ ಮಾತನಾಡಿ ಎಲ್ಲವೂ ತನಿಖೆ ಆಗಲಿ, ಹಿಂದಿನ ಅರ್ಜಿಗಳೂ ತನಿಖೆ ಆಗಲಿ ಎಂದು ಹೇಳಿದರು. ಶ್ರೀರಾಮ್ ಪಕ್ಕಳ ಮಾತನಾಡಿ ಅಧ್ಯಕ್ಷರ ಬಗ್ಗೆ ದೂಷಣೆ ಮಾಡುವುದು ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಜವಾಬ್ದಾರಿ ವಹಿಸಿ ಕೆಲಸ ಮಾಡುತ್ತಿದ್ದಾರೆ, ಅಧ್ಯಕ್ಷರ ಮೇಲಿನ ಆರೋಪ ಸತ್ಯಕ್ಕೆ ದೂರ ಎಂದು ಹೇಳಿದರು. ಚಂದ್ರಹಾಸ ಮಾತನಾಡಿ ಅಧ್ಯಕ್ಷರಿಗಿರುವ ಅಧಿಕಾರದ ಬಗ್ಗೆ ಮಆತನಾಡಿದ್ದೇನೆ, ಆ ಹಕ್ಕು ನನಗೆ ಇದೆ ಎಂದರು. ಈ ವೇಳೆ ಚಂದ್ರಹಾಸ ಹಾಗೂ ಪಕ್ಕಳ ಮಧ್ಯೆ ತುಸು ಮಾತಿನ ಚಕಮಕಿ ನಡೆಯಿತು.
ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಗಾಳಿಮುಖದ ವೈನ್‌ಶಾಪ್ ಅನಧಿಕೃತ ಎನ್ನುವ ವಿಚಾರದಲ್ಲಿ ನನಗೆ ಅನೇಕ ಕರೆ, ದೂರುಗಳು ಬಂದಿತ್ತು. ಕಳೆದ ತಿಂಗಳು ಅದಕ್ಕೆ 9/11 ಗೆ ಅರ್ಜಿ ಬಂದಿತ್ತು, ಅದನ್ನು ನಾವು ಕೊಟ್ಟಿದ್ದೇವೆ ಎಂದು ಹೇಳಿದರು.
ಸಾರ್ವಜನಿಕರಿಂದ ನನಗೆ ತೀವ್ರವಾದ ಒತ್ತಡ ಬಂದಿತ್ತು. ಆಗ ನಾವು ಪಿಡಿಓ ಅವರಲ್ಲಿ ಸ್ಥಳಕ್ಕೆ ತೆರಳಿ ಸಮಸ್ಯೆ ಪರಿಹಾರ ಮಾಡುವಂತೆ ಹೇಳಿದ್ದೆ, ಅಲ್ಲಿಗೆ ಹೋಗಿ ನೋಡುವಾಗ ಪರವಾನಿಗೆ ಸಿಕ್ಕಿದೆ ಎಂದು ಹೇಳಿದ್ರು. ಹೇಗೆ ಸಿಕ್ಕಿತೆಂದು ನನಗೂ ಗೊತ್ತಿಲ್ಲ ಎಂದರು. ನಾನು ಅಧ್ಯಕ್ಷನಾಗಿ ಕಳೆದ ಎರಡೂವರೆ ವರ್ಷದಿಂದ ಗ್ರಾಮದಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಾಣ ಮಾಡಲು ಮತ್ತು ಗ್ರಾಮದ ಅಭಿವೃದ್ಧಿಗಾಗಿ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ರಮೇಶ್ ರೈ ಸಾಂತ್ಯ ಹೇಳಿದರು.
ರಾಮ ಮೇನಾಲ ಮಾತನಾಡಿ ಅರ್ಜಿ ಬಗ್ಗೆಯೇ ಸಂಶಯವಿರುವಾಗ ಇದನ್ನು ಜಿ.ಪಂ ಸಿಇಓ ಅವರಿಗೆ ಬರೆದು ತನಿಖೆ ಮಾಡಿಸಬೇಕು. ಮುಂದಕ್ಕೆ ಅರ್ಜಿಯಲ್ಲಿ ತಿದ್ದುಪಡಿಯೂ ಆಗಬಾರದು ಎಂದು ಹೇಳಿದರು. ಪ್ರದೀಪ್ ಹಾಗೂ ಚಂದ್ರಹಾಸ ಹೇಳಿದಂತೆ ಹಿಂದಿನದ್ದೂ ಸಂಶಯಗಳಿದ್ದಲ್ಲಿ ತನಿಖೆ ಮಾಡಿಸುವ ಎಂದು ಅವರು ಹೇಳಿದರು.
ಪಿಡಿಓ ಸಂದೇಶ್ ಮಾತನಾಡಿ ಇಂದು ಚರ್ಚೆಯಾದ ವಿಚಾರದಂತೆ ಇತರ ಅರ್ಜಿಗಳಿಗೂ ಸದಸ್ಯರು ಇಂಟ್ರೆಸ್ಟ್ ಕೊಟ್ಟಿದ್ರೆ ಅಭಿವೃದ್ಧಿ ಆಗ್ತಿತ್ತು. ನಾನು ಕಾನೂನು ಪ್ರಕಾರವೇ ಕೆಲಸ ಮಾಡುತ್ತಿದ್ದೇನೆ, ಜನರ ಹಿತದೃಷ್ಟಿಯಿಂದ ಕೆಲವು ಅರ್ಜಿಗಳನ್ನು ಕಾನೂನನ್ನು ಮೀರದೇ ಸರಳೀಕರಣಗೊಳಿಸಿ ಕೊಟ್ಟಿರಬಹುದು ಎಂದು ಹೇಳಿದರು. ಸದಸ್ಯರು ಕೂಡಾ ಇಂತಹ ಅರ್ಜಿಗಳನ್ನು ಹಿಂದೆ ತೆಗೆದುಕೊಂಡು ಬಂದಿಲ್ವಾ? ಮಾಡಿಸಿಕೊಂಡು ಹೋಗಿಲ್ವಾ? ಎಂದು ಪಿಡಿಓ ಕೇಳಿದರು.
ದಾಖಲೆಗಳು ಕ್ಲಿಯರ್ ಇದ್ದದ್ದನ್ನು ನಾನು ಕೊಟ್ಟಿದ್ದೇನೆ. ನನಗೆ ಈ ಪಂಚಾಯತಲ್ಲಿ ಇರಲು ಮನಸ್ಸಿಲ್ಲ, ನೀವು ಬೇಕಾದ್ರೆ ಸಿಇಓ ಅವರಿಗೆ ದೂರು ನೀಡಿ, ಲೋಕಾಯುಕ್ತಕ್ಕೂ ಹೋಗಿ, ನಾನು ಅಲ್ಲಿ ಉತ್ತರ ಕೊಡುತ್ತೇನೆ ಎಂದು ಪಿಡಿಓ ಸಂದೇಶ್ ಹೇಳಿದರು.
ಕಾಂಗ್ರೆಸ್ ಮುಖಂಡ ಹೇಮನಾಥ ಶೆಟ್ಟಿಯವರ ಹೆಸರು ಸಭೆಯಲ್ಲಿ ಪ್ರಸ್ತಾಪಗೊಂಡು ತೀವ್ರ ಚರ್ಚೆಗೆ ಕಾರಣವಾಯಿತು. ಪಿಡಿಓ ಅವರಿಗೆ ಕರೆ ಮಾಡಲು ಹೇಮನಾಥ ಶೆಟ್ಟಿ ಯಾರು? ಅವರೇನು ಪಂಚಾಯತ್‌ನ ಭಾಗವಾ? ಅವರಿಗೇನು ಅಧಿಕಾರವಿದೆ ಎಂದು ಸದಸ್ಯ ಚಂದ್ರಹಾಸ ಆಕ್ರೋಶ ವ್ಯಕ್ತಪಡಿಸಿದರು. ರಾಮ ಮೇನಾಲ ಮಾತನಾಡಿ ಹಿಂದಿನ ಸರಕಾರ ಇರುವಾಗ ಪಿಡಿಓ ಅವರಿಗೆ ಒತ್ತಡ ಬಂದಿತ್ತು, ಆಗ ಯಾಕೆ ಅದು ಹೊರಬರಲಿಲ್ಲ ಎಂದು ಕೇಳಿದರು. ಹೇಮನಾಥ ಶೆಟ್ಟಿ ನಮ್ಮ ಪಕ್ಷದ ನಾಯಕರು, ನಮ್ಮ ಪಕ್ಷ ಈಗ ಅಧಿಕಾರದಲ್ಲಿದೆ, ವೈನ್ ಶಾಪ್ ವಿಚಾರದಲ್ಲಿ ಕಾರ್ಯಕರ್ತರ ಒತ್ತಡ ಅವರಿಗೂ ಹೋಗಿರಬಹುದು, ಹಾಗಿರುವಾಗ ಅವರು ಮಾತನಾಡಿದರಲ್ಲಿ ತಪ್ಪೇನು ಎಂದು ರಾಮ ಮೇನಾಲ ಕೇಳಿದರು. ಧ್ವನಿಗೂಡಿಸಿದ ಇಬ್ರಾಹಿಂ ಕೆ ಮಾತನಾಡಿ ಹೇಮನಾಥ ಶೆಟ್ಟಿ ಮಾತನಾಡಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು. ಉಪಾಧ್ಯಕ್ಷೆ ಫೌಝಿಯಾ ಮಾತನಾಡಿ ಹೇಮನಾಥ ಶೆಟ್ಟಿ ಸದ್ರಿ ವಿಚಾರದ ಬಗ್ಗೆ ಮಾತನಾಡಿರಬಹುದು, ಅದರಲ್ಲಿ ತಪ್ಪೇನು, ಅವರೇನು ಪಿಡಿಓ ಅವರಿಗೆ ಬೆದರಿಕೆ ಹಾಕಿದ್ದಾರೆಯೇ ಎಂದು ಕೇಳಿದರು. ಹೇಮನಾಥ ಶೆಟ್ಟಿ ವಿಚಾರದಲ್ಲಿ ಕೆಲ ಸಮಯ ತೀವ್ರ ಚರ್ಚೆ ನಡೆಯಿತು.
ಕೊನೆಗೆ ವೈನ್‌ಶಾಪ್ ಕಟ್ಟಡ ಪರವಾನಿಗೆ ವಿಚಾರದಲ್ಲಿ ಬಂದ ಅರ್ಜಿಯಿಂದ ಹಿಡಿದು ಪರವಾನಿಗೆ ನೀಡಿದವರೆಗಿನ ವಿಚಾರಗಳನ್ನು ತನಿಖೆಗೊಳಪಡಿಸಲು ಆಗ್ರಹಿಸಿ ಜಿ.ಪಂ ಸಿಇಓ ಅವರಿಗೆ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಿಗೂ ಬರೆದುಕೊಳ್ಳುವುದೆಂದು ನಿರ್ಣಯಿಸಲಾಯಿತು. ನಂತರ ಸಭೆಯಲ್ಲಿ ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಸಭೆಯಲ್ಲಿ ಸದಸ್ಯರಾದ ಕುಸುಮ, ಸುಮಯ್ಯ, ಪ್ರಫುಲ್ಲ ರೈ, ಕುಮಾರನಾಥ, ವತ್ಸಲಾ, ವೆಂಕಪ್ಪ ನಾಯ್ಕ, ಶಶಿಕಲಾ, ಲಲಿತಾ ಸುಧಾಕರ, ಜಾಫರ್ ಕೆ, ಲಲಿತಾ ಸಾಂತ್ಯ, ಇಂದಿರಾ, ಪೂರ್ಣೇಶ್ವರಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಶೀನಪ್ಪ ನಾಯ್ಕ, ಚಂದ್ರಶೇಖರ ಸಹಕರಿಸಿದರು.