ರೋಟರಿ ಪುತ್ತೂರು ಎಲೈಟ್ ಪದ ಪ್ರದಾನ

0

ದೇಶ ಸುಧಾರಣೆಯಲ್ಲಿ ರೋಟರಿಯಿಂದ ಜಾಗತಿಕ ಮಟ್ಟದಲ್ಲಿ ಕ್ರಾಂತಿ-ಕೃಷ್ಣ ಶೆಟ್ಟಿ

ಪುತ್ತೂರು: 118 ವರ್ಷಗಳ ಇತಿಹಾಸವಿರುವ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ರೊಟೇರಿಯನ್ಸ್ ಗಳ ಹೃದಯವಂತಿಕೆಯ ಕಾರ್ಯಕ್ರಮಗಳ ಮೂಲಕ ಬಹಳಷ್ಟನ್ನು ಸಾಧಿಸಿ ತೋರಿಸಿದೆ ಮಾತ್ರವಲ್ಲ ಮೆಚ್ಚುಗೆಯನ್ನು ಗಳಿಸಿದೆ. ಒಂದರ್ಥದಲ್ಲಿ ಸಮಾಜ ಸೇವೆಯ ಮೂಲಕ ದೇಶ ಸುಧಾರಣೆಯಲ್ಲಿ ರೋಟರಿಯು ಜಾಗತಿಕ ಮಟ್ಟದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಎಂದು ಪಿಡಿಜಿ ಕೃಷ್ಣ ಶೆಟ್ಟಿಯವರು ಹೇಳಿದರು.

ಅಂತರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಎಲೈಟ್ ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭವು ಜೂ.30 ರಂದು ವಿವೇಕಾನಂದ ಕಾಲೇಜು ರಸ್ತೆಯ ಅಜೇಯ ನಗರದ ಓಝೋನ್ ಹೌಸ್‌ನಲ್ಲಿ ಜರಗಿದ್ದು, ಇದರ ನೂತನ ಪದಾಧಿಕಾರಿಗಳ ಪದ ಪ್ರದಾನ ನೆರವೇರಿಸಿ ಅವರು ಮಾತನಾಡಿದರು. ರೋಟರಿ ಸಂಸ್ಥೆಯು ಸ್ನೇಹ, ಒಡನಾಟ, ಫೆಲೋಶಿಪ್ ಎಂಬ ಪಿಲ್ಲರ್ ಗಳನ್ನು ಹೊಂದಿದ್ದು, ಇದು ರೊಟೇರಿಯನ್ಸ್ ಗಳ ಬಲವರ್ಧನೆಗೆ ಹಾಗೂ ಮಿತೃತ್ವಕ್ಕೆ ಸಹಕಾರಿಯಾಗಿದೆ. ನಮ್ಮಲ್ಲಿ ದೂರದೃಷ್ಟಿತ್ವ ಹಾಗೂ ಪರಸ್ಪರ ವಿಶ್ವಾಸ ಇಲ್ಲದಿದ್ದರೆ ನಾಯಕತ್ವ ಯಶಸ್ವಿಯಾಗದು. ನಮ್ಮಲ್ಲಿನ ಬುದ್ಧಿಮತ್ತೆಯನ್ನು ನಾವು ಆವಾಗವಾಗ ಆಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈಯವರು ಕ್ಲಬ್ ಬುಲೆಟಿನ್ `ಇಲೈಟ್ ನ್ಯೂಸ್’ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ಕ್ಲಬ್ ಹಿಂದಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದು ತಮ್ಮ ಕಾರ್ಯ ನಿರ್ವಹಣೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಜೊತೆಗೆ ನೂತನವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಯಶಸ್ಸನ್ನು ಹಾರೈಸುತ್ತೇನೆ. ಕ್ಲಬ್ ಮುಂದಿನ ಜಿಲ್ಲಾ ಯೋಜನೆಗಳಾದ ಅಂಗನವಾಡಿಗಳ ಅಭಿವೃದ್ಧಿ ಹಾಗೂ ಮಳೆ ನೀರು ಕೊಯ್ಲು ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದರು.

ರೋಟರಿ ವಲಯ ಸೇನಾನಿ ಸುಜಿತ್ ಪಿ.ಕೆ ಮಾತನಾಡಿ, ಹೋದ ಬಸ್ಸು ಹೋಗಲಿ, ಮುಂದೆ ಬರುವ ಬಸ್ಸನ್ನು ಹತ್ತೋಣ, ಮುಂದೆ ಸಾಗೋಣ ಎಂಬAತೆ ಚಾಲಕನ ಸೀಟಿನಲ್ಲಿ ಇದೀಗ ತಾನೇ ಕುಳಿತುಕೊಂಡ ನೂತನ ಅಧ್ಯಕ್ಷರು ತನ್ನ ಸದಸ್ಯರನ್ನು ಒಟ್ಟಾಗಿ ಬಸ್ಸಿನಲ್ಲಿ ಕುಳ್ಳಿರಿಸಿಕೊಂಡು ಜೊತೆಯಾಗಿ ಸಾಗುವ ಮೂಲಕ ಕ್ಲಬ್ ಯಶಸ್ವಿಯತ್ತ ಮುಂದಿನ ದಿನಗಳಲ್ಲಿ ಸಾಗಲಿ ಎಂದರು.

ರೋಟರಿ ಕ್ಲಬ್ ಪುತ್ತೂರು ಎಲೈಟ್ ನಿರ್ಗಮನ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸೇವೆ ಎಂಬುದು ಶಾಶ್ವತ, ಸಿಗುವಂತಹ ತೃಪ್ತಿ ಮಾತ್ರ ಅದು ನಿರಂತರ. ರೋಟರಿ ಧ್ಯೇಯ ಕೂಡ ಅದೇ. ರೋಟರಿ ಮೂಲಕ ಮತ್ತೊಬ್ಬರ ಬದುಕನ್ನು ಬದಲಾಯಿಸಿದ್ದೇವೆ ಎಂಬ ಆತ್ಮತೃಪ್ತಿ ಸಿಗುವುದು ಅದುವೇ ಸೇವೆ. ಕಳೆದ ಒಂದು ವರ್ಷ ಕ್ಲಬ್‌ನ ಸದಸ್ಯರ ಸಹಕಾರದಿಂದ ರೋಟರಿ ಜಿಲ್ಲಾ ಯೋಜನೆಗಳನ್ನು ಉತ್ತಮವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ರೋಟರಿಯ ಪರಿಕಲ್ಪನೆಯಡಿಯಲ್ಲಿ ಪರಸ್ಪರ ಪ್ರೀತಿ, ಅನ್ಯೋನ್ಯತೆ, ಹೊಂದಿಕೊಳ್ಳುವಿಕೆಯಿಂದ ಯಶಸ್ವಿಯಾಗಿದ್ದೇವೆ ಎಂದು ಹೇಳಿ ತನ್ನ ಅಧಿಕಾರವಾಧಿಯಲ್ಲಿ ಸಹಕರಿಸಿದವರಿಗೆ ಶಾಲು ಹೊದಿಸಿ, ಕಿರು ಕಾಣಿಕೆ ನೀಡಿ ಅಭಿನಂದಿಸಿದರು.

ನೂತನ ಸದಸ್ಯರ ಸೇರ್ಪಡೆ:
ಕ್ಲಬ್ ಸರ್ವಿಸ್‌ನಡಿಯಲ್ಲಿ ಎಲುಬು ತಜ್ಞ ಡಾ.ಸಚಿನ್ ಶಂಕರ್ ಹಾರಕರೆ, ಮಕ್ಕಳ ದಂತ ತಜ್ಞ ಡಾ.ಕೀರ್ತನ್ ಕಜೆ, ಕಲಾವಿದ ಬಿ.ಎಸ್ ಚೇತನ್ ಕುಮಾರ್, ಈಜು ತರಬೇತುದಾರ ಹಾಗೂ ಮೆಗಾ ಡಿಜಿಟಲ್ ಪ್ರಿಂಟಿಂಗ್‌ನ ಸ್ವೀಕೃತ್ ಆನಂದ್, ಉದ್ಯಮಿ ಪೇಪರ್ ಪ್ಲೇಟ್ ಇಂಡಸ್ಟ್ರೀಯ ಇಸ್ಮಾಯಿಲ್ ಅಬ್ದುಲ್ ರಿಯಾಜ್ ಅಡೆಕಲ್, ವಿವೇಕಾನಂದ ಅಜೇಯನಗರದ ಓಝೋನ್ ಹೌಸಿನ ಮಾಲಕ ಶಮ್ಸುದ್ಧೀನ್ ಅಹಮದ್, ಉದ್ಯಮಿ ಅಬ್ದುಲ್ ಅಝೀಝ್ ಪುತ್ತೂರು ರವರನ್ನು ಪಿಡಿಜಿ ಕೃಷ್ಣ ಶೆಟ್ಟಿರವರು ರೋಟರಿ ಪಿನ್ ತೊಡಿಸಿ ಕ್ಲಬ್‌ಗೆ ಬರಮಾಡಿಕೊಂಡರು. ಕ್ಲಬ್ ಸರ್ವಿಸ್ ನಿರ್ದೇಶಕ ರಾಮ ಕೆ.ರವರು ನೂತನ ಸದಸ್ಯರ ಪರಿಚಯ ಮಾಡಿದರು.

ವೊಕೇಶನಲ್ ಸರ್ವಿಸ್:
ವೊಕೇಶನಲ್ ಸರ್ವಿಸ್‌ನಡಿಯಲ್ಲಿ ಸಣ್ಣ ಪ್ರಾಯದಲ್ಲಿ ಹೆತ್ತವರನ್ನು ಕಳೆದುಕೊಂಡರೂ ಧೃತಿಗೆಡದೆ ತನ್ನ ಅಣ್ಣನೊಂದಿಗೆ ಸ್ಟೀಲ್ ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಸ್ತುತ ಬನ್ನೂರು ಆನೆಮಜಲಿನಲ್ಲಿ ಸ್ಟೀಲ್ ಫ್ಯಾಕ್ಟರಿಯನ್ನು ಹೊಂದುತ್ತಾ, ಕಡಬದಲ್ಲಿ ಮರೀನಾ ಸ್ಟೀಲ್ಸ್ ಹೆಸರಿನಲ್ಲಿ ಉದ್ಯಮವನ್ನು ಮುಂದುವರೆಸಿ, ಪಡೀಲಿನಲ್ಲಿ ಇತ್ತೀಚೆಗೆ ಜೋಹಾಸ್ ಸ್ಟೀಲ್ ಇಂಡಸ್ಟ್ರೀಯನ್ನು ತೆರೆದು ಸುಮಾರು 20ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡುತ್ತಿರುವ ಬನ್ನೂರು ಸಂತ ಅಂತೋನಿ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷ ಹಾಗೂ ರೋಟರಿ ಎಲೈಟ್ ಸದಸ್ಯರೂ ಆಗಿರುವ ತೋಮಸ್ ಫೆರ್ನಾಂಡೀಸ್‌ರವರನ್ನು ಈ ಸಂದರ್ಭದಲ್ಲಿ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತೋಮಸ್ ಫೆರ್ನಾಂಡೀಸ್‌ರವರ ಪತ್ನಿ, ಮಕ್ಕಳು ಉಪಸ್ಥಿತರಿದ್ದರು. ವೊಕೇಶನಲ್ ಸರ್ವಿಸ್ ನಿರ್ದೇಶಕಿ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರ್ವಹಿಸಿದರು.

ಇಂಟರ್‌ನ್ಯಾಷನಲ್ ಸರ್ವಿಸ್:
ಇಂಟರ್‌ನ್ಯಾಷನಲ್ ಸರ್ವಿಸ್ ವತಿಯಿಂದ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡಿ ಪಿ.ಎಚ್.ಎಫ್ ಪದವಿಗೆ ಭಾಜನರಾದ ಕಾರ್ಯಾಪ್ಪ ವಿ.ಪಿ, ಕ್ಲಬ್ ಸರ್ವಿಸ್ ನಿರ್ದೇಶಕ ರಾಮ ಕೆ, ಕೋಶಾಧಿಕಾರಿ ಸಿಲ್ವಿಯಾ ಡಿ’ಸೋಜ, ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್ರವರಿಗೆ ಪಿಡಿಜಿ ಕೃಷ್ಣ ಶೆಟ್ಟಿರವರು ಪ್ರಮಾಣಪತ್ರ ನೀಡಿ ಗೌರವಿಸಿದರು. ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಮಾಧವ ಗೌಡರವರು ಕಾರ್ಯಕ್ರಮ ನಿರ್ವಹಿಸಿದರು.

ಯೂತ್ ಸರ್ವಿಸ್:
ಯೂತ್ ಸರ್ವಿಸ್ ವತಿಯಿಂದ ಇಂರ‍್ಯಾಕ್ಟ್ ಕ್ಲಬ್ ಸುದಾನದ ಅಡ್ವೈಸರ್ ಲವೀನಾ ಹನ್ಸ್, ಅಧ್ಯಕ್ಷೆ ಖುಶಿತಾ ನಾಯರ್, ಕಾರ್ಯದರ್ಶಿ ನಿಕೋಲಸ್ ಮಥಾಯಸ್, ರೋರ‍್ಯಾಕ್ಟ್ ಕ್ಲಬ್ ಬೆಟ್ಟಂಪಾಡಿಯ ಅಡ್ವೈಸರ್ ರಾಮ ಕೆ, ರೋರ‍್ಯಾಕ್ಟ್ ಸವಣೂರು ಪ್ರಥಮ ದರ್ಜೆ ಕಾಲೇಜು ಕ್ಲಬ್‌ನ ಅಡ್ವೈಸರ್ ಅಶ್ವಿನ್ ಎಲ್.ಶೆಟ್ಟಿ, ಕಾಮನ್‌ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರತಿನಿಧಿಯಾಗಿ ಸೆಲೆಕ್ಟರ್ಸ್ ಟ್ರಯಲ್ಸ್ನಲ್ಲಿರುವ ಸ್ವೀಕೃತ್ ಆನಂದ್, ಕಡು ಬಡತನದಲ್ಲಿದ್ದು ರಂಗಕಲೆ, ಯಕ್ಷಗಾನ ಪ್ರವೀಣರಾಗಿರುವ ರಾಕೇಶ್ ಆಚಾರ್ಯರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ರೋನಿತ್ ಕಾರ್ಯಾಪ್ಪ, ಜೀತನ್ ಕುಟಿನ್ಹಾರವರನ್ನು ಅಭಿನಂದಿಸಲಾಯಿತು.

ಸನ್ಮಾನ:
ಪದ ಪ್ರದಾನ ಸಮಾರಂಭದ ಪದ ಪ್ರದಾನ ಅಧಿಕಾರಿಯಾಗಿ ಆಗಮಿಸಿದ ಪಿಡಿಜಿ ಕೃಷ್ಣ ಶೆಟ್ಟಿಯವರನ್ನು ರೋಟರಿ ಎಲೈಟ್ ವತಿಯಿಂದ ಸನ್ಮಾನಿಸಲಾಯಿತು. 2022-23ನೇ ಸಾಲಿನಲ್ಲಿ ಉತ್ತಮ ಸಮಾಜಮುಖಿ ಕಾರ್ಯಕ್ರಮಗಳನ್ನು ನೀಡಿದ ನಿರ್ಗಮನ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹಾಗೂ ನಿರ್ಗಮನ ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ ಮತ್ತು ರೋಟರಿ ವಲಯ ಸೇನಾನಿಯಾಗಿ ಕರ್ತವ್ಯ ನಿರ್ವಹಿಸಿರುವ ಸೆನೋರಿಟಾ ಆನಂದ್‌ರವರನ್ನು ಕೂಡ ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

ಮಗು-ನಗು ಯೋಜನೆ/ರಂಗಶಾಲೆಗೆ ಚಾಲನೆ:
ರೋಟರಿ ಪುತ್ತೂರು ಎಲೈಟ್‌ನ ಕಮ್ಯೂನಿಟಿ ಸರ್ವಿಸ್ ವತಿಯಿಂದ ರೋಟರಿ ಪುತ್ತೂರು ಸಿಟಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಪ್ರತೀ ಶುಕ್ರವಾರ ಅಂಗನವಾಡಿ ಮಕ್ಕಳ ದಂತ ಚಿಕಿತ್ಸಾ ಶಿಬಿರ ನಡೆಸುವ ಮಗು-ನಗು ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ರೋಟರಿ ಪುತ್ತೂರು ಎಲೈಟ್ ಸದಸ್ಯ, ಮಕ್ಕಳ ದಂತ ತಜ್ಞ ಡಾ.ಕೀರ್ತನ್ ಕಜೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೇಯಸ್ವಿ, ರೋಟರಿ ಪುತ್ತೂರು ಸಿಟಿ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವೀಸ್ ಉಪಸ್ಥಿತಿಯಿದ್ದರು. ಅದರಂತೆ ರೋಟರಿ ಪುತ್ತೂರು ಎಲೈಟ್ ಹಾಗೂ ಸಂಸಾರ ಜೋಡು ಮಾರ್ಗದ ಸಹಯೋಗದಲ್ಲಿ ಪುತ್ತೂರಿನ ಸುದಾನ ಎಡ್ವರ್ಡ್ ಹಾಲ್‌ನಲ್ಲಿ ಆರಂಭಗೊಳ್ಳಲಿರುವ ಶನಿವಾರದ ರಂಗಶಾಲೆಗೆ ಅತಿಥಿಗಳು ಚೆಂಡೆ, ಜಂಬೆ ಹಾಗೂ ತಮ್ಕಿ ಬಾರಿಸುವ ಮೂಲಕ ಚಾಲನೆ ನೀಡಿದರು. ರಂಗಶಿಕ್ಷಕ ಕಲಾವಿದ ರಾಕೇಶ್ ಆಚಾರ್ಯ, ಸಂಯೋಜಕ ಬಾಲು ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು. ನಿದೇಶಕ ಮೌನೇಶ್ ವಿಶ್ವಕರ್ಮರವರು ಕಾರ್ಯಕ್ರಮ ನಿರೂಪಿಸಿದರು.

ಕಂಪ್ಯೂಟರ್ ಕೊಡುಗೆ/ಸ್ಕಾಲರ್‌ಶಿಪ್:
ಕ್ಲಬ್‌ನ ಟೀಚ್ ಕಾರ್ಯಕ್ರಮದಡಿಯಲ್ಲಿ ಮುಕ್ರಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಎರಡು ಕಂಪ್ಯೂಟರ್‌ಗಳನ್ನು ನೀಡಲಾಗಿದ್ದು, ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಮಸ್ಕರೇನ್ಹಸ್‌ರವರಿಗೆ ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಲಾಯಿತು. ಅಲ್ಲದೆ ವಿದ್ಯಾರ್ಥಿ ಆಶ್ಲೇಶ್ ಪ್ರಭುರವರಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತೋನ್ಸೆ ಅನಂತ್ ಪೈ ಸ್ಕಾಲರ್‌ಶಿಪ್ ರೂ.33 ಸಾವಿರವನ್ನು ಹಸ್ತಾಂತರಿಸಲಾಯಿತು. ಟೀಚ್ ಚೇರ್‌ಮ್ಯಾನ್ ಗೋಪಾಲಕೃಷ್ಣ ಎಂ ಕಾರ್ಯಕ್ರಮ ನಿರ್ವಹಿಸಿದರು.
ಶಿಫಾಲಿಕಾ ಪ್ರಾರ್ಥಿಸಿದರು. ರೋಟರಿ ಎಲೈಟ್ ನಿರ್ಗಮನ ಅಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕಾರ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ಆಸ್ಕರ್ ಆನಂದ್ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಸಿಲ್ವಿಯಾ ಡಿ’ಸೋಜ ವರದಿ ಮಂಡಿಸಿದರು. ಲವೀನಾ ಹನ್ಸ್ ಹಾಗೂ ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.

ಪದಾಧಿಕಾರಿಗಳ ಪದ ಪ್ರದಾನ…
ನೂತನ ಅಧ್ಯಕ್ಷ ಅಬ್ದುಲ್ ರಝಾಕ್ ಕಬಕಕಾರ್ಸ್, ಕಾರ್ಯದರ್ಶಿ ಆಸ್ಕರ್ ಆನಂದ್, ಕೋಶಾಧಿಕಾರಿ ಸಿಲ್ವಿಯಾ ಡಿ’ಸೋಜ, ನಿಯೋಜಿತ ಅಧ್ಯಕ್ಷ ಅಶ್ವಿನ್ ಎಲ್.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಹಾಗೂ ಬುಲೆಟಿನ್ ಎಡಿಟರ್ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಉಪಾಧ್ಯಕ್ಷ ಕಾರ್ಯಪ್ಪ ವಿ.ಪಿ, ಸಾರ್ಜಂಟ್ ಎಟ್ ಆಮ್ಸ್9 ಜೋನ್ಸನ್ ಸಿ.ಎಂ, ಕ್ಲಬ್ ಸರ್ವಿಸ್ ನಿರ್ದೇಶಕ ರಾಮ ಕೆ, ವೊಕೇಶನಲ್ ಸರ್ವಿಸ್ ನಿರ್ದೇಶಕಿ ಹರಿಣಿ ಪುತ್ತೂರಾಯ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಹಾಗೂ ಜೊತೆ ಕಾರ್ಯದರ್ಶಿ ಮೌನೇಶ್ ವಿಶ್ವಕರ್ಮ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕ ಮಾಧವ ಗೌಡ, ಯೂತ್ ಸರ್ವಿಸ್ ನಿರ್ದೇಶಕ ಕೆ.ಎಂ ಸಿಯಾಕ್, ಚೇರ್‌ಮ್ಯಾನ್‌ಗಳಾದ ಸುಧೀರ್ ಬಿ(ಮೆಂಬರ್‌ಶಿಪ್ ಚೇರ್‌ಮ್ಯಾನ್), ಸಿಲ್ವೆಸ್ತರ್ ಡಿ’ಸೋಜ(ಟಿ.ಆರ್.ಎಫ್), ಈಶ್ವರ್ ಬೆಡೇಕರ್(ಪಬ್ಲಿಕ್ ಇಮೇಜ್), ಗೋಪಾಲಕೃಷ್ಣ ಎಂ,(ಟೀಚ್), ಪದ್ಮಾವತಿ(ವಿನ್ಸ್), ಡಾ.ಸಚಿನ್ ಶಂಕರ್(ಪಲ್ಸ್ ಪೋಲಿಯೋ), ಮೊಹಮದ್ ಶಾಕೀರ್(ಜಿಲ್ಲಾ ಪ್ರಾಜೆಕ್ಟ್), ರಂಜಿತ್ ಮಥಾಯಿಸ್(ಕ್ಲಬ್ ಟ್ರೈನರ್), ಮನ್ಸೂರ್ ಬಿ(ಐಟಿ/ವೆಬ್ ಸೈಟ್), ನವೀನ್ ಹನ್ಸ್(ಸಿ.ಎಲ್.ಸಿ.ಸಿ), ಬಾಲು ನಾಯ್ಕ್(ಕಲ್ಚರಲ್ ಇವೆಂಟ್ಸ್), ಸುಶಾಂತ್ ಹಾರ್ವಿನ್(ಕ್ರೀಡೆ), ಜೋಯೆಲ್ ಕುಟಿನ್ಹಾ(ಫೆಲೋಶಿಪ್)ರವರಿಗೆ ಪಿಡಿಜಿ ಕೃಷ್ಣ ಶೆಟ್ಟಿರವರು ಪದ ಪ್ರದಾನ ಮಾಡಿದರು.

ಕ್ಲಬ್ ಯಶಸ್ವಿಗೆ ಸಹಕರಿಸಿ..
ರೋಟರಿ ಆಂದೋಲನದಲ್ಲಿ ತಾನು ತನ್ನ 18ನೇ ವಯಸ್ಸಿನಲ್ಲಿಯೇ ರೋರ‍್ಯಾಕ್ಟ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ. ಜಗತ್ತಿನಲ್ಲಿ ಭರವಸೆಯನ್ನು ಸೃಷ್ಟಿಸಿ ಎನ್ನುವ ಈ ವರ್ಷದ ಅಂತರಾಷ್ಟ್ರೀಯ ರೋಟರಿ ಧ್ಯೇಯವಾಕ್ಯವನ್ನು ಜಿಲ್ಲಾ ಪ್ರಾಜೆಕ್ಟ್ಗಳಾದ ಅಂಗನವಾಡಿಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು ಇವುಗಳನ್ನು ರೋಟರಿಯ ಎಲ್ಲಾ ಬಾಂಧವರು ಬಾಂಧವ್ಯ ಬೆಳೆಸಿಕೊಂಡು ಅಭಿವೃದ್ಧಿಪಡಿಸಿ ಧ್ಯೇಯವಾಕ್ಯವನ್ನು ಯಶಸ್ವಿಗೊಳಿಸೋಣ. ನನ್ನನ್ನು ಈ ವರ್ಷ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಕ್ಕೆ ಕ್ಲಬ್ ಸದಸ್ಯರಿಗೆ ಕೃತಜ್ಞತೆಗಳೊಂದಿಗೆ ವರ್ಷವಿಡೀ ತಮ್ಮ ಸಹಕಾರವನ್ನು ಆಶಿಸುತ್ತೇನೆ.
-ಅಬ್ದುಲ್ ರಝಾಕ್ ಕಬಕಕಾರ್ಸ್, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಎಲೈಟ್

LEAVE A REPLY

Please enter your comment!
Please enter your name here