ನೆಲ್ಯಾಡಿ: ಜಮೀನಿನ 9/11 ಖಾತೆ ಬದಲಾವಣೆಗಾಗಿ ಕಚೇರಿಯಲ್ಲಿಯೇ 20 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರಿಗೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಸೇರಿದ್ದ ಕೌಕ್ರಾಡಿ ಗ್ರಾ.ಪಂ.ಪಿಡಿಒ ಮಹೇಶ್ ಜಿ.ಎನ್.ಅವರಿಗೆ ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪಿಡಿಒ ಮಹೇಶ್ ಜಿ.ಎನ್.ಅವರು ಕೊಕ್ಕಡ ನಿವಾಸಿ ವಸಂತ ರಾವ್ ಎಂಬವರಿಂದ ಜಮೀನಿನ 9/11 ಖಾತೆ ಬದಲಾವಣೆಗಾಗಿ ಜೂ.22ರಂದು ಬೆಳಿಗ್ಗೆ ಗ್ರಾ.ಪಂ.ಕಚೇರಿಯಲ್ಲಿ 20 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಹಣ ಸಮೇತ ಪಿಡಿಒ ಮಹೇಶ್ ಜಿ.ಎನ್.ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಸಂಜೆ ತನಕವೂ ಗ್ರಾ.ಪಂ.ಕಚೇರಿಯಲ್ಲಿ ಮಹಜರು ನಡೆಸಿದ್ದ ಲೋಕಾಯುಕ್ತ ಪೊಲೀಸರು ಮಹೇಶ್ ಜಿ.ಎನ್.ಅವರನ್ನು ದಸ್ತಗಿರಿ ಮಾಡಿ ಅದೇ ದಿನ ರಾತ್ರಿ ನ್ಯಾಯಾಽಶರ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಮಹೇಶ್ ಜಿ.ಎನ್.ಅವರಿಗೆ ಜೂ.30ರಂದು ಮಂಗಳೂರು ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಡಿಒ ಮಹೇಶ್ ಜಿ.ಎನ್.ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.