ಮುಕ್ವೆ ಶಾಲೆಯ ಸಹಶಿಕ್ಷಕಿ ವೇದಾವತಿರವರಿಗೆ ಬೀಳ್ಕೊಡುಗೆ

0

ಪುತ್ತೂರು: ಒಬ್ಬ ವ್ಯಕ್ತಿಗೆ ವೃತ್ತಿ, ಪ್ರವೃತ್ತಿಯ ಜೊತೆಗೆ ನಿವೃತ್ತಿ ಅನಿವಾರ್ಯ. ವೃತ್ತಿ, ಪ್ರವೃತ್ತಿಯ ಸಾಧನೆಯನ್ನು ಗುರುತಿಸುವುದು ಆ ವ್ಯಕ್ತಿ ನಿವೃತ್ತಿ ಹೊಂದಿದ ದಿನದಂದು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಮುಕ್ವೆ ಶಾಲೆಯಲ್ಲಿ ನಡೆದ, ನಿವೃತ್ತಿ ಹೊಂದಿದ ಶಾಲೆಯ ಸಹಶಿಕ್ಷಕಿ ವೇದಾವತಿರವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಕ್ಷಕರು ಶಿಕ್ಷಕ ವೃತ್ತಿಯ ಜೊತೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಕೂಡ ತೊಡಗಿಕೊಳ್ಳಬೇಕು. ಇದನ್ನು ವೇದಾವತಿರವರು ಮಾಡಿದ್ದಾರೆ. ಅಲ್ಲದೆ ಇವರು ಆದರ್ಶ ಶಿಕ್ಷಕಿಯಾಗಿ, ಉತ್ತಮ ಸಂಘಟಕಿಯಾಗಿ, ಕ್ರೀಡಾ ಸಾಧಕರಾಗಿ ಸೇವೆ ಸಲ್ಲಿಸಿದವರು ಎಂದು ಹೇಳಿ ಅವರ ನಿವೃತ್ತಿ ಜೀವನ ಸುಖಮಯವಾಗಲಿ ಎಂದು ಶುಭಹಾರೈಸಿದರು.


ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಮಾತನಾಡಿ ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ವೇದಾವತಿರವರು ವೃತ್ತಿ ಜೀವನದಲ್ಲಿ ಮಾಡಿದ ಸಾಧನೆಗಳು ಹಾಗೂ ಶಾಲೆಯ ಅಭಿವೃದ್ಧಿಯ ಕೆಲಸಗಳು ಶಿಕ್ಷಕ ವೃತ್ತಿಯ ಹೆಜ್ಜೆಗುರುತುಗಳಾಗಿದೆ. ಶಿಕ್ಷಕರು ಮಾಡಿದ ಕೆಲಸಗಳು ಜನಮಾನಸದಲ್ಲಿ ಉಳಿಯಬೇಕು ಎಂದು ಹೇಳಿ ಶುಭಹಾರೈಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಮಾತನಾಡಿ ವೇದಾವತಿರವರು ನನ್ನ ಶಕ್ತಿಯಾಗಿ, ನನ್ನ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ಇವರು ಇನ್ನೊಬ್ಬರ ನೋವಿಗೆ ಸದಾ ದುಡಿಯುವವರಾಗಿದ್ದಾರೆ. ಇವರು ವಿದ್ಯಾರ್ಥಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡವರು. ಅಲ್ಲದೆ ಶಿಕ್ಷಕರ ಸಂಘಟನೆಯಲ್ಲಿ ದುಡಿದವರು ಕೂಡ ಆಗಿದ್ದಾರೆ ಎಂದು ಹೇಳಿ ಶುಭಹಾರೈಸಿದರು.

ಪುತ್ತೂರು ಶ್ರೀರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ವೇದಾವತಿರವರು ತನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆ ಕಂಡವರು. ನೇರ ನಡೆ ನುಡಿಯ ವ್ಯಕ್ತಿ. ಮನಸ್ಸಲ್ಲಿ ಯಾವುದೇ ಕಲ್ಮಶವಿಲ್ಲದ ವ್ಯಕಿಯಾಗಿ ಎಲ್ಲರ ಪ್ರೀತಿ ಗಳಿಸಿದವರು ಎಂದು ಹೇಳಿ ಶುಭಹಾರೈಸಿದರು. ಕಡಬ ಠಾಣೆಯ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಹರೀಶ್ ಕುಮಾರ್ ಮಾತನಾಡಿ ವೇದಾವತಿರವರು ಉತ್ತಮ ಪ್ರತಿಭಾವಂತೆಯಾಗಿದ್ದಾರೆ. ಶಿಕ್ಷಕರು ಅವರ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಅವರ ವೃತ್ತಿಗೆ ಗೌರವ ಸಿಗುತ್ತದೆ. ಶಿಕ್ಷಕರಿಗೆ ಸಮಾಜದಲ್ಲಿ ಸಿಕ್ಕಷ್ಟು ಗೌರವ ಬೇರೆ ಯಾರಿಗೂ ಸಿಗುವುದಿಲ್ಲ ಎಂದರು.

ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಮಾತನಾಡಿ ವೇದಾವತಿರವರು ಚುರುಕಿನ ವ್ಯಕ್ತಿತ್ವದವರು. ವೃತ್ತಿಯಲ್ಲಿ, ಸಮಾಜದಲ್ಲಿ, ಉತ್ತಮ ಮನುಷ್ಯನಾಗಿ ಬಾಳಿದವರು. ಇವರು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮೂಲಕ ವಿದ್ಯಾರ್ಥಿಗಳನ್ನು ಬೆಳೆಸಿದ್ದಾರೆ. ಅಲ್ಲದೆ ಉತ್ತಮ ಕೊಡುಗೆ ನೀಡಿದ್ದಾರೆ. ಅವರ ವೃತ್ತಿ ಜೀವನ ಮರು ವೃತ್ತಿ ಜೀವನವಾಗಲಿ ಎಂದರು. ಇಂಜಿನಿಯರ್ ಪ್ರಸನ್ನ ಭಟ್ ಮಾತನಾಡಿ ನಿವೃತ್ತಿ ಹೊಂದಿದ ಶಿಕ್ಷಕಿ ವೇದಾವತಿರವರಿಗೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರು ಆರೋಗ್ಯ, ನೆಮ್ಮದಿ ಕರುಣಿಸಲಿ ಎಂದರು.


ನಲಿಕಲಿ ವರ್ಣಚಿತ್ತಾರ, ಸಭಾವೇದಿಕೆ ಉದ್ಘಾಟನೆ
: ಶಾಲೆಯ ಎರಡು ಕೊಠಡಿಯಲ್ಲಿ ಶಿಕ್ಷಕಿ ವೇದಾವತಿರವರು ಕೊಡುಗೆಯಾಗಿ ನಿರ್ಮಿಸಿದ ನಲಿಕಲಿ ವರ್ಣಚಿತ್ತಾರವನ್ನು ಬೀಳ್ಕೊಡುಗೆ ಸಮಾರಂಭದ ಮೊದಲು ಉದ್ಘಾಟಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ರವರು ರಿಬ್ಬನ್ ಕತ್ತರಿಸಿ ವರ್ಣಚಿತ್ತಾರದ ಕೊಠಡಿಯನ್ನು ಉದ್ಘಾಟಿಸಿದರು. ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಸಭಾವೇದಿಕೆಯನ್ನು ಬೀಳ್ಕೊಡುಗೆ ಸಮಾರಂಭದ ಮೊದಲು ನರಿಮೊಗರು ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಹಾಗೂ ಸದಸ್ಯ ಗಣೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು.


ದಾನಿಗಳಿಗೆ ಗೌರವ:
ಶಾಲೆಯಲ್ಲಿ ನೂತನವಾಗಿ ಸಭಾವೇದಿಕೆ ನಿರ್ಮಿಸಿಕೊಟ್ಟ ಇಂಜಿನಿಯರ್ ಪ್ರಸನ್ನ ಭಟ್, ವೇದಿಕೆಗೆ ಪರದೆ ಕೊಡುಗೆ ನೀಡಿದ ನಿವೃತ್ತ ಮುಖ್ಯಗುರು ಪುಷ್ಪಾ, ಆರ್ಥಿಕ ಸಹಕಾರ ನೀಡಿದ ನೋಣಯ್ಯ ಪೂಜಾರಿ, ಎಸ್‌ಡಿಎಂಸಿ ಸದಸ್ಯ ಹನೀಫ್, ಉಮಾಮಹೇಶ್ವರ ಭಜನಾ ಮಂಡಳಿಯ ರಘುರವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಗೆ ಸಹಕಾರ ನೀಡಿದ ಎಸ್‌ಡಿಎಂಸಿ ಸದಸ್ಯರಾದ ಮುಬಿನ್ ಸಾಹೇಬ್, ನಾಗವೇಣಿ, ಗೀತಾ ಶೆಟ್ಟಿ, ಅಬ್ದುಲ್ ಖಾದರ್, ಸೋಮಪ್ಪ ಗೌಡರವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು.


ವಿದ್ಯಾರ್ಥಿಗಳ ಪರವಾಗಿ ವಿದ್ಯಾರ್ಥಿ ನಾಯಕಿ ಮುಫಿದಾ ಹಾಗೂ ರಾಜ್ಯಮಟ್ಟದ ಕ್ರೀಡಾಪಟು ಆಯಿಷತ್ ಜಸ್ಸಿನಾರವರು ಅನಿಸಿಕೆ ವ್ಯಕ್ತಪಡಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ತಾಹಿರಾ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಶಿಕ್ಷಣ ಸಮನ್ವಯಾಧಿಕಾರಿ ನವೀನ್ ವೇಗಸ್, ವಲಯಾರಣ್ಯಾಧಿಕಾರಿ ವಿದ್ಯಾರಾಣಿ, ಅಕ್ಷರದಾಸೋಹ ನಿರ್ದೇಶಕ ವಿಷ್ಣುಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಶಿಕ್ಷಕಿ ವೇದಾವತಿರವರ ಪತಿ ಸೌದಿ ಮಿಲಿಟರಿ ಸಮವಸ್ತ್ರ ಫ್ಯಾಕ್ಟರಿಯ ನಿವೃತ್ತ ಸೂಪರ್‌ವೈಸರ್ ರಾಜೇಶ್ ಬಂಗೇರ, ಪುತ್ರಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ನಿಶಾ, ಮೊಮ್ಮಗಳು ನಿಯಾಂಶಿಕೃಷ್ಣ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಜಯಶ್ರೀ ಟಿ.ಜಿ. ಸನ್ಮಾನ ವಾಚಿಸಿದರು. ಮುಖ್ಯ ಶಿಕ್ಷಕಿ ಕಾರ್ಮೆಲೆಸ್ ಅಂದ್ರಾದೆ ಸ್ವಾಗತಿಸಿದರು. ಶಿಕ್ಷಕ ಚರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವಿಮಲಾ ವಂದಿಸಿದರು.

ಮೂರು ಚಿನ್ನದ ಉಂಗುರದೊದಿಗೆ ಸನ್ಮಾನ
ನಿವೃತ್ತಿಗೊಂಡ ಶಿಕ್ಷಕಿ ವೇದಾವತಿ ಹಾಗೂ ರಾಜೇಶ್ ಬಂಗೇರ ದಂಪತಿಯನ್ನು
ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು, ಪೋಷಕರ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ಹಾಗೂ ಚಿನ್ನದ ಉಂಗುರ, ಹಿರಿಯ ವಿದ್ಯಾರ್ಥಿಗಳ ವತಿಯಿಂದ ಚಿನ್ನದ ಉಂಗುರ ಹಾಗೂ ನಿವೃತ್ತ ಮುಖ್ಯಗುರು ಅನುಸೂಯಾ ಬಾಯಿರವರ ವತಿಯಿಂದ ಚಿನ್ನದ ಉಂಗುರ ನೀಡಿ ಗೌರವಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು, ಕಾವು ಹೇಮನಾಥ ಶೆಟ್ಟಿ, ನರಿಮೊಗರು ಗ್ರಾ.ಪಂ., ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ, ಅಕ್ಷರ ದಾಸೋಹ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿದಂತೆ ಹಲವರು ಶಾಲು ಹೊದೆಸಿ, ಹೂಗುಚ್ಚ, ಗಿಡ, ಫೋಟೋ, ಪುಸ್ತಕ ಇತ್ಯಾದಿ ನೀಡಿ ಸನ್ಮಾನಿಸಿದರು.

ನನಗೆ ಸಿಕ್ಕಿದ ಗೌರವವನ್ನು ಎಲ್ಲರಿಗೂ ಅರ್ಪಿಸುತ್ತೇನೆ
ಸನ್ಮಾನಗೊಂಡ ಶಿಕ್ಷಕಿ ವೇದಾವತಿರವರು ಮಾತನಾಡಿ ನನಗೆ ಇಂದು ಉತ್ತಮ ರೀತಿಯಲ್ಲಿ ಸನ್ಮಾನ ಕಾರ್ಯಕ್ರಮ ನೀವೆಲ್ಲರೂ ಮಾಡಿದ್ದೀರಿ. ನನ್ನ ವೃತ್ತಿ ಜೀವನದಲ್ಲಿ ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರ ಪ್ರೋತ್ಸಾಹ, ಉತ್ತಮವಾಗಿತ್ತು. ಈ ಶಾಲೆಯಲ್ಲಿ ನಾನು ಮಾಡಿದ ಸಾಧನೆಗೆ ಎಲ್ಲರೂ ಪ್ರೋತ್ಸಾಹ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ. ನನಗೆ ಸಿಕ್ಕಿದ ಗೌರವ, ಸನ್ಮಾನವನ್ನು ಎಲ್ಲರಿಗೂ ಅರ್ಪಿಸುತ್ತೇನೆ ಎಂದು ಹೇಳಿ ವೃತ್ತಿ ಬದುಕಿನಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here