ಪುತ್ತೂರು: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದಕ್ಷಿಣ ಕನ್ನಡ ಜಿಲ್ಲಾ ಸಂಘದ ವತಿಯಿಂದ ಹಿರಿಯ ಸದಸ್ಯ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮಗಳು ಜು.3ರಂದು ಎಂ.ಟಿ ರಸ್ತೆಯ ಎಸ್‌ಕೆಎಸಿಎಂಎಸ್ ಕಟ್ಟಡದಲ್ಲಿರುವ ರೈತ ಸಂಘದ ಕಛೇರಿ ಸಭಾಂಗಣದಲ್ಲಿ ನಡೆಯಿತು.
ರೈತ ಸಂಘದ ಹಿರಿಯ ಹೋರಾಟಗಾರ ಕುಮಾರ ಸುಬ್ರಹ್ಮಣ್ಯ ಶಾಸ್ತ್ರೀ, ಪಡೀಲ ಈಶ್ವರ ಭಟ್, ಐತ್ತಪ್ಪ ರೈ ಅಜರಂಗದಳ, ಮಾಡಾವು ಸೀತಾರಾಮ ರೈ, ಬೆಳ್ಳಿಯಪ್ಪ ಗೌಡ ಆಲಂಗಾರುರವರನ್ನು ಸನ್ಮಾನಿಸಲಾಯಿತು.
ಹಿರಿಯ ಸದಸ್ಯರನ್ನು ಸನ್ಮಾನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ, ಸಂಘಟನೆಗಳು ಸದೃಢವಾಗಿ ಉಳಿದಾಗ ಹೋರಾಟಗಳಿಗೆ ಬಲ ಬರುತ್ತದೆ. ರೈತರು ಒಗ್ಗೂಡಿ ಕೆಲಸ ನಿರ್ವಹಿಸಿದಾಗ ಯಶಸ್ಸು ಲಭಿಸುತ್ತದೆ. ಸಂಘವನ್ನು ಉಳಿಸುವ ನಿಟ್ಟಿನಲ್ಲಿ ರೈತರ ಶ್ರಮ ಅಗತ್ಯವಿದೆ. ಹಸಿರು ಶಾಲಿನಿಂದ ಮಾತ್ರ ರೈತರ ಮರ್ಯಾದೆ ಉಳಿಯಲು ಸಾಧ್ಯ ಎಂದು ಹೇಳಿದರು.
ಸವಣೂರು ವಲಯ ಗೌರವಾಧ್ಯಕ್ಷ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ, ರೈತರು ಕಠಿಣ ಪರಿಸ್ಥಿತಿಗೆ ತಲುಪಿದಾಗ ಮಾತ್ರ ಸಂಘದ ನೆನಪಾಗುವ ಕಾರ್ಯವಾಗಬಾರದು. ಭೂಮಿಗೆ ಬರುವ ಕಂಟಕವನ್ನು ರೈತ ಸಂಘದ ಬಲದಿಂದ ಎದುರಿಸಲು ಸಾಧ್ಯವಾಗಿದೆ. ರೈತರು ಒಗ್ಗಟ್ಟಿನಿಂದ ಮುನ್ನಡೆದಾಗ ಅಧಿಕಾರಿಗಳು ಕಾನೂನಿಗೆ ತಲೆಬಾಗುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ದ ಕ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಮಾತನಾಡಿ, ಸಂಘಟನೆಯ ಮಹತ್ವ ಹಾಗೂ ಹಿರಿಯರ ಹೋರಾಟದ ಬಗ್ಗೆ ತಿಳಿಸಿದರು.
ಸಂಘದ ಜಿಲ್ಲಾ ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ, ವಿಟ್ಲ ತಾಲೂಕು ಕಾರ್ಯದರ್ಶಿ ಸುದೇಶ್ ಭಂಡಾರಿ, ಪುತ್ತೂರು ತಾಲೂಕು ಉಪಾಧ್ಯಕ್ಷ ಜಯಪ್ರಕಾಶ್, ಬಂಟ್ವಾಳ ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಇದಿನಬ್ಬ ನಂದಾವರ, ಇಸುಬು, ಶಿವಚಂದ್ರ ಪೈರುಪುಣಿ ಈಶ್ವರಮಂಗಿಲ, ಉಡುಪಿ – ಕಾಸರಗೋಡು ೪೦೦ ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ, ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಹರೀಣಿ ರೈ ಮೇರ್ಲ, ಕಲ್ಪನಾ ಶೆಣೈ ಕೊಡಿಪ್ಪಾಡಿ, ಶಶಿಧರ ಆರ್ಯಾಪು ಉಪಸ್ಥಿತರಿದ್ದರು.