ವಿಟ್ಲ: ಖಾಸಗಿ ವ್ಯಕ್ತಿಯೋರ್ವರು ಮನೆ ಕುಸಿದು ಬೀಳುವ ಹಂತದವರೆಗೆ ಮಣ್ಣು ಅಗೆತ ಮಾಡಿ ಅಮಾನವೀಯತೆ ಮೆರೆದಿರುವ ಕುರಿತು ಕಳೆದ ಒಂದು ವರ್ಷದಿಂದ ಗ್ರಾಮ ಪಂಚಾಯತ್ಗೆ ಮನವಿ ಮಾಡಲಾಗಿದ್ದರೂ ಗ್ರಾ.ಪಂ. ಆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮನೆ ಮಾಲಕರು ಆರೋಪಿಸಿದ್ದಾರೆ.
ಬಂಟ್ವಾಳ ತಾಲೂಕಿನ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಡಾಜೆ ನಿವಾಸಿ ವಿಶ್ವನಾಥ ಎಂಬವರು ಗ್ರಾ.ಪಂ.ಗೆ ಮನವಿ ಮಾಡಿದ್ದಾರೆ.
`ನನ್ನ ಮನೆ ಜರಿದು ಬೀಳುವ ಸ್ಥಿತಿಯಲ್ಲಿದೆ. ಕಳೆದ ಒಂದು ವರ್ಷದ ಹಿಂದೆ ನನ್ನ ಮನೆಯ ಕೆಳಗಿನ ಭಾಗದ ಜಾಗವನ್ನು ಖರೀದಿಸಿದ್ದ ವ್ಯಕ್ತಿಯೊರ್ವರು ಜೆಸಿಬಿ ಬಳಸಿ ಮನೆಯ ಪಂಚಾಂಗದವರೆಗೆ ಅಗೆದು ತೆಗೆದಿದ್ದಾರೆ. ಇವರು ಮಣ್ಣು ತೆಗೆದ ಪರಿಣಾಮವಾಗಿ ನಮ್ಮ ಮನೆಗೆ ಹಾನಿಯಾಗುವ ಸಂಭವವಿದ್ದು, ಮನೆಕುಸಿದು ಬೀಳುವ ಹಂತ ತಲುಪಿದೆ. ಈ ನಿಟ್ಟಿನಲ್ಲಿ ಆ ವ್ಯಕ್ತಿಯ ಬಗ್ಗೆ ಕ್ರಮ ಕೈಗೊಂಡು ತಡೆಗೋಡೆ ನಿರ್ಮಿಸಿಕೊಡುವ ಬಗ್ಗೆ ವ್ಯವಸ್ಥೆ ಮಾಡುವಂತೆ ಗ್ರಾಮ ಪಂಚಾಯತ್ ಗೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಗ್ರಾಮ ಪಂಚಾಯತ್ ಬಳಿಕ ಮಳೆಗಾಲದಲ್ಲಿ ಮನೆ ಬೀಳುವ ಮತ್ತು ಅಪಾಯದಲ್ಲಿರುವುದರಿಂದ ಮಳೆ ಕಡಿಮೆಯಾಗುವ ವರೆಗೆ ಮನೆಯಲ್ಲಿ ವಾಸ್ತವ್ಯ ಮಾಡಬೇಡಿ, ಮಳೆ ಕಡಿಮೆಯಾದ ಕೂಡಲೇ ತಡೆಗೋಡೆ ನಿರ್ಮಿಸಿಕೊಡುವ ಬಗ್ಗೆ ಸೂಕ್ತವಾದ ಕ್ರಮಕೈಗೊಳ್ಳುವ ಬಗ್ಗೆ ನೋಟೀಸ್ ನೀಡಿತ್ತು. ಆದರೆ ಮಳೆ ಕಡಿಮೆಯಾದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪಂಚಾಯತ್ ವಿರುದ್ದ ಬಂಟ್ವಾಳ ತಹಶೀಲ್ದಾರ್ ಹಾಗೂ ತಾ.ಪಂ.ಇ.ಒ.ಅವರಿಗೆ ದೂರು ನೀಡಿದ್ದೆವು. ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಗ್ರಾ.ಪಂ.ಗೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಬಳಿಕದ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ನಡೆದ ಗ್ರಾಮಸ್ಪಂದನಾ ಕಾರ್ಯಕ್ರಮದಲ್ಲಿ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಲ್ಲದೆ ದೂರು ನೀಡಿದ್ದೆವು. ಈ ವೇಳೆ ದೂರಿನ ಬಗ್ಗೆ ಶಾಸಕರು ಕೇಳಿದಾಗ ಒಂದು ತಿಂಗಳೊಳಗೆ ತಡೆಗೋಡೆಗೆ ವ್ಯವಸ್ಥೆ ಮಾಡುತ್ತೇವೆ ಎಂದು ಪಿ.ಡಿ.ಒ ಭರವಸೆ ನೀಡಿದ್ದರು. ಆದರೆ ಗ್ರಾ.ಪಂ.ಪಿ.ಡಿ.ಒ. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಆರೋಪಿಸಿದ್ದಾರೆ.
ಇದೀಗ ಮತ್ತೆ ಮಳೆಗಾಲ ಆರಂಭವಾಗುತ್ತಿದ್ದಂತೆ ಗ್ರಾ.ಪಂ. ಮಳೆಗಾಲದಲ್ಲಿ ಅಥವಾ ಬೇರೆ ಸಂದರ್ಭದಲ್ಲಿ ಕುಸಿತ ಉಂಟಾಗಿ ಅಪಾಯ ಸಂಭವಿಸಿದರೆ ನಾವು ಜವಾಬ್ದಾರಿ ಅಲ್ಲ ಎಂದು ಲಿಖಿತ ನೋಟೀಸ್ ನೀಡಿದೆ. ಈ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ದೂರು ನೀಡುವ ತೀರ್ಮಾನಕ್ಕೆ ಬಂದಿದ್ದೇವೆ. ಅಲ್ಲದೆ ಮಳೆ ಗಾಲದಲ್ಲಿ ಯಾವುದೇ ಪ್ರಾಣಹಾನಿಯಾದರೂ ಪಂಚಾಯತ್ ನೇರ ಹೊಣೆಯಾಗಿರುತ್ತದೆ ಎಂದು ಮನೆ ಮಾಲಕ ವಿಶ್ವನಾಥರವರು ತಿಳಿಸಿದ್ದಾರೆ.
ನಮ್ಮಿಂದ ಆಗುವ ಪ್ರಯತ್ನವನ್ನು ನಾವು ಮಾಡ್ತಿದ್ದೇವೆ
ನಾನು ವರ್ಗಾವಣೆಯಾಗಿ ಇಲ್ಲಿಗೆ ಬರುವಾಗ ಮಣ್ಣು ತೆಗೆದ ಧರೆಗೆ ಅರ್ಧ ತಡೆಗೋಡೆ ಕಟ್ಟಲಾಗಿತ್ತು. ನಾನು ಬಂದ ಬಳಿಕ ಮನೆಯವರು ಗ್ರಾ.ಪಂ.ಗೆ ಮನವಿ ಮಾಡಿದ್ದರು. ಮೀಟಿಂಗ್ನಲ್ಲಿಟ್ಟು, ಮಣ್ಣು ತೆಗೆದ ಜಾಗದ ಮಾಲಕರಿಗೆ ನೋಟೀಸ್ ಮಾಡಿದ್ದೇನೆ. ಆದರೆ ಅದಕ್ಕೆ ಯಾವುದೇ ಉತ್ತರ ಸಿಗಲಿಲ್ಲ. ನಾವು ವಿಚಾರಿಸಿದಾಗ ಜಾಗದ ಮಾಲಕ ವಿದೇಶದಲ್ಲಿರುವುದು ತಿಳಿದುಬಂತು. ಅವರ ಪೈಕಿಯವರು ಎಲ್ಲಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ. ಜಾಗದ ಮಾಲಕರು ಸಿಕ್ಕಿದ ಬಳಿಕ ಅವರೊಂದಿಗೆ ಮಾತುಕತೆ ಮಾಡಿ ಸಮಸ್ಯೆಯನ್ನು ಬಗೆಹರಿಸಲಿದ್ದೇವೆ. ಮಣ್ಣು ತೆಗೆದಿರುವುದು ಖಾಸಗಿ ಸ್ಥಳವಾಗಿರುವ ಹಿನ್ನೆಲೆಯಲ್ಲಿ ಪಂಚಾಯತ್ನ ಅನುದಾನದಿಂದ ಅದನ್ನು ಕಟ್ಟಿಸಿಕೊಡಲು ಬರುವುದಿಲ್ಲ. ನಮ್ಮಿಂದ ಆಗುವ ಪ್ರಯತ್ನವನ್ನು ನಾವು ಮಾಡುತ್ತಾ ಇದ್ದೇವೆ.
ಗಿರಿಜ, ಅಭಿವೃದ್ಧಿ ಅಧಿಕಾರಿ ,
ಮಾಣಿ ಗ್ರಾಮ ಪಂಚಾಯತ್