ಕಾಣಿಯೂರಿನಲ್ಲಿ ಮದ್ಯವರ್ಜನ ಶಿಬಿರದ ಸಮಾಲೋಚನಾ ಸಭೆ- ವ್ಯವಸ್ಥಾಪನಾ ಸಮಿತಿ ರಚನೆ

0

ಕುಟುಂಬವನ್ನು ಬೆಳಗಿಸುವ ಕಾರ್ಯ ಮದ್ಯವರ್ಜನ ಶಿಬಿರದಿಂದ ಆಗುತ್ತಿದೆ- ಪ್ರವೀಣ್ ಕುಮಾರ್
ಶಿಬಿರದಿಂದ ಅದೆಷ್ಟೋ ಕುಟುಂಬಗಳು ಸಂತೃಪ್ತ ಜೀವನ ನಡೆಸುತ್ತಿವೆ- ಗಣೇಶ್ ಆಚಾರ್ಯ
ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು- ಮಹೇಶ್ ಕೆ.ಸವಣೂರು
ಮದ್ಯವರ್ಜನ ಶಿಬಿರ ಸಮಾಜಕ್ಕೆ ಮಾದರಿ – ಉದಯ ರೈ ಮಾದೋಡಿ
ಪುಣ್ಯದ ಕೆಲಸಕ್ಕಾಗಿ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು- ಪದ್ಮಯ್ಯ ಗೌಡ ಅನಿಲ
ಕಾರ್ಯಕ್ರಮದ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ- ಸೀತಾರಾಮ ಗೌಡ ಪೊಸೊಳಿಕೆ

ಕಾಣಿಯೂರು: ಕುಡಿತದ ದುಶ್ಚಟಕ್ಕೆ ಒಳಗಾಗಿರುವ ವ್ಯಕ್ತಿಗಳ ಮನಪರಿವರ್ತನೆಗಾಗಿ ಮದ್ಯವರ್ಜನ ಶಿಬಿರಗಳನ್ನು ಆಯೋಜನೆ ಮಾಡಿ, ಆ ಮೂಲಕ ಸಾವಿರಾರು ಜನರನ್ನು ಮದ್ಯವ್ಯಸನ ಮುಕ್ತರನ್ನಾಗಿ ಮಾಡುವ ಮೂಲಕ ಆ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ ಕೆಲಸ ಧರ್ಮಸ್ಥಳ ಯೋಜನೆಯ ಮುಖಾಂತರ ಆಗುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸಮಾಜದಲ್ಲಿ ಹಲವಾರು ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಬಾಳಿಗೆ ಬೆಳಕು ನೀಡಿ ಇಡೀ ಕುಟುಂಬವನ್ನು ಬೆಳಗಿಸುವ ಕಾರ್ಯ ಮದ್ಯವರ್ಜನ ಶಿಬಿರದಿಂದ ಆಗುತ್ತಿದೆ ಎಂದು ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.


ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಆಗಸ್ಟ್ ತಿಂಗಳಲ್ಲಿ ಕಾಣಿಯೂರಿನಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯನ್ನು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ಜು.6ರಂದು ಉದ್ಘಾಟಿಸಿ ಅವರು ಮಾತನಾಡಿದರು. ಉಡುಪಿ ಪ್ರಾದೇಶಿಕ ಕಚೇರಿಯ ಜನಜಾಗೃತಿ ವೇದಿಕೆಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ರಾಜ್ಯಾದ್ಯಂತ ಮದ್ಯವರ್ಜನ ಶಿಬಿರವನ್ನು ಯಶಸ್ವಿಯಾಗಿ ನಡೆಸಿ ಅದೆಷ್ಟೋ ಕುಟುಂಬಗಳು ಸಂತೃಪ್ತ ಜೀವನ ನಡೆಸುತ್ತಿವೆ. ಕೆಲವು ಕುಟುಂಬಗಳು ಮದ್ಯ ವ್ಯಸನದಿಂದ ಕುಟುಂಬದ ಆಧಾರವನ್ನು ಕಳೆದುಕೊಂಡಿದ್ದಾರೆ, ಹಲವರು ನೆಮ್ಮದಿಯ ಬದುಕನ್ನು ಕಳೆದುಕೊಂಡಿದ್ದಾರೆ. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀಯವರ ಆಶಯದೊಂದಿಗೆ ಮದ್ಯವರ್ಜನ ಶಿಬಿರಗಳು ಯಶಸ್ವಿಯಾಗಿ ನಡೆಯುತ್ತಿವೆ. ಯೋಜನೆ ವತಿಯಿಂದ ಇದುವರೆಗೆ 1677 ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, 1,23,೦೦೦ ಮಂದಿ ಮದ್ಯವ್ಯಸನದಿಂದ ಪರಿವರ್ತನೆಯಾಗಿದ್ದಾರೆ. ಕುಡಿತದಂತಹ ದುಶ್ಚಟಕ್ಕೆ ದಾಸರಾಗಿರುವ ವ್ಯಕ್ತಿಗಳ ಮನ ಪರಿವರ್ತನೆ ಮಾಡಿ ಅವರು ಸಮಾಜದಲ್ಲಿ ಗೌರವಯುತವಾದ ಬದುಕು ನಡೆಸಲು ಸಹಕಾರಿಯಾಗಬೇಕೆನ್ನುವುದು ಧರ್ಮಸ್ಥಳ ಸಂಸ್ಥೆಯ ಮದ್ಯವರ್ಜನ ಶಿಬಿರದ ಮುಖ್ಯ ಉದ್ದೇಶವಾಗಿದೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಡಬ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ.ಸವಣೂರು ಮಾತನಾಡಿ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರವನ್ನು ಆಯೋಜಿಸಲು ಕಾಣಿಯೂರಿಗೆ ಅವಕಾಶ ಒದಗಿಬಂದಿದ್ದು, ನಮ್ಮ ಭಾಗ್ಯ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ದುಶ್ಚಟಕ್ಕೆ ಬಲಿಯಾಗುತ್ತಿರುವ ಕುಟುಂಬವನ್ನು ಬೆಳಗಿಸುವ ಕಾರ್ಯ ಈ ಮದ್ಯವರ್ಜನ ಶಿಬಿರದ ಮೂಲಕ ಆಗಬೇಕು ಎಂದರು.

ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ಮಾತನಾಡಿ, ದುಶ್ಚಟಗಳ ಹಾವಳಿಯಿಂದ ಸಮಾಜದ ಸ್ವಾಸ್ಥ್ಯ ಕೆಡುವಂತಹ ಸಂದರ್ಭದಲ್ಲಿ ಇಂತಹ ಶಿಬಿರ ಸಮಾಜಕ್ಕೆ ಮಾದರಿ. ಹೆಚ್ಚಿನ ಶಿಬಿರಾರ್ಥಿಗಳನ್ನು ಶಿಬಿರಕ್ಕೆ ಸೇರಿಸಿ ವ್ಯಸನಮುಕ್ತರಾಗಿ ನೆಮ್ಮದಿಯ ಜೀವನ ನಡೆಸುವಂತಾಗಬೇಕು. ಇಂತಹ ಪುಣ್ಯದ ಕೆಲಸಕ್ಕಾಗಿ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.

ಗೌರವಾಧ್ಯಕ್ಷ ಪದ್ಮಯ್ಯ ಗೌಡ ಅನಿಲ ಮಾತನಾಡಿ, ಕೆಲವು ವರ್ಷಗಳ ಹಿಂದೆ ಕಾಣಿಯೂರಿನಲ್ಲಿ ಮದ್ಯವರ್ಜನ ಶಿಬಿರವು ಯಶಸ್ವಿಯಾಗಿ ನಡೆದಿತ್ತು. ಈ ಕಾರ್ಯಕ್ರಮವನ್ನೂ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ ಎಂದರು. ಕಡಬ ತಾಲೂಕು ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಸೀತಾರಾಮ ಗೌಡ ಪೊಸೊಳಿಕೆ ಕಾರ್ಯಕ್ರಮದ ಯಶಸ್ವಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದರು.

ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷರಾದ ಜಯಾನಂದ ಬಂಟ್ರಿಯಾಲು, ನೋಣಯ್ಯ ಪೂಜಾರಿ, ಇಂದುಶೇಖರ್ ಶೆಟ್ಟಿ, ಕಡಬ ತಾಲೂಕು ಕೇಂದ್ರ ಒಕ್ಕೂಟ ಸಮಿತಿಯ ಅಧ್ಯಕ್ಷ ಸಂತೋಷ್ ಕೆ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಅಧ್ಯಕ್ಷ ವಾಸುದೇವ ನಾಯ್ಕ್ ತೋಟ, ಯೋಜನೆಯ ಸವಣೂರು ವಲಯಾಧ್ಯಕ್ಷ ರಾಮಚಂದ್ರ ಇಡ್ಯಡ್ಕ, ಯೋಜನೆಯ ಕಾಣಿಯೂರು ಒಕ್ಕೂಟದ ಅಧ್ಯಕ್ಷ ಕುಸುಮಾಧರ ಗೌಡ ಅನಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಡಬ ಜ್ಞಾನವಿಕಾಸ ಯೋಜನೆಯ ಸಮನ್ವಯಾಧಿಕಾರಿ ಚೇತನಾ ಮತ್ತು ಸೇವಾಪ್ರತಿನಿಧಿಗಳು ಪ್ರಾರ್ಥಿಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು ಸ್ವಾಗತಿಸಿ,ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

ಗೌರವಾಧ್ಯಕ್ಷರಾಗಿ ಪದ್ಮಯ್ಯ ಗೌಡ ಅನಿಲ, ಅಧ್ಯಕ್ಷರಾಗಿ ಉದಯ ರೈ ಮಾದೋಡಿ
ಕಾಣಿಯೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಗಳಿ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಉದಯ ರೈ ಮಾದೋಡಿ ಮತ್ತು ಗೌರವಾಧ್ಯಕ್ಷರಾಗಿ ಕಾಣಿಯೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಸಂಚಾಲಕರಾಗಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ನಿರ್ದೇಶಕ ಪ್ರವೀಣ್ ಕುಮಾರ್, ಸಂಚಾಲಕರಾಗಿ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ನಾವೂರು, ಕಾರ್ಯದರ್ಶಿಯಾಗಿ ಯೋಜನೆಯ ವಲಯ ಮೇಲ್ವಿಚಾರಕಿ ಹರ್ಷಕುಮಾರಿ, ಕೋಶಾಧಿಕಾರಿಯಾಗಿ ಸುರೇಶ್ ಓಡಬಾಯಿ, ಉಪಾಧ್ಯಕ್ಷರಾಗಿ ಗಣೇಶ್ ಉದನಡ್ಕ, ಲಲಿತಾ ದರ್ಖಾಸು, ರಾಮಣ್ಣ ಗೌಡ ಮೂಡೈಮಜಲು, ಶುಭಾ ಆರ್ ನೋಂಡಾ, ಗಿರಿಶಂಕರ ಸುಲಾಯ, ಆನಂದ ಬನೇರಿ, ವೇಣುಗೋಪಾಲ ಕಳುವಾಜೆ, ಜತೆ ಕಾರ್ಯದರ್ಶಿಯಾಗಿ ಜಯಂತ ಅಬೀರ, ಯೋಗ ಶಿಕ್ಷಕರಾಗಿ ಜಯಂತ್ ವೈ ಅವರನ್ನು ಆಯ್ಕೆ ಮಾಡಲಾಗಿದೆ. ಗೌರವ ಸಲಹೆಗಾರರಾಗಿ ಜಯಸೂರ್ಯ ರೈ ಮಾದೋಡಿ, ಚಿದಾನಂದ ಉಪಾಧ್ಯಾಯ ಕಲ್ಪಡ, ಜಗನ್ನಾಥ ರೈ ನುಳಿಯಾಲು, ಲೋಹಿತಾಕ್ಷ ಕೆಡೆಂಜಿಕಟ್ಟ, ರಾಜೀವಿ ಶೇಟ್ಟಿ, ನಾಗೇಶ್ ರೈ ಮಾಳ, ಪ್ರಮೀಳಾ ಜನಾರ್ದನ, ರಾಜೇಶ್ವರಿ ಕನ್ಯಾಮಂಗಲ, ಸುರೇಶ್ ರೈ ಸೂಡಿಮುಳ್ಳು, ವಾಸುದೇವ ನಾಯ್ಕ್ ತೋಟ, ಚಾರ್ವಾಕ ಸಿ.ಎ ಬ್ಯಾಂಕ್ ಸಿಇಒ ಅಶೋಕ್ ಗೌಡ, ಪಿಡಿಓಗಳಾದ ದೇವರಾಜ್, ಮನ್ಮಥ ಅಜ್ರಂಗಳ, ಚಂದ್ರಶೇಖರ ಬರೆಪ್ಪಾಡಿ, ದಯಾನಂದ ಕೂರೇಲು, ರಾಜರಾಮ ಪ್ರಭು ಸವಣೂರು, ರಾಕೇಶ್ ರೈ ಕೆಡೆಂಜಿ, ಆನಂದ ಗೌಡ ಮೇಲ್ಮನೆ, ಪರಮೇಶ್ವರ ಗೌಡ ಅನಿಲ, ರಾಮಣ್ಣ ಗೌಡ ಮುಗರಂಜ, ಲಕ್ಷ್ಮಣ ಗೌಡ ಮುಗರಂಜ, ದಿನೇಶ್ ಮೆದು, ಧನಂಜಯ ಕೇನಾಜೆ, ವಸಂತ ಪೆರ್ಲೋಡಿ, ಗಣೇಶ್ ನಿಡ್ವಣ್ಣಾಯ,ಆಶಾ ರೈ ಕಲಾಯಿ, ನಾರಾಯಣ ಗೌಡ ಬೈತಡ್ಕ, ಉಮೇಶ್ವರಿ ಅಗಳಿ, ಮೋಹನ್ ಅಗಳಿಯವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here