ರೋಟರಿ ಕ್ಲಬ್ ಪುತ್ತೂರು ಪದಪ್ರದಾನ

0

ಭ್ರಷ್ಟಾಚಾರದಿಂದ ದೇಶ ಅಧಃಪತನದತ್ತ ಅಪಾಯಕಾರಿ ಸ್ಥಿತಿ-ಡಾ.ಮೋಹನ್ ಆಳ್ವ

ಪುತ್ತೂರು: ಪ್ರಸ್ತುತ ವಿದ್ಯಾಮಾನದಲ್ಲಿ ರಾಜಕೀಯ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ವಿದ್ಯಾ ಕ್ಷೇತ್ರ, ಆರೋಗ್ಯ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಇವುಗಳು ಕಾರ್ಪೊರೇಟ್ ಕಪಿಮುಷ್ಟಿಗೆ ಒಳಗಾಗಿ ಭೃಷ್ಟಾಚಾರದ ಕೂಪವಾಗುತ್ತಾ ದೇಶ ಅಧಃಪತನದತ್ತ ಸಾಗುತ್ತಿದ್ದು, ಮೌಲ್ಯಗಳು ಕುಸಿಯುತ್ತಿರುವುದು ನೋಡಿದಾಗ ನಾವು ಎಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿದ್ದೇವೆ ಎಂಬುದನ್ನು ಮನಗಾಣಬೇಕಾಗಿದೆ. ಆದರೂ ನಿರಾಶಾರಾಗಬೇಕಿಲ್ಲ, ನಾವು ನಮ್ಮ ಕ್ಷೇತ್ರದಲ್ಲಿ ಅವನ್ನು ಸರಿಪಡಿಸಿಕೊಂಡು ಹೋಗಬೇಕಾಗಿರೋದು ನಮ್ಮ ಕರ್ತವ್ಯ ಎಂದು ಮೂಡಬಿದ್ರೆ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‌ನ ಚೇರ್‌ಮ್ಯಾನ್ ಡಾ.ಎಂ.ಮೋಹನ್ ಆಳ್ವರವರು ಹೇಳಿದರು.


ರೋಟರಿ ಕ್ಲಬ್ ಪುತ್ತೂರು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಜು.7 ರಂದು ದರ್ಬೆ ಪ್ರಶಾಂತ್ ಮಹಲ್‌ನ ಸಭಾಂಗಣದಲ್ಲಿ ಜರಗಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಒಂದರಿಂದ ಪಿಜಿವರೆಗೆ ಸುಮಾರು 49 ಕೋಟಿ ವಿದ್ಯಾರ್ಥಿಗಳಿದ್ದು ವಿದ್ಯಾರ್ಥಿ ಸಂಪತ್ತನ್ನು ಒಳ್ಳೆಯ ದಿಶೆಯಲ್ಲಿ ಕೊಂಡೊಯ್ಯಲು 45 ಸಾವಿರ ಕಾಲೇಜುಗಳುಳ್ಳ ಸಂಯೋಜನೆಯ 1025 ವಿಶ್ವವಿದ್ಯಾನಿಲಯಗಳು ವಿಫಲವಾಗುತ್ತಿವೆ. ರಾಜಕೀಯ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೂ ಮತ ಹಾಕಿದ್ರೂ ಭ್ರಷ್ಟ ರಾಜಕಾರಣಿಗಳು ಹುಟ್ಟುತ್ತಾರೆ ವಿನಹ ದೇಶ ಸುಭದ್ರವಾಗೋದಿಲ್ಲ. ಧಾರ್ಮಿಕ ಕ್ಷೇತ್ರದಲ್ಲಿ ಮಾನವ ಧರ್ಮ ಮರೆತು ಧರ್ಮಿಷ್ಟವಾಗಿ ಬದುಕು ಸಾಗಿಸದೆ ಮೌಲ್ಯಗಳನ್ನು ಕುಸಿಯುವಂತೆ ಮಾಡಿದೆ. ಜ್ಞಾನಿಗಳು ಎಂದು ಕರೆಸಿಕೊಳ್ಳುವ ವಿದ್ಯಾಕ್ಷೇತ್ರವೂ ವ್ಯಾಪಾರೀಕರಣವಾಗಿದ್ದು ಡೀಮ್ಡ್, ಅಟಾನಾಮಸ್ ಅಂತ ಹೇಳಿಕೊಂಡು ವಿದ್ಯಾಕ್ಷೇತ್ರದ ಭವಿಷ್ಯ ಹಾಳಾಗುತ್ತಿದೆ. ದೇವರ ಸಮಾನ ಎನ್ನುವ ಆರೋಗ್ಯ ಕ್ಷೇತ್ರದಲ್ಲೂ ಸೇವಾ ಮನೋಭಾವ, ಮಾನವೀಯತೆ, ಪ್ರೀತಿ ಮರೀಚಿಕೆಯಾಗಿದ್ದು ದೇವರಂತೆ ಕಾಣುವ ವೈದ್ಯರನ್ನು ಸಂಶಯದಿಂದ ನೋಡಬೇಕಾದ ಪರಿಸ್ಥಿತಿಯಿದೆ. ಸೌಂದರ್ಯ ಪ್ರಜ್ಞೆ ಇರುವಂತಹ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕಲಾವಿದರು ಕೂಡ ಭ್ರಷ್ಟರಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದ ಅವರು ಸಮಾಜ ಎಂದರೆ ಪರಿಕಲ್ಪನೆ. ಇಂದು ಸಮಾಜದ ಪರಿಕಲ್ಪನೆ ದೂರವಾಗಿ ಜಾತಿ, ಮತಗಳ ಆಧಾರದಲ್ಲಿ ಸಮಾಜದಲ್ಲಿ ಪರಿಕಲ್ಪನೆಯನ್ನು ಕಾಣುವಂತಾಗಿರುವುದು ವಿಷಾದನೀಯ. ದೇಶದಲ್ಲಿ ವಿದ್ಯಾವಂತರಿದ್ದಾರೆ ಆದರೆ ಅಕ್ಷರ ಗೊತ್ತಿಲ್ಲದವರೂ ಇದ್ದಾರೆ. ಶ್ರೀಮಂತರೂ ಇದ್ದಾರೆ ಆದರೆ ಒಂದೊತ್ತು ಊಟವಿಲ್ಲದವರೂ ಇದ್ದಾರೆ. ಸಾಮರಸ್ಯದ ಮಾತುಗಳು ಕೇವಲ ವೇದಿಕೆಗೆ ಸೀಮಿತವಾಗಬಾರದು. ಎಲ್ಲಿ ಪ್ರೀತಿಯಿದೆ ಅಲ್ಲಿ ದ್ವೇಷವಿರೋದಿಲ್ಲ. ಆಗ ಮಾತ್ರ ದೇಶ ಸಾಮರಸ್ಯ ಹೊಂದಲು ಸಾಧ್ಯ ಎಂದು ಹೇಳಿದರು.


ರೋಟರಿಯಿಂದ ಭರವಸೆಯ ಬೀಜಗಳನ್ನು ಭಿತ್ತೋಣ-ಕಿಶನ್ ಕುಮಾರ್:
ಪದಪ್ರದಾನ ಅಧಿಕಾರಿಯಾಗಿ ಆಗಮಿಸಿದ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಕಿಶನ್ ಕುಮಾರ್‌ರವರು ಮಾತನಾಡಿ, ವಿಶ್ವದ ದೊಡ್ಡ ಸಮಾಜಸೇವಾ ಸಂಘಟನೆಯಾಗಿರುವ
ರೋಟರಿ ಸಂಸ್ಥೆಯು ನಮ್ಮಲ್ಲಿ ಪರಸ್ಪರ ಸಂಬಂಧಗಳನ್ನು ಬೆಳೆಸುತ್ತದೆ. ಸಂಬಂಧಗಳನ್ನು ಉಳಿಸುವುದು ಕಲೆ ಆದರೆ ಬೆಳೆಸುವುದು ಸಾಧನೆಯಾಗಿದೆ. ಯಾವಾಗ ನಮ್ಮಲ್ಲಿ ಉತ್ತಮ ಆಲೋಚನೆ, ಚಿಂತನೆಗಳು ಬೇರೂರುತ್ತವೆಯೋ ಅವಾಗ ನಾವು ಯಶಸ್ಸನ್ನು ಕಂಡುಕೊಳ್ಳುತ್ತೇವೆ. ನಾವು ಮಾಡುವ ಸಣ್ಣ ಸಹಾಯವು ಮತ್ತೊಬ್ಬರ ಬಾಳಿಗೆ ವರದಾನವಾಗುತ್ತದೆ. ನೀರು, ಗಾಳಿ, ಆಮ್ಲಜನಕ ಇಲ್ಲದಿದ್ದರೂ ಸ್ವಲ್ಪ ದಿನ ಬದುಕಬಹುದು ಆದರೆ ಭರವಸೆಯಿಲ್ಲದೆ ಬದುಕುವುದು ಅಸಾಧ್ಯ. ಭರವಸೆಯ ಬೀಜಗಳನ್ನು ಜಗತ್ತಿಗೆ ಪಸರಿಸೋಣ ಎಂದರು.


ಜಗತ್ತಿನಲ್ಲಿ ಶಾಂತಿ, ಸಮಾಧಾನ ನೆಲೆಸುವಂತಾಗಲಿ-ನರಸಿಂಹ ಪೈ:
ಉಪಸ್ಥಿತಿಯಾಗಿ ರೋಟರಿ ವಲಯ ಇದರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ ಮಾತನಾಡಿ, ಜಗತ್ತಿನಲ್ಲಿ ಭರವಸೆಯನ್ನು ಸೃಷ್ಟಿಸಿ ಎಂಬ ರೋಟರಿಯ ಧ್ಯೇಯವಾಕ್ಯದಂತೆ ಜಗತ್ತಿನಲ್ಲಿ ಶಾಂತಿ, ಸಮಾಧಾನ ನೆಲೆಸುವ ಕೈಂಕರ್ಯ ಮಾಡೋಣ. ಜೀವನದ ಪ್ರತಿಯೊಂದು ಹಂತದಲ್ಲಿ ನಾವು ಭರವಸೆಯನ್ನು ಕಳಕೊಳ್ಳುವಂತಾಗಬಾರದು ಬದಲಾಗಿ ಸವಾಲುಗಳನ್ನು ಎದುರಿಸುವವರಾಗಿ. ಜಿಲ್ಲಾ ಪ್ರಾಜೆಕ್ಟ್‌ಗಳಾದ ಅಂಗನವಾಡಿಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು ಯೋಜನೆಗಳನ್ನು ಬಲವರ್ಧನೆಗೊಳಿಸೋಣ ಎಂದರು.


ರೋಟರಿ ವಲಯ ಸೇನಾನಿ ಝೇವಿಯರ್ ಡಿ’ಸೋಜರವರು ಕ್ಲಬ್ ವಿಶೇಷ ಬುಲೆಟಿನ್ ರೋಟ ರೆಕಾರ್ಡ್ ಅನಾವರಣಗೊಳಿಸಿ ಮಾತನಾಡಿ, ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ.ರವರು ತಮ್ಮ ಅವಧಿಯಲ್ಲಿ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ್ದು ಜೊತೆಗೆ ಇನ್ನಿತರ ಉತ್ತಮ ಕಾರ್ಯಕ್ರಮ ಮಾಡುತ್ತಾ ಪ್ರಶಸ್ತಿಯನ್ನು ಒಲಿಸಿಕೊಂಡಿರುತ್ತಾರೆ. ಮುಂದಿನ ವರ್ಷದ ಅಧ್ಯಕ್ಷ ಜೈರಾಜ್ ಭಂಡಾರಿಯವರೂ ಕೂಡ ಇದೇ ರೀತಿ ಸಾಧನೆ ಮಾಡಲಿ, ಪ್ರಶಸ್ತಿ ಸಿಗುವಂತಾಗಲಿ ಎಂದರು.


ಕಣ್ಣಿನ ಆಸ್ಪತ್ರೆ ಶೀಘ್ರವೇ ಜನಸೇವೆಗೆ ತೆರೆದುಕೊಳ್ಳಲಿದೆ-ಉಮಾನಾಥ್ ಪಿ.ಬಿ:
ಕ್ಲಬ್ ನಿರ್ಗಮನ ಅಧ್ಯಕ್ಷ ಉಮಾನಾಥ್ ಪಿ.ಬಿರವರು ಮಾತನಾಡಿ, ಕ್ಲಬ್‌ನ 58ನೇ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ್ದು ಮಾತ್ರವಲ್ಲದೆ ಕ್ಲಬ್‌ನ ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ, ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಅವಧಿ ಪೂರ್ಣಗೊಳಿಸಿದ ಆತ್ಮತೃಪ್ತಿ ನನಗಿದೆ. ಕ್ಲಬ್ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಅದರಲ್ಲೂ ಮೆಗಾ ಪ್ರಾಜೆಕ್ಟ್ ಎನಿಸಿದ ಕಣ್ಣಿನ ಆಸ್ಪತ್ರೆಯನ್ನು ಸರ್ವರ ಸಹಕಾರದೊಂದಿಗೆ ಈಗಾಗಲೇ ಲೋಕಾರ್ಪಣೆಯಾಗಿದ್ದು ಇದು ಇನ್ನು ಕೆಲವೇ ದಿನಗಳಲ್ಲಿ ಪುತ್ತೂರಿನ ಜನತೆಯ ಸೇವೆಗೆ ತೆರೆದುಕೊಳ್ಳಲಿದೆ. ತನ್ನ ಅವಧಿಯಲ್ಲಿ ಪ್ಲಾಟಿನಂ ಫ್ಲಸ್ ಪ್ರಶಸ್ತಿ ಪಡೆದಿರುವುದು ಮತ್ತೂ ಸಂತೋಷವೆನಿಸುತ್ತಿದ್ದು ಕ್ಲಬ್ ಸದಸ್ಯರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.


ನೂತನ ಸದಸ್ಯರ ಸೇರ್ಪಡೆ:
ದರ್ಬೆ ವಿಜಯಾ ಬ್ಯಾಂಕಿನ ನಿವೃತ್ತ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಚಂದ್ರಶೇಖರ್ ರೈ,ಎಂ.ಎಸ್.ಐ.ಎಲ್ ನ ನಿವೃತ್ತ ಜಿಲ್ಲಾ ಇನ್ ಚಾರ್ಜ್ ಸೂಪರ್ ವೈಸರ್ ಗಣೇಶ್ ರೈ.ಡಿ,
ಬೈಪಾಸ್ ಜಂಕ್ಷನ್ ನಲ್ಲಿನ ಅಟೋಮೊಬೈಲ್ ಟೈರ್ಸ್ ಮತ್ತು ವ್ಹೀಲ್ ಎಲಾಯಿನ್ಮೆಂಟ್ ಸಂಸ್ಥೆಯ ಶಿವಪ್ರಸಾದ್ ಶೆಟ್ಟಿ, ನಿವೃತ್ತ ಅಬಕಾರಿ ಇನ್ಸ್‌ಪೆಕ್ಟರ್ ಆರ್ಯಾಪು ನಿವಾಸಿ ಮಾಯಿಲಪ್ಪ ನಾಯ್ಕ್ ಜಿ, ನಿವೃತ್ತ ಬ್ಯಾಂಕ್ ಉದ್ಯೋಗಿ ನರೇಂದ್ರ ಪಡಿವಾಳ್ ಎನ್, ಪತ್ರಕರ್ತೆ ಹಾಗೂ ಬ್ಯುಟೀಶಿಯನ್ ಶ್ರೀಮತಿ ಹೇಮಾ ಜಯರಾಂ ರೈ, ಗೌರವ ಸದಸ್ಯರಾಗಿ ಆರ್ಯಾಪು ನಿವಾಸಿ, ಮೊಟ್ಟೆತ್ತಡ್ಕ ಎನ್.ಆರ್.ಸಿ.ಸಿಯ ನಿವೃತ್ತ ವಿಜ್ಞಾನಿ ಡಾ.ಎನ್.ಯದುಕುಮಾರ್, ಮೊಟ್ಟೆತ್ತಡ್ಕ ಡಿಸಿಆರ್ ಕೇಂದ್ರದ ನಿರ್ದೇಶಕ ಡಾ.ಜೆ.ದಿನಕರ್ ಅಡಿಗರವರುಗಳಿಗೆ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈಯವರು ರೋಟರಿ ಪಿನ್ ತೊಡಿಸಿ ರೋಟರಿಗೆ ಅಧಿಕೃತವಾಗಿ ಬರಮಾಡಿಕೊಂಡರು.


ಕಮ್ಯೂನಿಟಿ ಸರ್ವಿಸ್:
ಕಮ್ಯೂನಿಟಿ ಸರ್ವಿಸ್‌ನಡಿಯಲ್ಲಿ ತಾಲೂಕಿನ ಸುಮಾರು 20 ಅಶಕ್ತ ಕುಟುಂಬಗಳಿಗೆ ನ್ಯೂಟ್ರಿಶಿಯನ್ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾಂಕೇತಿಕವಾಗಿ ಈರ್ವರು ಫಲಾನುಭವಿಗಳಿಗೆ ಈ ಸಂದರ್ಭದಲ್ಲಿ ನ್ಯೂಟ್ರಿಶಿಯನ್ ಆಹಾರ ಸಾಮಾಗ್ರಿಯನ್ನು ವಿತರಿಸಲಾಯಿತು.


ಪಿ.ಎಚ್.ಎಫ್ ಗೌರವ:
ಅಂತರ್ರಾಷ್ಟ್ರೀಯ ಸರ್ವಿಸ್‌ನಡಿಯಲ್ಲಿ ರೋಟರಿ ಫೌಂಡೇಶನ್‌ಗೆ ದೇಣಿಗೆ ನೀಡುವ ಮೂಲಕ ಪ್ರಸ್ತುತ ವರ್ಷ ಈರ್ವರು ಮೇಜರ್ ಡೋನರ್‌ಗಳಾದ ಡಾ.ಶ್ರೀಪತಿ ರಾವ್, ಡಾ.ಶ್ರೀಪ್ರಕಾಶ್ ಬಿ.ರವರನ್ನು, ಪಿ.ಎಚ್.ಎಫ್ ಪದವಿಗೆ ಭಾಜನರಾದ ಡಾ.ಶ್ರೀಪ್ರಕಾಶ್ ಬಿ.ರವರ ಪುತ್ರಿಯರಾದ ಕು|ಪ್ರಾರ್ಥನಾ, ಕು|ಆರಾಧನಾರವರನ್ನು ಮತ್ತು ಪಿ.ಎಚ್.ಎಫ್ ಫ್ಲಸ್ ೨ ಲೆವೆಲ್‌ಗೆ ಭಾಜನರಾದ ಡಾ.ಜೆ.ಸಿ ಆಡಿಗ, ರೋಟರಿ ಫೌಂಡೇಶನ್‌ಗೆ ಮತ್ತಷ್ಟು ದೇಣಿಗೆ ನೀಡಿದ ಮೇಜರ್ ಡೋನರ್ ಪಿಡಿಜಿ ಡಾ.ಭಾಸ್ಕರ್ ಎಸ್.ರವರುಗಳನ್ನು ಗೌರವಿಸಲಾಯಿತು.


ಸನ್ಮಾನ:
2022-23ನೇ ಸಾಲಿನಲ್ಲಿ ಕಾರ್ಯಕ್ರಮಗಳನ್ಬು ಸಮಾಜಕ್ಕೆ ಪರಿಚಯಿಸುತ್ತಾ ಕ್ಲಬ್ ಅನ್ನು ಮತ್ತಷ್ಟು ಉತ್ತುಂಗಕ್ಜೆ ಕೊಂಡೊಯ್ದ ನಿರ್ಗಮನ ಅಧ್ಯಕ್ಷ ಉಮಾನಾಥ್ ಪಿ.ಬಿ ಹಾಗೂ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ ಮತ್ತು ಕ್ಲಬ್ ಮಾಜಿ ಅಧ್ಯಕ್ಷ, 2022-23ನೇ ಸಾಲಿನಲ್ಲಿ ಅಸಿಸ್ಟೆಂಟ್ ಗವರ್ನರ್ ಹುದ್ದೆಯನ್ಬು ನಿಭಾಯಿಸಿದ ಎ.ಜೆ ರೈಯವರನ್ನು ಈ ಸಂದರ್ಭದಲ್ಲಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.


ಜಿಲ್ಲಾ ಸಮಿತಿಗೆ ಆಯ್ಕೆಯಾದವರಿಗೆ ಗೌರವ:
ಕ್ಲಬ್ ಸದಸ್ಯರಾಗಿದ್ದು ಜಿಲ್ಲಾ ಸಮಿತಿಗೆ ಆಯ್ಕೆಯಾಗಿರುವ ಝೇವಿಯರ್ ಡಿ’ಸೋಜ(ವಲಯ ಸೇನಾನಿ), ಸುರೇಶ್ ಶೆಟ್ಟಿ ಕೆ(ವೈಸ್ ಚೇರ್‌ಮ್ಯಾನ್, ಜಿಲ್ಲಾ ಡಿಇಐ), ಶ್ರೀಕಾಂತ್ ಕೊಳತ್ತಾಯ(ವೈಸ್ ಚೇರ್‌ಮ್ಯಾನ್, ಸ್ಕಿಲ್ ಡೆವಲಪ್ಮೆಂಟ್), ಡಾ.ಸುಧಾ(ವೈಸ್ ಚೇರ್‌ಮ್ಯಾನ್, ತಪ್ಪಿಸಬಹುದಾದ ಕುರುಡುತನ), ವಿ.ಜೆ ಫೆರ್ನಾಂಡೀಸ್(ವಯಸ್ಸಾದವರಿಗೆ ಕಾಳಜಿ), ಚಿದಾನಂದ ಬೈಲಾಡಿ(ವೈಸ್ ಚೇರ್‌ಮ್ಯಾನ್, ಧನಾತ್ಮಕ ಆರೋಗ್ಯ ಮತ್ತು ಮಧುಮೇಹ ನಿರ್ವಹಣೆ), ಡಾ.ಶ್ರೀಪ್ರಕಾಶ್(ಪಲ್ಸ್ ಪೋಲಿಯೋ ವಲಯ ಸಂಯೋಜಕರು), ರಫೀಕ್ ಎಂ.ಜಿ(ಕ್ರೈಸಿಸ್ ಮ್ಯಾನೇಜ್ಮೆಂಟ್ ವೈಸ್ ಚೇರ್‌ಮ್ಯಾನ್), ಬಲರಾಂ ಆಚಾರ್ಯ(ಫಂಡ್ ರೈಸಿಂಗ್ ಸಬ್ ಕಮಿಟಿ), ಡಾ.ಅಶೋಕ್ ಪಡಿವಾಳ್(ಪ್ರಾಜೆಕ್ಟ್ ಡಯಾಲಿಸಿಸ್ ಚೇರ್‌ಮ್ಯಾನ್), ಮಧು ನರಿಯೂರು(ಜಿಲ್ಲಾ ಪ್ರಾಜೆಕ್ಟ್ ಮಳೆ ಕೊಯ್ಲು ಯೋಜನೆ), ರಾಮಕೃಷ್ಣ(ಜಿಲ್ಲಾ ಪ್ರಾಜೆಕ್ಟ್ ಬೀಕ್ವೆಸ್ಟ್ ಸೊಸೈಟಿ)ರವರುಗಳನ್ನು ಹೂ ನೀಡಿ ಗುರುತಿಸಲಾಯಿತು.


ಯುವ ಪ್ರತಿಭೆಗಳಿಗೆ ಸನ್ಮಾನ:
ಯೂತ್ ಸರ್ವಿಸ್ ವತಿಯಿಂದ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ವಿಜೇತರಾದ ಮುಕ್ರಂಪಾಡಿ ನಿವಾಸಿ ರವೀಂದ್ರ ರೈ ಮಾದೋಡಿ ಹಾಗೂ ಶ್ರೀಮತಿ ರಾಜಲಕ್ಷ್ಮಿ ದಂಪತಿ ಪುತ್ರಿ ಸಮೃದ್ಧಿ ರೈ, ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ಕ್ಲಬ್ ಸದಸ್ಯ ಮನೋಜ್ ಟಿ.ವಿರವರ ಪುತ್ರ ವಿಪುಲ್ ಮನೋಜ್, ಕ್ಲಬ್ಬಿನ ಮಾಜಿ ಕಾರ್ಯದರ್ಶಿ ಕಿಶನ್ ಬಿ.ವಿರವರ ಪುತ್ರಿ ಅನಘ, ನಿಕಟಪೂರ್ವ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ.ರವರ ಪುತ್ರಿ ಪ್ರಾರ್ಥನಾ ಬಿ, ಕ್ಲಬ್ ಸದಸ್ಯೆ ಪ್ರೀತಾ ಹೆಗ್ಡೆರವರ ಪುತ್ರ ಪ್ರಥಮ್ ಜೆರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಿ.ಆರ್.ಆರ್ ಆಗಿ ಆಯ್ಕೆಯಾದ ರಾಹುಲ್ ಆಚಾರ್ಯರವರನ್ನು ಅಭಿನಂದಿಸಲಾಯಿತು. ಡಿಸ್ಟಿಂಕ್ಷನ್ ವಿಜೇತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಿದ ಕ್ಲಬ್ ಮಾಜಿ ಅಧ್ಯಕ್ಷರಾದ ಗಂಗಾಧರ್ ರೈಯವರಿಗೆ ಹೂ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಅಧ್ಯಕ್ಷ ಜೈರಾಜ್ ಭಂಡಾರಿಯವರ ಪತ್ನಿ ತಾರಾ ಜೆ.ಭಂಡಾರಿ ಉಪಸ್ಥಿತರಿದ್ದರು. ಕು|ಪ್ರಾರ್ಥನಾ ಹಾಗೂ ಕು|ಆರಾಧನಾರವರು ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಉಮಾನಾಥ್ ಪಿ.ಬಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸುಜಿತ್ ಡಿ.ರೈ ವಂದಿಸಿದರು. ನಿರ್ಗಮನ ಕಾರ್ಯದರ್ಶಿ ಡಾ.ಶ್ರೀಪ್ರಕಾಶ್ ಬಿ. ವರದಿ ಮಂಡಿಸಿದರು. ಪದಪ್ರದಾನ ಅಧಿಕಾರಿ ಹಾಗೂ ಮುಖ್ಯ ಅತಿಥಿಗಳ ಪರಿಚಯನ್ನು ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಚಿದಾನಂದ ಬೈಲಾಡಿ, ದಾಮೋದರ್, ಗೋವಿಂದಪ್ರಕಾಶ್ ಸಾಯ, ಸುಬ್ಬಪ್ಪ ಕೈಕಂಬರವರು ನೀಡಿದರು. ಕ್ಲಬ್ ಸರ್ವಿಸ್ ನಿರ್ದೇಶಕ ಡಾ.ಶ್ರೀಪ್ರಕಾಶ್ ಬಿ, ವೊಕೇಶನಲ್ ಸರ್ವಿಸ್ ನಿರ್ದೇಶಕ ಝೇವಿಯರ್ ಡಿ’ಸೋಜ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೋಮಶೇಖರ್ ರೈ ಇ, ಅಂತರ್ರಾಷ್ಟ್ರೀಯ ಸೇವೆ ನಿರ್ದೇಶಕ ವಿ.ಜೆ ಫೆರ್ನಾಂಡೀಸ್,ಯೂತ್ ಸರ್ವಿಸ್ ನಿರ್ದೇಶಕ ಪರಮೇಶ್ವರ ಗೌಡ, ಸಾರ್ಜಂಟ್ ಎಟ್ ಆಮ್ಸ್೯ ಅಶೋಕ್ ಕುಮಾರ್ ಬಲ್ನಾಡುರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ಸದಸ್ಯ ಸುರೇಶ್ ಶೆಟ್ಟಿ ಹಾಗೂ ಕಿಶನ್ ಬಿ.ವಿ ಕಾರ್ಯಕ್ರಮ ನಿರೂಪಿಸಿದರು.



ಪದಪ್ರದಾನ…
ನೂತನ ಅಧ್ಯಕ್ಷ ನೋಣಾಲು ಜೈರಾಜ್ ಭಂಡಾರಿ, ಕಾರ್ಯದರ್ಶಿ ಸುಜಿತ್ ಡಿ.ರೈ, ಕೋಶಾಧಿಕಾರಿ ಎಂ.ಸಂಕಪ್ಪ ರೈ, ಉಪಾಧ್ಯಕ್ಷ ಹಾಗೂ ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್ ಯು, ನಿಕಟಪೂರ್ವ ಅಧ್ಯಕ್ಷ ಉಮಾನಾಥ್ ಪಿ.ಬಿ, ಜೊತೆ ಕಾರ್ಯದರ್ಶಿ ದೀಪಕ್ ಕೆ.ಪಿ, ಬುಲೆಟಿನ್ ಎಡಿಟರ್ ಕೆ.ಬಾಲಕೃಷ್ಣ ಆಚಾರ್ಯ, ಸಾರ್ಜಂಟ್ ಎಟ್ ಆಮ್ಸ್೯ ಅಶೋಕ್ ಕುಮಾರ್ ಬಲ್ನಾಡು, ಎಕ್ಸಿಕ್ಯೂಟಿವ್ ಕಾರ್ಯದರ್ಶಿ ಶ್ರೀಕಾಂತ್ ಕೊಳತ್ತಾಯ, ನಿರ್ದೇಶಕರಾದ ಕ್ಲಬ್ ಸರ್ವಿಸ್ ಡಾ.ಶ್ರೀಪ್ರಕಾಶ್ ಬಿ, ಕಮ್ಯೂನಿಟಿ ಸರ್ವಿಸ್ ಸೋಮಶೇಖರ್ ರೈ ಇ, ವೊಕೇಶನಲ್ ಸರ್ವಿಸ್ ಝೇವಿಯರ್ ಡಿ’ಸೋಜ, ಇಂಟರ್‌ನ್ಯಾಷನಲ್ ಸರ್ವಿಸ್ ವಿ.ಜೆ ಫೆರ್ನಾಂಡೀಸ್, ಯೂತ್ ಸರ್ವಿಸ್ ಪರಮೇಶ್ವರ ಗೌಡ, ಚೇರ್‌ಮ್ಯಾನ್‌ಗಳಾದ ಪಲ್ಸ್ ಪೋಲಿಯೋ ಡಾ.ಸೀತಾರಾಮ್ ಭಟ್, ಟಿ.ಆರ್.ಎಫ್ ಡಾ.ಶ್ಯಾಮ್ ಬಿ, ಮೆಂಬರ್‌ಶಿಪ್ ಡೆವಲಪ್ಮೆಂಟ್ ಎಂ.ಜಿ ಅಬ್ದುಲ್ ರಫೀಕ್, ಟೀಚ್ ಸುರೇಶ್ ಶೆಟ್ಟಿ, ವಿನ್ಸ್ ಕಿಶನ್ ಬಿ.ವಿ, ವೆಬ್ ಗುರುರಾಜ್ ಕೊಳತ್ತಾಯ, ಸಿ.ಎಲ್.ಸಿ.ಸಿ ಹೆರಾಲ್ಡ್ ಮಾಡ್ತಾ, ಎಥಿಕ್ಸ್ ಸತೀಶ್ ನಾಯಕ್ ಎಂ, ಪಬ್ಲಿಕ್ ಇಮೇಜ್ ದಿನೇಶ್ ಭಟ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್ ಲೋವಲ್ ಮೇವಡ, ಪ್ರೋಗ್ರಾಂ ಕಮಿಟಿ ಸುಬ್ಬಪ್ಪ ಕೈಕಂಬ, ರೋಟರ್‍ಯಾಕ್ಟ್ ಕ್ಲಬ್ ಪುತ್ತೂರು ಪ್ರೇಮಾನಂದ, ರೋಟರ್‍ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಪ್ರೀತಾ ಹೆಗ್ಡೆ, ರೋಟರ್‍ಯಾಕ್ಟ್ ಕ್ಲಬ್ ಸ್ವರ್ಣ ರಾಜ್ ಗೋಪಾಲ್‌ರವರಿಗೆ ಪದಪ್ರದಾನ ಅಧಿಕಾರಿ ರೋಟರಿ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಕಿಶನ್ ಕುಮಾರ್‌ರವರು ಪದಪ್ರದಾನ ನೆರವೇರಿಸಿದರು.

ಅಧ್ಯಕ್ಷ ನನ್ನ ಪಾಲಿನ ಜವಾಬ್ದಾರಿ…
ಕ್ಲಬ್ ನ 59ನೇ ವರ್ಷದ ಅಧ್ಯಕ್ಷನಾಗಿ ಆಯ್ಕೆಯಾಗುವ ಭಾಗ್ಯ ನನಗೆ ಒಲಿದಿದೆ. ಅಧ್ಯಕ್ಷ ಹುದ್ದೆ ಅಧಿಕಾರ ಎಂದು ಭಾವಿಸದೆ ಅದು ನನ್ನ ಪಾಲಿನ ಜವಾಬ್ದಾರಿ ಎಂದು ತಿಳಿದು ನ್ಯಾಯ-ನಿಷ್ಠೆಯಿಂದ ಕ್ಲಬ್‌ನ ಭರವಸೆಯನ್ನು ಈಡೇರಿಸುತ್ತೇನೆ. ಕ್ಲಬ್ ಈಗಾಗಲೇ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಮಹಾವೀರ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಇದೀಗ ಕಣ್ಣಿನ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಜನಮಾನಸದಲ್ಲಿ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪ್ರಾಜೆಕ್ಟ್‌ಗಳಾದ ಅಂಗನವಾಡಿಗಳ ಅಭಿವೃದ್ಧಿ, ಮಳೆ ನೀರು ಕೊಯ್ಲು ಯೋಜನೆಯನ್ನು ಕ್ಲಬ್ ಸದಸ್ಯರ ಸಹಕಾರದಿಂದ ನಿರಂತರವಾಗಿ ತೊಡಗಿಸಿಕೊಳ್ಳಲಿದ್ದೇವೆ.
-ಜೈರಾಜ್ ಭಂಡಾರಿ, ನೂತನ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು

LEAVE A REPLY

Please enter your comment!
Please enter your name here