ಕಡಬ: ಪಂಜ ರಸ್ತೆಯ ಮೆಸ್ಕಾಂ ಕಚೇರಿ ಗೇಟಿನ ಸಮೀಪ ಮಾಂಸದ ತ್ಯಾಜ್ಯ ಸೇರಿದಂತೆ ಕೊಳೆತ ತರಕಾರಿ, ಅನ್ನ ಪದಾರ್ಥಗಳನ್ನು ರಸ್ತೆ ಬದಿ ಎಸೆಯಲಾಗಿದ್ದು, ಇದರಿಂದ ಆ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಳೆತ ತ್ಯಾಜ್ಯಗಳು ಬೀದಿ ನಾಯಿಗಳಿಗೆ ಆಹಾರವಾಗಿದ್ದು ಪ್ಲಾಸ್ಟಿಕ್ ತೊಟ್ಟೆ ಸಹಿತ ಮಾರ್ಗಕ್ಕೆ ಎಳೆದು ತಂದು ಚಲ್ಲಾಪಿಲ್ಲಿಯಾಗಿ ಹರಡಿದ ಕಾರಣ ದುರ್ವಾಸನೆ ಮಿತಿ ಮೀರಿದೆ. ಸ್ಥಳೀಯ ಮನೆಯವರು, ಪಾದಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡೇ ಓಡಾಟ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮೆಸ್ಕಾಂ ಕಚೇರಿಯ ಕೆಳಗಿನ ಗೇಟಿನಿಂದ ತೋಟಗಾರಿಕಾ ಇಲಾಖೆಯ ಕಟ್ಟಡ ಇರುವ ಜಾಗದ ವರೆಗೆ ಚರಂಡಿ ಮತ್ತು ರಸ್ತೆಯ ಬದಿಯಲ್ಲೇ ಪ್ಲಾಸ್ಟಿಕ್ ಹಾಗೂ ಗೋಣಿ ಚೀಲದಲ್ಲಿ ಕೊಳೆತ ತ್ಯಾಜ್ಯಗಳನ್ನು ಎಸೆದು ಹೋಗುತ್ತಿದ್ದಾರೆ.
ಇದೇ ಮೊದಲಲ್ಲ: ಈ ರಸ್ತೆಯಲ್ಲಿ ತ್ಯಾಜ್ಯಗಳನ್ನು ಎಸೆಯುವುದು ಇದೇ ಮೊದಲಲ್ಲ, ಈ ಹಿಂದೆಯೂ ಹಲವಾರು ಬಾರಿ ದುರ್ನಾತ ಬೀರುವ ತ್ಯಾಜ್ಯಗಳನ್ನು ಎಸೆದಿದ್ದು ಪಂಚಾಯತ್ ಸ್ವಚ್ಚತಾಗಾರರು ತ್ಯಾಜ್ಯಗಳನ್ನು ತೆರವುಗೊಳಿಸಿದ್ದಾರೆ.
ಬೈಕ್-ವಾಹನಗಳಲ್ಲಿ ಬಂದು ಪ್ಲಾಸ್ಟಿಕ್‌ನಲ್ಲಿ ಕಸ ಕಟ್ಟಿ ಬಿಸಾಡುವ ದುರುಳರನ್ನು ಪತ್ತೆ ಹಚ್ಚುವ ಸಲುವಾಗಿ ಪಟ್ಟಣ ಪಂಚಾಯತ್ ಸಿಸಿ ಟಿವಿ ಅಳವಡಿಸಬೇಕು, ಅಲ್ಲದೆ ಕಸ ಎಸೆದವರಿಂದಲೇ ತೆರವುಗೊಳಿಸಿ ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ತ್ಯಾಜ್ಯಗಳನ್ನು ಈಗಾಗಲೇ ಕಡಬ ಪಟ್ಟಣ ಪಂಚಾಯತ್ ಸ್ವಚ್ಚತಾಗಾರರು ತೆರವುಗೊಳಿಸಿದ್ದಾರೆ.