ಪುತ್ತೂರು:ವಿಟ್ಲದಲ್ಲಿ ಸಿಪಿಸಿಆರ್‌ಐ ಸಂಸ್ಥೆಯೊಂದಿದೆ, ಅದು ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ , ಆ ಸಂಸ್ಥೆಯಲ್ಲಿ ಕೃಷಿಕರಿಗಾಗಿ ಏನು ಕೆಲಸಗಳು ನಡೆಯುತ್ತಿದೆ ಎಂಬುದು ಇಲ್ಲಿನ ಬಹುತೇಕ ಕೃಷಿಕರಿಗೆ ಗೊತ್ತಿಲ್ಲ , ಸಂಸ್ಥೆ ಕೃಷಿಕರ ಜೊತೆ ಬೆರೆಯುವುದೇ ಇಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದ್ದಾರೆ.
ಉಪ್ಪಿನಂಗಡಿಯಲ್ಲಿ ನಡೆದ ಹಲಸು ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು ಕೃಷಿಗೆ ಉತ್ತೇಜನ ನೀಡುವ ಕೆಲಸ ಎಲ್ಲೆಡೆ ನಡೆಯುತ್ತಿದೆ. ವಿವಿಧ ಸಂಘ ಸಂಸ್ಥೆಗಳು ಕೃಷಿಕರ ಜೊತೆ ಸೇರಿಕೊಂಡು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ . ಆಧುನಿಕ ಕೃಷಿ ಚಟುವಟಿಕೆಯ ಬಗ್ಗೆ, ಹೊಸ ಹೊಸ ತಳಿಗಳ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕಿದೆ. ನಮ್ಮೂರಲ್ಲೇ ಕೇಂದ್ರ ಸರಕಾರದ ಅಧೀನದಲ್ಲಿರುವ ಸಿಪಿಸಿಆರ್‌ಐ ಸಂಸ್ಥೆಯೊಂದಿದೆ ಅವರು ಕೃಷಿ ವಿಚಾರದಲ್ಲಿ ಸಂಶೋದನೆ ಮಾಡುತ್ತಿದ್ದಾರೆ, ಆದರೆ ಅವರು ಏನು ಸಂಶೋಧನೆ ಮಾಡಿದ್ದಾರೆ? ಅವರು ಸಂಶೋಧನೆ ಮಾಡಿದ ತಳಿಗಳು ಯಾವುದು? ಅದು ಇಲ್ಲಿಗೆ ಯೋಗ್ಯವಾದ ತಳಿಗಳೇ ಎಂಬುದರ ಬಗ್ಗೆ ಬಹುತೇಕ ಕೃಷಿಕರಿಗೆ ಮಾಹಿತಿಯೇ ದೊರೆಯುತ್ತಿಲ್ಲ ಎಂದು ಹೇಳಿದರು.
ಅಡಿಕೆ, ತೆಂಗು ಮತ್ತು ಕೊಕ್ಕೋ ಬೆಳೆಗಳ ಸಂಶೋದನೆಗೆಂದೇ ಸರಕಾರ ಸಿಪಿಸಿಆರ್‌ಐ ಸಂಸ್ಥೆಯನ್ನು ಹುಟ್ಟು ಹಾಕಿದೆ ಆದರೆ ಅವರ ಕಾರ್ಯಚಟುವಟಿಕೆಗಳ ಬಗ್ಗೆಯೂ ಇಲ್ಲಿನ ಕೃಷಿಕರಿಗೆ ಮಾಹಿತಿ ದೊರೆಯಬೇಕಿದೆ. ಇಲ್ಲಿರುವ ಎಲ್ಲಾ ಸರಕಾರಿ ಸಂಸ್ಥೆಗಳು ಜನರ ಹಿತಕ್ಕಾಗಿ ಸ್ಥಾಪಿತಗೊಂಡಿದೆ. ಅಡಿಕೆ, ತೆಂಗು ಮತ್ತು ಕೊಕ್ಕೋ ಬೆಳೆಯಲ್ಲಿ ಯಾವ ಸಂಶೋದನೆ ನಡೆಸಲಾಗಿದೆ. ಅಡಿಕೆಯಲ್ಲಿ ಹೊಸ ತಳಿಗಳು ಯಾವುದು ಎಂಬುದನ್ನು ಕೃಷಿಕರಿಗೆ ಮಾಹಿತಿ ನೀಡಬೇಕಿದೆ ಮತ್ತು ಕೃಷಿ ಉತ್ತೇಜಿತ ಕಾರ್ಯಕ್ರಮಗಳಲ್ಲಿ ಆ ಸಂಸ್ಥೆಯವರು ಭಾಗವಹಿಸುವ ಮೂಲಕ ತಮ್ಮ ಸಂಶೋಧಿತ ವಿಚಾರಗಳ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ಮಾಡಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ಹೇಳಿದರು.