ಕಲಿಕೆ ನಿರಂತರ ಪ್ರಕ್ರಿಯೆ, ಸಮಯಪ್ರಜ್ಞೆಯೊಂದಿಗೆ ಭವಿಷ್ಯ ಕಂಡುಕೊಳ್ಳಿ : ನಾಯರ್ಕೆರೆ ಅಭಿಮತ
ಕಾವು ಬುಶ್ರಾ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಮಂತ್ರಿಮಂಡಲದ ಉದ್ಘಾಟನೆ ಹಾಗೂ ಪ್ರಮಾಣವಚನ ಕಾರ್ಯಕ್ರಮ ಜು.11 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ಕೆರೆ ಉದ್ಘಾಟಿಸಿ ಮಾತನಾಡಿ, “ಕಲಿಕೆ ಎನ್ನುವುದು ಬದುಕಿನಲ್ಲಿ ನಿರಂತರವಾದ ಪ್ರಕ್ರಿಯೆ. ಶೈಕ್ಷಣಿಕ ಅವಧಿಯ ಕಲಿಕೆಯಲ್ಲಿ ಯಶಸ್ಸು ಸಾಧಿಸಬೇಕಿದ್ದರೆ ಸಮಯದ ಬೆಲೆ ಅರಿತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಒಳ್ಳೆಯ ಸಂಗತಿಗಳ ಕಡೆ ಆಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಹೇಳಿದರು.
ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ರಿಝ್ವಾನ್ ನೆಟ್ಟಾರು , ಸ್ಪೀಕರ್ ಆಗಿ ಫಾತಿಮತ್ ಶಬಾ, ಉಪ ನಾಯಕಿಯಾಗಿ ಫಾತಿಮತ್ ಶೈಮಾ, ಉಪಸಭಾಪತಿಯಾಗಿ ಫಾತಿಮತ್ ಅಶ್ಫಾನ, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಮಹಮ್ಮದ್ ಖಲಂದರ್ ಹಾಗೂ ಇನ್ನಿತರ ಮಂತ್ರಿಗಳಾಗಿ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯಶ್ವಿತ್ ಕಾಳಂಮನೆ ಮಾತನಾಡಿ, “17 ವರ್ಷದ ಹಿಂದೆ ನಾನು ಕೂಡಾ ಇದೇ ಶಾಲೆಯಲ್ಲಿ ಶಾಲಾ ನಾಯಕನಾಗಿ ಆಯ್ಕೆಯಾಗಿದ್ದೆ. ಸಾರ್ವತ್ರಿಕ ಚುನಾವಣೆಯ ರೀತಿಯಲ್ಲಿ ಅಂದೂ ಚುನಾವಣೆ ನಡೆದಿತ್ತು. ಇಂದು ಮಾಧ್ಯಮ ಸಂಸ್ಥೆಯಲ್ಲಿ ಹಾಗೂ ಸಾಮಾಜಿಕವಾಗಿ ನಾನು ಗುರುತಿಸಿಕೊಂಡಿದ್ದಲ್ಲಿ ಆಗಿನ ಶಾಲಾ ನಾಯಕತ್ವವೇ ಕಾರಣ” ಎಂದು ಮೆಲುಕು ಹಾಕಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಂತ್ರಿಮಂಡಲದ ಸದಸ್ಯರಿಗೆ ಶುಭ ಹಾರೈಸಿದರು.
ಶಾಲಾ ಆಡಳಿತ ನಿರ್ದೇಶಕ ಬದ್ರುದ್ದಿನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ದೀಪಿಕಾ ಚಾಕೋಟೆ ಸ್ವಾಗತಿಸಿದರು. ಶೈಕ್ಷಣಿಕ ಸಲಹೆಗಾರ ಕೃಷ್ಣಪ್ರಸಾದ್ ವಂದಿಸಿದರು. ಶಾಲಾ ಮಂತ್ರಿಮಂಡಲದ ಚುನಾವಣಾಧಿಕಾರಿ ಉಮೇಶ್ ವಿದ್ಯಾರ್ಥಿ ಸರಕಾರದ ವಿವರ ನೀಡಿದರು. ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು. ದುರ್ಗಾಕುಮಾರ್ ನಾಯರ್ಕೆರೆಯವರನ್ನು ಶಾಲಾ ಆಡಳಿತ ಮಂಡಳಿಯ ವತಿಯಿಂದ ಬದ್ರುದ್ದಿನ್ರವರು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಿದರು.
ಲಂಚ, ಭ್ರಷ್ಟಾಚಾರ ವಿರೋಧಿ ಆಂದೋಲನದ ಜಾಗೃತಿ ಫಲಕ ಹಸ್ತಾಂತರ – ಪ್ರತಿಜ್ಞೆ ಸ್ವೀಕಾರ
ಇದೇ ಸಂದರ್ಭ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಸುಳ್ಯ ಸುದ್ದಿ ಬಿಡುಗಡೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ ಸುದ್ದಿ ಜನಾಂದೋಲನ ವೇದಿಕೆ ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಲಂಚ ಭ್ರಷ್ಟಾಚಾರ ವಿರುದ್ಧದ ಆಂದೋಲನದ ಬಗ್ಗೆ ಮಾತನಾಡಿದರು. ನೂತನ ವಿದ್ಯಾರ್ಥಿ ನಾಯಕ ಮಹಮ್ಮದ್ ರಿಝ್ವಾನ್ ನೆಟ್ಟಾರುರವರಿಗೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದುರ್ಗಾಕುಮಾರ್ ನಾಯರ್ಕೆರೆಯವರಿಂದ ಫಲಕ ಹಸ್ತಾಂತರಿಸಿದರು. ನಂತರ ಲಂಚ ಭ್ರಷ್ಟಾಚಾರದ ವಿರೋಧಿ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.