ಬೆಂಗಳೂರು:ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಪೊಲೀಸ್ ಬೀಟ್ ಮಾದರಿಯಲ್ಲಿ `ಕಂದಾಯ ಬೀಟ್’ ಆರಂಭಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಪರಿಷತ್‌ನಲ್ಲಿ ಹೇಳಿದರು.ಕೆಲ ಭಾಗಗಳಲ್ಲಿ ಪಟ್ಟಭದ್ರರು ಭೂಮಿ ಕಬಳಿಸಿದ್ದಾರೆ. ಕೆಲವು ಕಡೆ ತಹಶೀಲ್ದಾರ್ ಸೇರಿದಂತೆ ಕಂದಾಯ ಅಧಿಕಾರಿಗಳು,ಕೆಲವೊಂದು ವಕೀಲರ ಸಹಕಾರದಲ್ಲಿಯೇ ಭೂ ಕಬಳಿಕೆ ನಡೆದಿದೆ.ಇದಕ್ಕೆ ವ್ಯವಸ್ಥೆಯ ಲೋಪ ಕಾರಣ.ಇರುವ ಕಾನೂನು ಪ್ರಬಲವಾಗಿದ್ದರೂ, ದುರುಪಯೋಗ ಮಾಡಲಾಗಿದೆ.ಬೀಟ್ ವ್ಯವಸ್ಥೆ ಜಾರಿಯಾದರೆ ನೇತೃತ್ವ ವಹಿಸುವ ಪ್ರತಿಯೊಬ್ಬರಿಗೂ ಮೂರರಿಂದ ಆರು ತಿಂಗಳು ಹೊಣೆಗಾರಿಕೆ ನಿಗದಿ ಮಾಡಲಾಗುವುದು.ಒತ್ತುವರಿಯಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರ ನೀಡಿದರು.
ಕಂದಾಯ ಭೂಮಿ ಒತ್ತುವರಿ ಕುರಿತು ಬಿಜೆಪಿ ಸದಸ್ಯ ವೈ.ಎ.ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಬುಧವಾರ ಉತ್ತರಿಸಿದ ಅವರು, ಬೆಂಗಳೂರು ನಗರ ವ್ಯಾಪ್ತಿಯಲ್ಲೇ 38,947 ಎಕರೆ, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ 3,989 ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದೆ.15,952 ಪ್ರಕರಣಗಳು ದಾಖಲಾಗಿವೆ. 7,147 ಎಕರೆ ಮರಳಿ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳ ಒತ್ತುವರಿ ತಡೆಯಲು ಪ್ರಮುಖ ಅಧಿಕಾರಿಗಳನ್ನು ಒಳಗೊಂಡ ಬೀಟ್ ವ್ಯವಸ್ಥೆ ಮಾಡಲಾಗುವುದು.ಒತ್ತುವರಿ ತೆರವುಗೊಳಿಸಲು ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ ರಚಿಸಲಾಗಿದೆ.ಕಾಲಮಿತಿಯ ಒಳಗೆ ತೆರವು ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.