ಪುತ್ತೂರು: ತ್ರಿಜಯ್ ಪ್ರೊಡಕ್ಷನ್ ಲಾಂಛನದೊಂದಿಗೆ ತ್ರಿಶೂಲ್ ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಪುಳಿಮುಂಚಿ’ ತುಳು ಸಿನಿಮಾ ಅಕ್ಟೋಬರ್ 27ರಂದು ತೆರೆ ಕಾಣಲಿದೆ. ಮೂಲತಃ ಕೋಡಿಂಬಾಡಿಯ ಮಠಂತಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ಎಚ್ಪಿಆರ್ ಫೌಂಡೇಶನ್ ಮುಖ್ಯಸ್ಥ ಹರಿಪ್ರಸಾದ್ ರೈ ನಿರ್ಮಾಪಕರಾಗಿರುವ ಪುಳಿ ಮುಂಚಿ’ ಸಿನಿಮಾ ತುಳು ಸಿನಿಪ್ರಿಯರನ್ನು ಮನರಂಜಿಸಲು ಸಿದ್ಧವಾಗಿದ್ದು ಕರಾವಳಿಯಾದ್ಯಂತ ಅಕ್ಟೋಬರ್ 27ರಂದು ತೆರೆಗೆ ಅಪ್ಪಳಿಸಲಿದೆ.
ತ್ರಿಜಯ್ ಪ್ರೊಡಕ್ಷನ್ಸ್ನ ದೇವಿಪ್ರಸಾದ್ ಜಿ.ಎಸ್ ಮತ್ತು ತನ್ಯ ಕ್ರಿಯೇಶನ್ಸ್ನವರು ಸಹ ನಿರ್ಮಾಪಕರಾಗಿದ್ದು ವಿನೀತ್ ಕುಮಾರ್, ಸಮತಾ ಅಮೀನ್, ರಾಹುಲ್ ಅಮೀನ್, ಆರಾಧ್ಯಾ ಶೆಟ್ಟಿ, ಸ್ವರಾಜ್ ಶೆಟ್ಟಿ, ನವೀನ್ ಡಿ.ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಉಮೇಶ್ ಮಿಜಾರ್, ಅದ್ವಿಕಾ ಶೆಟ್ಟಿ ಸಹಿತ ೨೫ಕ್ಕೂ ಅಧಿಕ ಮಂದಿ ತಾರಾಗಣದಲ್ಲಿದ್ದಾರೆ. ರಾಜೇಶ್ ಬಂದ್ಯೋಡ್, ಹರೀಶ್ ನಾಯ್ಕ ಸಿ.ಬಿಜೈ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ, ಮಯೂರ್ ಆರ್.ಶೆಟ್ಟಿ ಛಾಯಾಗ್ರಹಣ ನಡೆಸಿ ಸಾಹಿತ್ಯ ಒದಗಿಸಿದ್ದಾರೆ. `ಪುಳಿಮುಂಚಿ’ ಸಿನಿಮಾ ಕುಟುಂಬ ಒಟ್ಟಾಗಿ ಕುಳಿತು ನೋಡುವ ಸಿನಿಮಾವಾಗಿದ್ದು ಹಾಸ್ಯದ ಜತೆ ಕಥೆ, ರಸಭಾವ, ಫೈಟಿಂಗ್ ಇದೆ. ಥಿಯೇಟರ್ ಸಮಸ್ಯೆಯಿಂದ ಚಿತ್ರದ ಬಿಡುಗಡೆ ಮುಂದೂಡಲ್ಪಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಡುಗಡೆ ದಿನಾಂಕವನ್ನು ತಿಂಗಳ ಮುಂಚಿತವಾಗಿ ಘೋಷಿಸಲಾಗಿದೆ.
ವರ್ಣರಂಜಿತ ಟೀಸರ್:
`ಪುಳಿಮುಂಚಿ’ ಚಿತ್ರದ ವರ್ಣರಂಜಿತ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಬಿಗ್ ಸಿನಿಮಾಸ್ನಲ್ಲಿ ಜರಗಿತು. ವಿಧಾನಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಮಾತನಾಡಿ, ಚಿತ್ರದ ಟೀಸರ್ ಹಾಗೂ ಪೋಸ್ಟರ್ ಅತ್ಯುತ್ತಮವಾಗಿ ಮೂಡಿ ಬಂದಿದ್ದು, ಚಿತ್ರ ಯಶಸ್ಸು ಗಳಿಸುವುದರಲ್ಲಿ ಸಂದೇಹವಿಲ್ಲ. ನಾನೂ ಸಣ್ಣ ಪಾತ್ರವೊಂದರಲ್ಲಿ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದರು. ಪಮ್ಮಿ ಕೊಡಿಯಾಲ್ಬೈಲ್, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್., ಪೂರ್ಣಿಮಾ, ಮೇಘನಾಥ ಶೆಟ್ಟಿ, ನಟ ರವಿ ರಾಮಕುಂಜ ಉಪಸ್ಥಿತರಿದ್ದರು.