ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ ಕನ್ನಡಭವನ ನಿರ್ಮಾಣಕ್ಕೆ ಜಮೀನು ಮಂಜೂರು

0

ಪುತ್ತೂರು: ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಪುತ್ತೂರು ಕಸಬಾ ಗ್ರಾಮದ ಕೋಟೆಚಾ ಸಭಾಂಗಣದ ಹಿಂಭಾಗದಲ್ಲಿರುವ ಮೌಲಾನ ಆಜಾದ್ ಶಾಲೆಯ ಬಳಿ 9 ಸೆಂಟ್ಸ್ ಜಮೀನನ್ನು ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಹೆಸರಿನಲ್ಲಿ ಮಂಜೂರು ಮಾಡಿದ್ದಾರೆ.
2022ರ ಜೂನ್‌ನಲ್ಲಿ ಪ್ರಾರಂಭವಾಗಿದ್ದ ಈ ಪ್ರಕ್ರಿಯೆಯು ಸಹಾಯಕ ಆಯುಕ್ತರ ಕಚೇರಿ, ತಹಸಿಲ್ದಾರ್ ಕಚೇರಿ, ಭೂಮಾಪನ ಕಚೇರಿ, ನಗರ ಸಭೆ, ಗ್ರಾಮ ಚಾವಡಿ, ಗ್ರಾಮ ಲೆಕ್ಕಿಗರ ಕಚೇರಿಯ ಸಿಬ್ಬಂದಿಗಳು ಯಾ ಅಧಿಕಾರಿಗಳು ಯಾವುದೇ ರೀತಿಯಲ್ಲಿ ಲಂಚಕ್ಕೆ ಬೇಡಿಕೆ ಅಥವಾ ಕಡತ ವಿಲೆಯಲ್ಲಿ ಅಸಡ್ಡೆ, ದುರ್ವರ್ತನೆ ತೋರದೆ ನಗುಮೊಗದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನ ನಿರ್ಮಾಣಕ್ಕೆ ಜಾಗ ಮಂಜೂರಾಗುವಲ್ಲಿ ಸಹಕರಿಸಿದ್ದಾರೆ.
ಜಮೀನು ಮಂಜೂರಾದ ಹಿನ್ನೆಲೆ ಪುತ್ತೂರು ಉಮೇಶ್ ನಾಯಕ್ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಫೆಬ್ರವರಿ 2022ರಲ್ಲಿ ಪದಸ್ವೀಕಾರ ಮಾಡುವ ಸಮಯದಲ್ಲಿ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಪರಿಷತ್ತಿನ ಸದಸ್ಯರಾದ ಡಾ.ಸುಧಾ ರಾವ್ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ವಿಳಾಸ ಇಲ್ಲ ಅದಕ್ಕೊಂದು ಶಾಶ್ವತವಾದ ವಿಳಾಸವನ್ನು ಕಲ್ಪಿಸಿ ಕೊಡುವಂತೆ ಅಂದಿನ ಶಾಸಕರಾದ ಸಂಜೀವ ಮಠoದೂರು ಅವರ ಗಮನ ಸೆಳೆದಿದ್ದರು. ಸ್ಥಳದಲ್ಲಿಯೇ ಸಾಹಿತ್ಯ ಪರಿಷತ್ತಿಗೆ ಸ್ಥಳವನ್ನು ಮಂಜೂರು ಮಾಡುವ ಭರವಸೆಯನ್ನು ಶಾಸಕರು ನೀಡಿ ಸ್ಥಳವನ್ನು ತೋರಿಸಿ ಅಧಿಕಾರಿಗಳಿಗೆ ಜಮೀನು ಮಂಜೂರು ಮಾಡುವಂತೆ ಸೂಚಿಸಿದ್ದರು.
ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಸುಮಾರು 30 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುತ್ತದೆ. ವಿಠಲ ಪುತ್ತೂರು, ಡಾ.ತಾಳ್ತಾಜೆ ವಸಂತ್ ಕುಮಾರ್, ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್, ಪ್ರೊ.ವಿ ಬಿ ಆರ್ತಿಕಜೆ, ಜಿ.ಎಲ್ ಆಚಾರ್ಯ, ಎನ್ ಸುಬ್ರಮಣ್ಯಂ, ಡಾ.ವರದರಾಜ ಚಂದ್ರಗಿರಿ, ಬಿ ಐತಪ್ಪ ನಾಯ್ಕ್ ಮುಂತಾದವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆಯನ್ನು ನೀಡಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೆಳೆಸಿದ್ದಾರೆ.
ಇದೀಗ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಒಂಬತ್ತನೇ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ಸಾಹಿತ್ಯ ಪರಿಷತ್ತಿಗೆ ಒಂಬತ್ತು ಸೆಂಟ್ಸ್ ಜಾಗವನ್ನು ಮಂಜೂರು ಮಾಡುವಲ್ಲಿ ಯಶಸ್ವಿಯಾಗಿ ಪರಿಷತ್ತಿಗೆ ಒಂದು ಶಾಶ್ವತವಾದ ಸೂರನ್ನು ಒದಗಿಸುವ ನಿಟ್ಟಿನಲ್ಲಿ ಬಹಳ ಶ್ರಮ ವಹಿಸಿದ್ದಾರೆ. ಇವರು ಪರಿಷತ್ತಿನ ಅಧ್ಯಕ್ಷರಾದ ಬಳಿಕ ಅನೇಕ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಾಲೂಕಿನಲ್ಲಿರುವ ಎಲ್ಲಾ ಹಿರಿಯ ಕಿರಿಯ ಸಾಹಿತಿಗಳನ್ನು ಹಾಗೂ ಸಾಹಿತ್ಯ ಬಳಗಗಳನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಒಂದು ವರ್ಷದಲ್ಲಿ ನೂರಕ್ಕೂ ಅಧಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇವುಗಳಲ್ಲಿ ವಿವೇಕಾನಂದ ಐ.ಎ.ಎಸ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಕನ್ನಡದಲ್ಲೂ ಐ.ಎ.ಎಸ್ ಪರೀಕ್ಷೆಯನ್ನು ಬರೆಯಬಹುದು ಎಂಬ ಅಭಿಯಾನದ 40 ಕಾರ್ಯಗಾರವನ್ನು ನಡೆಸಿ ಸುಮಾರು 10,000 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಮಾಹಿತಿ ನೀಡುವಲ್ಲಿ ಸಫಲರಾಗಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗ್ರಾಮ ಪಂಚಾಯತ್ ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಸಹಯೋಗದೊಂದಿಗೆ ಅನಿವಾಸಿ ಭಾರತೀಯರಾದ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ ಅವರ ಮಹಾಪ್ರಾಯೋಜಕತ್ವದಲ್ಲಿ ಸಾಹಿತ್ಯದ ನಡೆಗೆ ಗ್ರಾಮದ ಕಡೆಗೆ ಎಂಬ ಘೋಷವಾಕ್ಯದಲ್ಲಿ ಗ್ರಾಮ ಗ್ರಾಮದಲ್ಲೂ ಸಾಹಿತ್ಯ ಸಂಭ್ರಮ ಎಂಬ ಸರಣಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಹಿತ್ಯವನ್ನು ಗ್ರಾಮಕ್ಕೆ ಪಸರಿಸುವುದರಲ್ಲಿ ಹಾಗೂ ವಿದ್ಯಾರ್ಥಿಗಳನ್ನು ಸಾಹಿತ್ಯ ಕ್ಷೇತ್ರದತ್ತ ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here