ರೋಟರಿ ಸಿಟಿ, ರೋಟರಿ ಎಲೈಟ್ ನಿಂದ ತಾಯಿ, ಮಗುವಿನ ಆರೋಗ್ಯ ಮಾಹಿತಿ ಶಿಬಿರ – ತಾಯಿ, ಮಕ್ಕಳ ಆರೋಗ್ಯ ದೇಶದ ಪ್ರಗತಿಯ ಸಂಕೇತ-ಡಾ.ಅರ್ಚನಾ ಕಾವೇರಿ

0

ಪುತ್ತೂರು: ತಾಯಿ ಮತ್ತು ಮಕ್ಕಳ ಆರೋಗ್ಯ ದೇಶದ ಪ್ರಗತಿಯ ಸಂಕೇತವಾಗಿದ್ದು, ಸ್ತ್ರೀ ಸಾಕ್ಷರತೆಯಿಂದ ಮಾತ್ರ ತಾಯಿ ಮಗು ಆರೋಗ್ಯದ ಜಾಗೃತಿ ಸಾಧ್ಯ ಎಂದು ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಅರ್ಚನಾ ಕಾವೇರಿ ಬಿ. ಹೇಳಿದರು.

ರೋಟರಿ ಕ್ಲಬ್ ಪುತ್ತೂರು ಸಿಟಿ, ರೋಟರಿ ಕ್ಲಬ್ ಪುತ್ತೂರು ಎಲೈಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗಾಗಿ ಮಂಗಳವಾರ ರೋಟರಿ ಮನಿಷಾ ಹಾಲ್ ನಲ್ಲಿ ನಡೆದ ತಾಯಿ ಮತ್ತು ಮಗುವಿನ ಆರೋಗ್ಯ ಮಾಹಿತಿ ಶಿಬಿರದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ತಾಯಿ ಆರೋಗ್ಯವಂತರಾಗಿದ್ದಾಗ ಮಾತ್ರ ಮಗು ಆರೋಗ್ಯದಿಂದ ಇರಲು ಸಾಧ್ಯ, ಹೆಣ್ಣು ಮಕ್ಕಳು ಹದಿಹರೆಯ ವಯಸ್ಸಿನಿಂದಲೇ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ರಕ್ತಹೀನತೆ ದೂರವಾಗಿಸಿ, ಪೌಷ್ಠಿಕತೆಯನ್ನು ವೃದ್ಧಿಸುವ ಆಹಾರ ಸೇವನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಲತಾರವರು ಮಾತನಾಡಿ, ಮಹಿಳಾ‌ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲಾ ಕಾರ್ಯಗಳಿಗೆ ರೋಟರಿ ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ರೋಟರಿ ವಲಯ 4 ರ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಅವರು ಮಾತನಾಡಿ, ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆ ಆರೋಗ್ಯ,‌ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಶ್ರಮಿಸುತ್ತಿದೆ. ಜಗತ್ತಿನಾದ್ಯಂತ ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿಯ ಪಾಲು ಬಲು ದೊಡ್ಡದು. ಈ ಬಾರಿ ಎಲ್ಲಾ ವರ್ಗದಲ್ಲಿಯೂ ಭರವಸೆ ಮೂಡಿಸುವ ದೊಡ್ಡ ಕಾರ್ಯ ರೋಟರಿಯಿಂದ ನಡೆಯುತ್ತಿದೆ ಎಂದರು.
ಇದೇ ವೇಳೆ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಅರ್ಚನಾ ಕಾವೇರಿ ಬಿ.ರವರನ್ನು ಸನ್ಮಾನಿಸಲಾಯಿತು.
ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಭಾರತಿ, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ವೇದಾವತಿ, ರೋಟರಿ ಎಲೈಟ್ ಕಾರ್ಯದರ್ಶಿ ಆಸ್ಕರ್ ಆನಂದ್, ರೋಟರಿ ಸಿಟಿ ಕಾರ್ಯದರ್ಶಿ ಶ್ಯಾಮಲಾ‌ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆ ವಹಿಸಿದ್ದ ರೋಟರಿ ಪುತ್ತೂರು ಸಿಟಿಯ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪುತ್ತೂರು ಎಲೈಟ್ ನ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕಬಕಕಾರ್ಸ್ ವಂದಿಸಿದರು. ಮೌನೇಶ ವಿಶ್ವಕರ್ಮ ಕಾರ್ಯಕ್ರಮ‌ ನಿರ್ವಹಿಸಿದರು.

LEAVE A REPLY

Please enter your comment!
Please enter your name here